Thursday, 7 January 2016

ಲಕ್ಷ್ಮೀನಾರಾಯಣ ಭಾಗ ಒಂದು

ಇದೊಂದು ಕಥೆ ಮಾತ್ರ. ನಿಜವಾದ ಸನ್ನಿವೇಶಗಳಿಗೆ ಯಾವುದೇ ಹೋಲಿಕೆ ಇದ್ದಲ್ಲಿ ದಯವಿಟ್ಟು ಕ್ಷಮಿಸಿ.

ಶೂನ್ಯಕ್ಕೆ ದೃಷ್ಟಿ ನೆಟ್ಟು ಮನದಾಳದ ಆಲೋಚನಾ ಲಹರಿಯನ್ನು ಹತ್ತಿಕ್ಕಲು ಶತಾಯಗತಾಯ ಪ್ರಯತ್ನಿಸುತ್ತಿದ್ದ. ಭೋರ್ಗರೆಯುತ್ತಿರುವ ಸಾಗರದ ಅಲೆಗಳು ಬಂದು ಬಂಡೆಗೆ ಅಪ್ಪಳಿಸುತ್ತಿರುವ ಶಬ್ದ ಕೂಡ ಅವನ ಮನಸ್ಸಿನ ಕಲರವವನ್ನು ಹತ್ತಿಕ್ಕಲು ವಿಪಲವಾಗಿದ್ದವು. ನಿರ್ಲಿಪ್ತತೆಯ ಭಾವ ಅವನ ಕಣ್ಣಂಚಿನಲ್ಲಿ ಎದ್ದು ಕಾಣುತ್ತಿತ್ತು. ಅಂಕಲ್ ಅಂಕಲ್ ಸ್ವಲ್ಪ ಬಾಲ್ ಕೊಡಿ ಅಂಕಲ್ ಅನ್ನೋ ಮಗುವಿನ ಕೂಗು ಅವನನ್ನ ಬಲವಂತವಾಗಿ ಅವನ ಯೋಚನೆಗಳಿಂದ ಆಚೆ ತಂದಿತ್ತು. ಚೆಂಡನ್ನು ಮಗುವಿಗೆ ಎಸೆದು ಹಾಗೆಯೇ ಆ ಮಕ್ಕಳ ಆಟವನ್ನು ನೋಡುತ್ತಾ ಮತ್ತೆ ಅದೇ ನಿರ್ವಿಕಾರದ ಸಾಗರದಲ್ಲಿ ಮುಳುಗಿದ. ಸಾಗರದಲ್ಲಿ ಸಮಾಧಿಯಾಗಲು ಅಣಿಯಾಗಿದ್ದ ಸೂರ್ಯ ಇವನನ್ನೊಮ್ಮೆ ನೋಡಿ ಅಣಕಿಸಿ ನಕ್ಕಂತೆ ಭಾಸವಾಯಿತು. ದಿನಾ ಹುಟ್ಟಿ ದಿನಾ ಸಾಯೋ ಸೂರ್ಯನ ಬದುಕೇ ಎಷ್ಟೋ ಮೇಲು ಅನಿಸಿಬಿಟ್ಟಿತ್ತು ಆತನಿಗೆ. ಹಾಗೆಯೇ ಬಂಡೆಯ ಮೇಲೆ ಕಾಲು ಚಾಚಿ ನಿದ್ರಾದೇವಿಗೆ ಶರಣಾಗಲು ಯತ್ನಿಸುತ್ತಿದ್ದ ಅವನನ್ನು ಅವನ ಜೀವನದ ಕಹಿ ಸತ್ಯಗಳು ಕಾಡುತ್ತಿದ್ದವು.

ಮಲೆನಾಡಿನ ಒಂದು ಚಿಕ್ಕ ಹಳ್ಳಿಯಲ್ಲಿ ಒಂದು ಬ್ರಾಹ್ಮಣ ಕುಟುಂಬದಲ್ಲಿ ಆಗಿತ್ತು ಈತನ ಜನನ. ಇವನು ಮುಂದೆ ಲಕ್ಷ್ಮಿಯನ್ನು ಒಲಿಸಿಕೊಳ್ತಾನೆ ಇವನಿಗೆ ಲಕ್ಷ್ಮೀನಾರಾಯಣ ಅಂತ ಹೆಸರಿಡಿ ಅಂತ ಯಾರೋ ಜ್ಯೋತಿಷಿ ಹೇಳಿದ್ದರಂತೆ. ಅಲ್ಲಿಂದ ಶುರುವಾದ ಲಕ್ಷ್ಮೀನಾರಾಯಣನ ಬದುಕು ಸಿಹಿ ಘಟನೆಗಳನ್ನ ನೋಡಿದ್ದು ತುಂಬಾ ಕಮ್ಮಿ. ಅಂಥಾ ಸ್ಥಿತಿವಂತರಲ್ಲದ ಕುಟುಂಬದಲ್ಲಿ ಹುಟ್ಟಿದ್ದ ಲಕ್ಷ್ಮೀನಾರಾಯಣನ ಅಪ್ಪನಿಗಿದ್ದಿದ್ದು ಒಂದು ಎಕರೆ ಅಡಿಕೆ ತೋಟವಷ್ಟೆ. ಅಪ್ಪ ಕುಡುಕ. ಬುದ್ದಿ ಬಂದಾಗಿನಿಂದಲೂ ಅವನು ನೋಡಿದ್ದು ಬರೀ ಅಪ್ಪ ಅಮ್ಮನ ಜಗಳವಷ್ಟೆ. ಇದ್ದ ತೋಟವನ್ನು ಸರಿಯಾಗಿ ನೋಡಿಕೊಳ್ಳದ ಅಪ್ಪ ದಿನ ಕುಡಿದು ಅಮ್ಮನಿಗೆ ಬಾರಿಸುತ್ತಿದ್ದ. ದಿನಾ ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದ ಅಮ್ಮ ಇವನಿಗೆ ಏನು ತಾನೇ ಪ್ರೀತಿ ತೋರಿಯಾಳು. ಈತನ ಬಾಲ್ಯದ ಚಿಕ್ಕ ಪುಟ್ಟ ಆಸೆಗಳನ್ನ ನೆರವೇರಿಸುವ ಯಾವುದೇ ಹಂಬಲ ಆಸಕ್ತಿ ಅವರಿಗಿರಲಿಲ್ಲ. ಗಂಡ ಕೊಡುತ್ತಿದ್ದ ಅಲ್ಪ ಸ್ವಲ್ಪ ದುಡ್ಡಿನಲ್ಲಿ ತನ್ನ ಸಂಬಧಿಕರೆದುರು ಮರ್ಯಾದೆ ಉಳಿಸಿಕೊಳ್ಳಲು ಒದ್ದಾಡುತ್ತಿದ್ದ ಅಮ್ಮ ಇವನು ಜಾಸ್ತಿ ಹಟ ಮಾಡಿದರೆ ನಾಲ್ಕು ಬಾರಿಸ್ತ ಇದ್ಲು ಅಷ್ಟೆ. ಇನ್ನು ಸಂಬಧಿಕರೊ ಇವನಪ್ಪ ಸರಿ ಇಲ್ಲ ಅದ್ಯಾವ್ದೋ ಹುಡುಗಿಯನ್ನ ಇಟ್ಕೊಂಡಿದಾನೆ ಅಂತ ಇವನೆದುರೇ ಮಾತಾಡಿ ನಗ್ತಾ ಇದ್ರೆ ಹೊರತು ಇವನ ಆಸೆಗಳಿಗೆ, ಬಾಲ್ಯದ ಕನಸುಗಳಿಗೆ ಸಹಾಯವಾಗಿ ನಿಂತವರು ತುಂಬಾ ಕಡಿಮೆ.

ಚಿಕ್ಕಂದಿನಲ್ಲೇ ತುಂಬಾ ಚುರುಕಾಗಿದ್ದ ಲಕ್ಷ್ಮೀನಾರಾಯಣ ವಿಷಯಗಳನ್ನ ಚೆನ್ನಾಗಿ ಗ್ರಹಿಸುತ್ತಿದ್ದ. ಇವನಿಗೆ ಆರು ವರ್ಷ ತುಂಬಿದರೂ ಶಾಲೆಗೆ ಸೇರಿಸುವ ಯಾವುದೇ ಆಸಕ್ತಿಯನ್ನ ಅಪ್ಪ ತೋರದಿದ್ದಾಗ ಯಾರೋ ತಿಳಿದವರು ಇವರಪ್ಪನಿಗೆ ಕರೆದು "ಅವನನ್ನ ಶಾಲೆಗಾದ್ರೂ ಸೇರಿಸು ಮಾರಾಯ ಪಾಪ ಮಗು ಚುರುಕು ಉಂಟು ಹುಡುಗ" ಅಂತ ಹೇಳಿದ ಮೇಲೆ ಅದೇ ಊರಿನಲ್ಲಿದ್ದ ಸರ್ಕಾರಿ ಶಾಲೆಗೆ ಸೇರಿಸಿದ್ರು ಅವನನ್ನ. ಓದಿನಲ್ಲಿ ಆಟದಲ್ಲ್ಲಿ ಎಲ್ಲದರಲ್ಲೂ ಚುರುಕಾಗಿದ್ದ ಲಕ್ಷ್ಮೀನಾರಾಯಣನಿಗೆ ಶಾಲೆಯಲ್ಲಿ ಆದದ್ದು ಕೂಡ ಕಹಿ ಅನುಭವಾನೆ . ಅದೇ ಊರಿನ ಶ್ರೀಮಂತ ಒಕ್ಕಲಿಗರ ಮನೆಯ ಹುಡುಗಿ ಇವನಿಗೆ ಎಲ್ಲಾ ವಿಷಯದಲ್ಲೂ ಪ್ರತಿಸ್ಪರ್ದಿ. ಇವನಷ್ಟೇ ಚುರುಕಾಗಿದ್ದ ಆ ಹುಡುಗಿ ಎಲ್ಲದರಲ್ಲೂ ಮೊದಲು ಬರಬೇಕೆಂಬುದು ಆ ಶಾಲೆಯ ಮಾಸ್ಟರ್ ಆಸೆ. ಹಾಗಾಗಿ ಇವನ ಬುದ್ದಿವಂತಿಕೆಗೆ ಭೇಷ್ ಅನ್ನಿಸಿಕೊಂಡಿದ್ಡಕಿಂತ ಬೈಸಿಕೊಂಡಿದ್ದೆ ಜಾಸ್ತಿ. ಶಾಲೆಯಲ್ಲಿ ನೆಡೆಯುವ ಎಲ್ಲಾ ಸ್ಪರ್ದೆಗಳಲ್ಲೂ ಇವನಿಗೆ ಎರಡನೇ ಸ್ಥಾನ. ಕೊನೆಗೆ ಪರೀಕ್ಷೆಯಲ್ಲೂ ಎರಡನೇ ಸ್ಥಾನ. ಹೀಗೇ ಅವನ ಯೋಗ್ಯತೆಗಳಿಂದ ವಂಚಿತಗೊಂಡ್ರು ಛಲ ಬಿಡದೆ ತನ್ನ ಪ್ರಯತ್ನಗಳನ್ನ ಮುಂದುವರೆಸಿದ್ದ ಲಕ್ಷ್ಮೀನಾರಾಯಣ. ಹಾಗೂ ಹೀಗೂ ಏಳನೇ ತರಗತಿಯರೆಗೂ ಬಂದು ತಲುಪಿದಾಗ ನೆಡೆದಿತ್ತು ಆ ದುರ್ಘಟನೆ.

ಅಮ್ಮನ ಅಸ್ತಂಗತ. ಇತ್ತೀಚೆಗೆ ತಾರಕಕ್ಕೇರಿದ್ದ ಅಪ್ಪನ ಕಾಟ ತಡೆಯಲಾರದೆ ಅಮ್ಮ ನೇಣಿಗೆ ಶರಣಾಗಿದ್ದಳು. ಅಲ್ಲಿಯವರೆಗೂ ಬದುಕಿದಿರೋ ಇಲ್ಲವೋ ಎಂದು ಕೇಳದಿದ್ದ ಸಂಬಂಧಿಕರೆಲ್ಲರೂ ಜಮಾಯಿಸಿದ್ದರು ಮನೆಯಲ್ಲಿ. ಅದರಲ್ಲಿ ಒಂದು ಗುಂಪು ಇದು ಆತ್ಮಹತ್ಯೆಯಲ್ಲ ಕೊಲೆ ಎಂಬ ನಿರ್ಧಾರಕ್ಕೆ ಬಂದು ಪೋಲೀಸ್ರನ್ನು ಕರೆಸಿ ಕಂಪ್ಲೇಂಟ್ ಸಹ ಮಾಡಿದ್ದರು. ಯಾರೋ ಪುಣ್ಯಾತ್ಮರು ಪಾಪ ಆಪ್ಪ ಜೈಲೆಗೆ ಹೋದ್ರೆ ಮಗು ಅನಾಥ ಆಗಿ ಬಿಡುತ್ತೆ ಅಂತ ಬೇಲ್ ಕೊಟ್ಟು ಅವನ ಅಪ್ಪನನ್ನು ಕಾಪಾಡಿದ್ದರು . ಇದ್ದಿದರಲ್ಲಿ ಲಕ್ಷ್ಮೀನಾರಾಯಣನಿಗೆ ಸ್ವಲ್ಪ ಪ್ರೀತಿ ತೋರಿಸಿದ್ದು ಅಂದ್ರೆ ಮನೆಗೆ ಕೆಲಸಕ್ಕೆ ಅಂತ ಬರುತ್ತಿದ್ದ ಆಳುಗಳು. ಇನ್ನೆಲ್ಲಾ ಬಂಧುಗಳೂ ಅಮ್ಮನ ಕಾರ್ಯ ಮುಗಿಸಿ ಹಿಂತಿರುಗಿ ಹೋದವರು ಯಾರು ಮನೆ ಕಡೆ ತಲೆ ಹಾಕಿರಲಿಲ್ಲ. ಇನ್ನೆಲ್ಲಿ ಮಗು ಜವಾಬ್ದಾರಿ ನಮ್ಮ ತಲೆ ಮೇಲೆ ಬರುತ್ತೋ ಅನ್ನೋ ತಲೆಬಿಸಿ ಅವರಿಗೆ. ಅಮ್ಮ ಇದ್ದಾಗ ಊಟವಾದರೂ ಸರಿಯಾದ ಸಮಯಕ್ಕೆ ಸಿಗುತ್ತಿದ್ದ ಲಕ್ಷ್ಮೀನಾರಾಯಣನಿಗೆ ಈಗ ಅದಕ್ಕೂ ಪರದಾಟ. ಬಂಧುಗಳಲ್ಲೇ ದೊಡ್ಡವರೊಬ್ಬರು ಒಂದು ಆಳಿಗೆ ಇವನಿಗೆ ಊಟ ತಿಂಡಿ ಮಾಡಿಕೊಡೋಕೆ ಹೇಳಿದ್ದರು. ಹೀಗೆ ಆಳು ಮಾಡಿದ ಊಟ ತಿನ್ನುತ್ತಾ ಇದ್ದ ಇವನನ್ನು ಜಾತಿ ಬಿಟ್ಟವನು ಎಂದು . ಇಡೀ ಬ್ರಾಹ್ಮಣ ಸಮುದಾಯ ಗುರುತಿಸಿಬಿಟ್ಟಿತ್ತು.

ಹೀಗೆ ಇರೊಬದ್ಲು ಪಟಾಶಾಲೆಗಾದ್ರೂ ಸೇರಿಸಿ ಮಠದವರು ನೋಡಿಕೊಳ್ತಾರೆ ಅಂತ ಯಾರೋ ಹೇಳಿದ್ದನ್ನು ಕೇಳಿದಾಗ ನಾನು ಮಂತ್ರ ಎಲ್ಲಾ ಕಲಿಯಲ್ಲ ನಾನು ಹೋದ್ರೆ ಸ್ಕೂಲ್ ಗೆ ಹೋಗೋದು ಅಂತ ಓಡಿದ್ದ ಲಕ್ಷ್ಮೀನಾರಾಯಣ. ಈ ಎಲ್ಲಾ ಪರಿಸ್ಥಿತಿಗಳ ನಡುವೆ ಆರಾಮಾಗಿ ಏಳನೇ ತರಗತಿ ಮುಗಿಸಿ ಮುಂದಕ್ಕೆ ಹೋಗಿದ್ದ ಲಕ್ಷ್ಮೀನಾರಾಯಣ. ಈಗ ಅವನ ಜೀವನದಲ್ಲಿ ಇದ್ದಿದ್ದು ಬರೆ ಶಾಲೆ, ಸಹಪಾಠಿಗಳು ಮಾತ್ರ. ಅಪ್ಪ ಬೆಳಿಗ್ಗೆ ಕುಡಿಯೋಕೆ ಶುರು ಮಾಡಿದ್ರೆ ರಾತ್ರಿವರೆಗೂ ಕುಡಿತ ಇದ್ದ. ಹಾಗೂ ಹೀಗೂ ಹತ್ತನೇ ತರಗತಿಯವರೆಗೂ ಬಂದು ತಲುಪಿದ್ದ ಲಕ್ಷ್ಮೀನಾರಾಯಣನಿಗೆ ನಾಟಕದಲ್ಲಿ ರಾಜ್ಯಮಟ್ಟದಲ್ಲಿ ಅತ್ಯುತ್ತಮ ನಟ ಅವಾರ್ಡ್ ಸಿಕ್ಕಿತ್ತು. ಆದರೆ ಅದಕ್ಕೆ ಸಂತೋಷಿಸುವ ಯಾವ ಸಂಗಾತಿಯೂ ಆವನೊಡನಿರಲಿಲ್ಲ .  ಹತ್ತನೇ ತರಗತಿಯಲ್ಲಿ ಚೆನ್ನಾಗಿ ಓದಿ ಸ್ಚೂಲ್‌ಗೆ ಫರ್ಸ್ಟ್ ಬಂದಿದ್ದ ಲಕ್ಷ್ಮೀನಾರಾಯಣನಿಗೆ ಮುಂದಿನ ಓದು ಹೇಗೆ ಅನ್ನೋ ಚಿಂತೆ ಹತ್ತಿಕೊಂಡಿತ್ತು.

ಕಾಲೇಜ್ಗೆ ಹೋಗಬೇಕಂದರೆ ಊರು ಬಿಡಬೇಕು. ಕುಡಿದು ಕುಡಿದು ಹತ್ತಾರು ರೋಗಗಳನ್ನು ಮೈಗೆ ಅಂಟಿಸಿಕೊಂಡಿರುವ ಅಪ್ಪ ಬೇರೆ. ಕಾಲೇಜ್ಗೆ ಕಟ್ಟೋಕೆ ಹಣಾನು ಇವನ ಹತ್ರ ಇರಲಿಲ್ಲ. ಬ್ರಾಹ್ಮಣರಿಗೆ ಯಾವ ಗೋವೆರ್ನ್‌ಮೇಂಟು, ಸಂಘ ಸಂಸ್ಥೆಗಳೂ ಸಹಾಯ ಮಾಡಲ್ಲ. ಮಂತ್ರ ಕಲಿಯುವುದಾದರೆ ಮಠದವರು ಸಹಾಯ ಮಾಡ್ತಾರೆ ಆದರೆ ಅದು ಇವನಿಗೆ ಇಷ್ಟ ಇಲ್ಲ. ಬ್ಯಾಂಕ್ನಲ್ಲಿ ಸಾಲ ಕೇಳೋಕೆ ಇವನ ಹತ್ತಿರ ಏನೂ ಇಲ್ಲ. ಮುಂದೆ ಏನು ಹೇಗೆ ಅಂತ ಕುಳಿತಿದ್ದ ಇವನಿಗೆ ದೊಡ್ಡವರೊಬ್ಬರು ಓದಿ ಯಾವ ದೇಶ ಉದ್ದಾರ ಮಾಡ್ಬೇಕು ನೀನು?? ಅಪ್ಪನ್ನ ನೋಡಿಕೊಂಡು ಮನೆಯಲ್ಲೇ ಇರೋ ತೋಟದಲ್ಲಿ ಕೃಷಿ ಮಾಡು, ಜೀವನ ಕಲಿ ಅಂದಾಗ ಆಯ್ತು  ಅನ್ನದೆ ಬೇರೆ ದಾರಿಯಿರಲಿಲ್ಲ ಲಕ್ಷ್ಮೀನಾರಾಯಣನಿಗೆ.

ತೋಟವೇಲ್ಲಾ ತಿರುಗಾಡಿದಾಗ ಲಕ್ಷ್ಮೀನಾರಾಯಣನಿಗೆ ಅರಿವಾಗಿದ್ದು ಅಲ್ಲಿ ಸರಿ ಇದ್ದಿದ್ದು ಯಾವುದೂ ಇರಲಿಲ್ಲ. ಯಾವುದೇ ಆರೈಕೆ ಇಲ್ಲದೆ ಗಿಡ ಮರಗಳು ಸೂರ್ಯನ ಕೋಪಕ್ಕೆ ತುತ್ತಾಗಿ ಬಾಡಿಹೋಗಿದ್ದವು. ಮೊಣಕಾಲೆತ್ತರ ಬೆಳೆದಿರುವ ಹುಲ್ಲು ಭೂಮಿಯ ಸಾರವನ್ನೆಲ್ಲಾ ಹೀರಿ ಅಡಿಕೆ ಸಸಿಗಳ ಬೆಳವಣಿಗೆಗೆ ಮಾರಕವಾಗಿದ್ದವು. ಕೊಲೆವೊಂದು ಕಡೆ ಮಳೆಯ ನೀರನ್ನು ಬಿಟ್ಟು ಇನ್ಯಾವ ನೀರನ್ನು ಕಾಣದ ಅಡಿಕೆ ಸಸಿಗಳು ಸುಟ್ಟು ಕರಕಲಾಗಿದ್ದವು. ಇಡೀ ತೋಟವನ್ನು ತಿರುಗಿದ ಲಕ್ಷ್ಮೀನಾರಾಯಣನಿಗೆ ಅನಿಸಿದ್ದು  ಈ ತೋಟವನ್ನು ಮತ್ತೆ ಸಹಜ ಸ್ಥಿತಿಗೆ ತಂದು ಸರಿಯಾದ ಆದಾಯ ಪಡೆಯಲು ಕಮ್ಮಿ ಅಂದರೂ ಐದು ವರ್ಷ ಬೇಕು ಅಂತ. ಆದರೂ ಛಲ ಬಿಡದ ಲಕ್ಷ್ಮೀನಾರಾಯಣ ಅದನ್ನು ಮತ್ತೆ ಸಹಜ ಸ್ಥಿತಿಗೆ ತರಲು ಮನಸ್ಸಿನಲ್ಲಿಯೇ ಸಜ್ಜಾಗತೊಡಗಿದ.

ಸ ಶೇ ಷ
ಪ್ರಿಯಾಂಕ್ ರಾವ್ 

1 comment: