Friday, 21 June 2013

ಸಿಂಪಲ್ ಆಗಿ ಒಂದು ಊರು ಸ್ಟೋರಿ !! ( ಭಾಗ ೨ )

ಹಾಗೇ ದೆವ್ವಗಳನ್ನು ಹುಡುಕುತ್ತಾ ಹೆಜ್ಜೆ ಹಾಕುತ್ತಿದ್ದ ನನಗೆ ನನ್ನ ಕಾಲ್ನಡಿಗೆಯ ಶಬ್ದವೇ ಕರ್ಣ ಕಠೋರವಾಗಿ ಕೇಳಿಸ್ತಾ ಇತ್ತು . ಗಾಳಿಗೆ ತೂಗುಯ್ಯಾಲೆ ಆಡುತಿದ್ದ ಗಿಡಗಳ ಶಬ್ದವೇ ಸಾಕು ಒಬ್ಬ ಹೇಡಿಗೆ ಭಯ ಪಡಿಸಲು. ಚಿಕ್ಕಪ್ಪ ಯಾವಾಗ್ಲೂ ಹೇಳೋರು " ಹೆದರಿದವನಿಗೆ ಹೆದೆರಿಸುತ್ತೆ ಹೇಡಿ ದೆವ್ವ" ಅಂತ . ಯಾವ್ದೋ ದೆವ್ವ ಪಿಶಾಚಿ ಬಗ್ಗೆ ಭಯ ಪಟ್ಟುಕೊಂಡು ರಾಮ ನಾಮ ಜಪಿಸುತ್ತಾ ಸಾಗುವ ಹೇಡಿಗೆ ಈ ಗಿಡ ಮರಗಳು , ಜೀರುಂಡೆ ಬಿಬ್ರಿಗಳೇ ಸಾಕು ಪ್ರಾಣ ತೆಗೆಯೋಕೆ . ಸೂರ್ಯನ ಬೆಳಕಲ್ಲಿ ನಯನ ಮನೋಹರವಾಗಿ ಕಾಣುವ ಈ ಕಾಡು , ಗಿಡ ಮರಗಳು ರವಿ ಮಾಮ ಮರೆಯಾಗುತ್ತಿದ್ದಂತೆಲೆ ರೌದ್ರ ರೂಪ ತಾಳಿ ಜನರನ್ನ ಭಯಪಡಿಸೋಕೆ ಶುರು ಮಾಡಿ ಬಿಡ್ತಾವೆ . ಬೆಳದಿಂಗಳಲ್ಲಿ ಮರಗಳು ನಿರ್ಮಿಸುವ ಬೃಹದಾಕಾರದ ನೆರಳುಗಳು ದೂರದಿಂದ ಬ್ರಹ್ಮ ರಾಕ್ಷಸ ನಮ್ಮನ್ನು ತಿನ್ನಲು ಕಾಯ್ತಾ ಇರುವ ಹಾಗೆ ಕಾಣುತ್ತೆ . ಆ ದಿನ ನನ್ನ ಲಕ್ ಚೆನ್ನಾಗಿತ್ತು ಅನ್ಸುತ್ತೆ ಆಕಾಶದಲ್ಲಿ  ಕಾರ್ಮೋಡಗಳು  ಆವರಿಸಿ ಚಂದಮಾಮನ ಬೆಳಕನ್ನು ತಡೆ ಹಿಡಿತ ಇದ್ವು .

ಆ ಟಾರ್ ರೋಡ್ ನಲ್ಲಿ ಇರುವ ಹೊಂಡ ಗುಂಡಿಗಳನ್ನು ಅವಾಯ್ಡ್ ಮಾಡ್ಕೊಂಡು ( ಎರಡು ಅಡಿ ಅಂತರದಲ್ಲಿ ಏನಿದೆ ಅಂತ ಗೊತ್ತಾಗ್ದೇ ಇರೋವಷ್ಟು ಕಗ್ಗತ್ತಲು), ನಾವು ಶಾಲೆಗೆ ದಿನ 4 ಕಿ ಮೀ ನೆಡಿತ ಇದ್ದಿದನ ಜ್ಞಾಪಿಸಿಕೊಂಡು ಅದೇ ಉತ್ಸಾಹದಲ್ಲಿ ಮುಂದೆ ಹೆಜ್ಜೆ ಹಾಕ್ತಾ ಇದ್ದೆ. ದಿನಾ ಬೆಳಿಗ್ಗೆ 7 ಘಂಟೆಗೆ ಎದ್ದು ರೆಡೀ ಆಗಿ 8 ಘಂಟೆಗೆ ಮನೆ ಬಿಟ್ರೆ ದಾರಿಯಲ್ಲಿ ಸಿಗುವ ಎಲ್ಲಾರ ಮನೆಯಲ್ಲಿ ಸ್ವಲ್ಪ ಸ್ವಲ್ಪ ಮಾತಾಡಿ , ದಾರಿಯಲ್ಲಿ ಜೊತೆಗೆ ಸೇರ್ಕೊಳ್ತ ಇದ್ದ ಸ್ನೇಹಿತರಿಗೆ ಕಾದು ಅವರ ಜೊತೆ ಹರಟೆ ಹೊಡ್ಕೊಂಡು , ಯಾವ ದಾರಿಯಲ್ಲಿ ಹೋಗೋದು ಅಂತ ಜಗಳ ಆಡ್ಕೊಂಡು ಕೊನೆಗೂ ಒಟ್ಟಿಗೆ ಶಾಲೆ ಸೇರುವಾಗ 9:15 ಇಲ್ಲಾ 9:30 ಆಗಿರುತ್ತೆ . ಬೇಗ ಹೋದ್ರೆ ಬೇರೆ ಫ್ರೆಂಡ್ಸ್ ಜೊತೆ ಮಾತಾಡೋಕೆ ಸ್ವಲ್ಪ ಟೈಮ್ ಸಿಗುತ್ತೆ ಅನ್ನೋದು ನಮ್ಮ ಅಭಿಪ್ರಾಯ . ಹೀಗೆ ಆಲೋಚನಾ ಲಹರಿಯಲ್ಲಿ ಮುಳುಗಿದ್ದ ನನ್ನ, ಶ್ವಾನವೊಂದು ತನ್ನ ಡ್ಯೂಟೀ ನಾ ನಿಭಾಯಿಸೋಕೆ ಎಚ್ಚರಿಸಿತು.

ನಾಯಿ ಬೊಗಳುತ್ತಿದೆ ಅಂದ್ರೆ ಯಾವ್ದೋ ಮನೆ ಇದೆ ಅಂತ ಅರ್ಥ . ಅದ್ರಲ್ಲಿ ಸರ್ಪ್ರೈಸಿಂಗ್ ಏನು ಇರ್ಲಿಲ್ಲ . ಯಾಕೆಂದ್ರೆ ಬಸ್ ಸ್ಟ್ಯಾಂಡ್ ನಿಂದ ಅರ್ಧ ಕಿ ಮೀ ದೂರದಲ್ಲಿ ಒಂದು ಮನೆ ಇದೆ ಅನ್ನುವುದು ಗೊತ್ತಿತ್ತು . ಅದೊಂಥರಾ ಪಿಟ್ ಸ್ಟಾಪ್ ನಮಗೆ. ಅಲ್ಲೇ ನಿಂತು ಸ್ವಲ್ಪ ಸುಧಾರಿಸಿಕೊಳ್ಳೋಕೆ ಶುರು ಮಾಡ್ದೆ. ಬರ್ತಾ ಇದ್ದ ನನ್ನ ಏದೂಸಿರನ್ನು ಹತೋಟಿಗೆ ತರಲು ಕೆಲ ನಿಮಿಷಗಳು ಬೇಕಾಯ್ತು. ಅಷ್ಟು ಹೊತ್ತಿಗೆ ನನ್ನ ಚಳಿ ಕಮ್ಮಿ ಆಗಿ ಮೈ ಬೆವರಲು ಶುರು ಆಗಿತ್ತು. ಆಗುತ್ತಿದ್ದ ಸುಸ್ತನ್ನು ಮನಸ್ಸಿಗೆ ಹಕ್ಕೊಲ್ದೇ ಬೆಂಗಳೂರು ನಮ್ಮನ್ನ ಹಾಳು ಮಾಡಿಬಿಟ್ಟಿದೆ ಅಂತ ಮನಸ್ಸಿನಲ್ಲೇ ಬೈದುಕೊಂಡು ಮುಂದೆ ಹೆಜ್ಜೆ ಇಡಲು ಶುರು ಮಾಡಿದೆ.

10 ಮೀಟರ್ ನೆಡೆದಿದ್ದೆ ಅನ್ಸುತ್ತೆ , ದೂರದಲ್ಲಿ ಯಾವುದೋ ಒಂದು ಬಿಳಿ ಬಣ್ಣದ ಆಕಾರ ಬಿರುಸಾಗಿ ಬರುತ್ತಾ ಇರುವ ಹಾಗೆ ಭಾಸವಾಯ್ತು. ಕತ್ತಲಲ್ಲಿ ಮಸುಕು ಮಸುಕಾಗಿ ಕಾಣಿಸಿತ್ತಿದ್ದ ಆಕಾರ ನನ್ನ ಎದೆ ಬಡಿತವನ್ನು ಹೆಚ್ಚಿಸುವಲ್ಲಿ ಯಶಸ್ವಿಯಾಗಿತ್ತು.  ಕೊನೆಗೂ ಯಾವುದೋ ದೆವ್ವ ನನ್ನ ಹಿಡಿಯೋಕೆ ಬರ್ತಾ ಇದೆ , ಛೇ ನಾನು ದೆವ್ವದ ಬಗ್ಗೆ ಅಷ್ಟು ಹಗುರವಾಗಿ ಅಂದುಕೊಳ್ಳಬಾರ್ದಿತ್ತು ಅಂತ ಅನ್ನಿಸ್ತು . ಮನಸ್ಸು ಗಟ್ಟಿ ಮಾಡ್ಕೊಂಡು ರಾಮ ನಾಮ ಜಪಿಸ್ಥ ಮುಂದೆ ಹೆಜ್ಜೆ ಇಡೋಕೆ ಶುರು ಮಾಡಿದೆ . ಆಕಾರ ನೆಡೆಯುತ್ತಿದ್ದ ಬಿರುಸಿಗೆ 2 ನಿಮಿಷದಲ್ಲಿ ಆಲ್‌ಮೋಸ್ಟ್ ನನ್ನ ಹತ್ರ ಬಂದುಬಿಟ್ಟಿತ್ತು . ಢವ ಢವ ಅಂತ ಇದ್ದ ಎದೆಯನ್ನ ಒತ್ತಿ ಹಿಡಿದು ಧೈರ್ಯ ಮಾಡಿಕೊಂಡು ಅವರ ಮುಕ ನೋಡಿದೆ. ( ನಮ್ಮ ಅಜ್ಜಿ ಹೇಳಿದ ಹಾಗೆ ದೆವ್ವಗಳಿಗೆ ಕಾಲು ಹಿಂದೆ ಮುಂದೆ ಇರುತ್ತೆ ಅನ್ನೋದನ್ನ ತುಂಬಾ ಸೀರೀಯಸ್ ಆಗಿ ತಗೊಂಡು ಅಲ್ಲಿಯವರೆಗೂ ಆಕಾರದ ಕಾಲು ನೋಡಲು ಯತ್ನಿಸುತ್ತಿದ್ದೆ ಅನ್ನೋದು ಬೇರೆ ) .  ಪಕ್ಕಾದೂರಿನ ಸಾಬ್ರು ( ನಮ್ಮೋರಲ್ಲಿ ಮುಸ್ಲಿಮ್ಸ್ ಗೆ ಸಾಬ್ರು ಅಂತ ಕರೀತೀವಿ. ನೋ ಅಫೆನ್ಸ್ . ಆವ್ರಿಗೂನು ಏನು ಪ್ರಾಬ್ಲಮ್ ಇಲ್ಲ ) , ಮೋಸ್ಟ್ಲೀ ಮೊದಲನೇ ಬಸ್ ನಲ್ಲಿ ಬರೋ ಪೇಪರ್ ತರೋಕೆ ಹೋಗ್ತಿದ್ರು ಅನ್ಸುತ್ತೆ. ಬಿಳಿ ಬಟ್ಟೆ ಹಾಕಿರೋದರಿಂದ ಸ್ವಲ್ಪ ಭಯ ಪಡಿಸಿದರು ಅಷ್ಟೇ.

ನನ್ನ ಮುಖ ನೋಡಿದ ಅವರು ಯಾವುದೇ ಭಾವನೆಯನ್ನು ವ್ಯಕ್ತಪಡಿಸದೆ ಹಾಗೆ ಮುಂದಕ್ಕೆ ಹೋದ್ರು. ಮೋಸ್ಟ್ಲೀ ಗುರುತು ಸಿಗ್ಲಿಲ್ಲಾ ಅನ್ಸುತ್ತೆ. ಇಲ್ಲ ಇವತ್ತು ಇನ್ನೊಬ್ಬ ಬಕ್ರಾ ನಾ ಭಯ ಪಡಿಸಿದೆ ಅನ್ನೋ ಖುಷಿಯಲ್ಲಿ ಮುಖ ಸರಿಯಾಗಿ ನೋಡ್ಲಿಲ್ವೇನೋ ಅಂದುಕೊಂಡು ಮುಂದೆ ಹೆಜ್ಜೆ ಇಡೋಕೆ ಶುರು ಮಾಡಿದೆ. ಚಿಕ್ಕದಾಗಿ ಬೆಳಕು ಹರಿಯೋಕೆ ಶುರು ಆಗಿತ್ತು . ಜಗತ್ತಲ್ಲಿ ಸೂರ್ಯ ಮಾತ್ರ ಅನ್ನಿಸುತ್ತೆ ದಿನ ಟೈಮ್ ಗೆ ಸರಿಯಾಗಿ ಏಳೋದು ಅಂತ ಅಂದುಕೊಂಡು ಮುಂದೆ ಹೋಗ್ತಿದ್ದಾಗ್ಲೇ ಎಲ್ಲೋ ದೂರದಲ್ಲಿ ಒಂದು ಬೈಕ್ ನಾ ಶಬ್ದ ಕೇಳಿದ ಹಾಗಾಯ್ತು .  ಅಮೃತ ಸಿಕ್ಕಿದಷ್ಟು ಖುಷಿ ಆಯ್ತು ನೋಡಿ , ಜೀವನದಲ್ಲಿ ಎಲ್ಲಾ ಕಳೆದುಕೊಂಡು ಸಾಯೋಕೆ ಹೋಗ್ತಾ ಇರೋನಿಗೆ ದಾರಿಯಲ್ಲಿ ನಿಧಿ ಸಿಕ್ಕಿದ್ರೆ ಎಷ್ಟು ಖುಷಿ ಆಗುತ್ತೋ ಅಷ್ಟು ಖುಷಿ. ಕೊನೆಗೂ ಬಂದ ಅನ್ಸುತ್ತೆ ನಮ್ಮ ಅಣ್ಣ ಅಂತ ಅಂದ್ಕೊಂಡು , ಆಗ್ತಿದ್ದ ಸುಸ್ತನ್ನ ಉತ್ಸಾಹದಲ್ಲಿ ಮುಚ್ಚಿಡ್ತಾ ಮುಂದಕ್ಕೆ ದಾಪುಗಾಲು ಹಾಕೋಕೆ ಶುರು ಮಾಡ್ದೆ.

ಮೊದಲು ಕ್ಷೀಣವಾಗಿ ಕೇಳಿಸ್ತಾ ಇದ್ದ ಶಬ್ದ ನಿಧಾನವಾಗಿ ಘಾಡವಾಗ್ತಾ ಹೋಯ್ತು. ದೂರದಲ್ಲೊಂದು ಹೆಡ್ ಲೈಟ್ ಕೂಡ ಕಾಣಿಸೋಕೆ ಶುರುವಾಯ್ತು. ಬಂದೇ ಬಿಟ್ಟ ಅಂದುಕೊಂಡು ಅವನನ್ನ ಮಾತಾಡಿಸೋಕೆ ರೆಡೀ ಆದೆ. " ಬಸ್ ಬೇಗ ಬಂತ ಮಾರಾಯ , ಮೊನ್ನೆ 6 ಘಂಟೆಗೆ ಬಂದಿದ್ದ ಅದಿಕ್ಕೆ ಸ್ವಲ್ಪ ಲೇಟ್ ಆಗಿ ಬಂದೆ" ಅಂದ . ಆಗ್ತಿದ್ದ ಸುಸ್ತನ್ನು ತೋರಿಸಿಕೊಳ್ಳದೆ " ಪರವಾಗಿಲ್ಲ ಬಿಡು ನೆಡಿಯೋದೇನು ಹೊಸತಲ್ವಲ್ಲ " ಅಂದೆ. ಗಾಡಿ ಮೇಲೆ ಕೂತು ಕ್ಷೇಮ ಸಮಾಚಾರ ಮಾತಾಡ್ತಾ ಹಾಗೆ ಮುಂದೆ ಸಾಗಿದ್ವಿ. ಈ ಚಳಿಗೆ ಒಂದು ಕಾಫೀ ಸಿಕ್ಕಿದ್ರೆ ಎಷ್ಟು ಚೆನ್ನಾಗಿರ್ತಿತ್ತು ಅಂತ ಅನ್ನಿಸ್ತಿತ್ತು . ಬೈಕ್ ನ ವೇಗಕ್ಕೆ ತಂಪಾಗಿ ಮುಕಕ್ಕೆ ಬೀಸ್ತಾ ಇದ್ದ ಗಾಳಿ ಒಂದು ಹೊಸ ಹುಮ್ಮಸ್ಸು ಕೊಡ್ತಾ ಇತ್ತು.  ಬೈಕ್ ನಲ್ಲಿ 15 ನಿಮಿಷ ಅವರ ಮನೆ . ತುಂಬಾ ದೂರ ಇಲ್ದೆ ಇದ್ರೂನೂ ಅಲ್ಲಿರುವ ರೋಡಿನ ಪರಿಸ್ಥಿತಿಗೆ ಅದು ಕಡಿಮೆ ಸಮಯಾನೆ . ಆದರೂ ಇವಾಗ ಪರ್ವಾಗಿಲ್ಲ ಅವರ ಮನೆಯವರೆಗೂ ಟಾರ್ ಹಾಕಿದಾರೆ. ನಾನು ಊರಲ್ಲಿ ಇದ್ದಾಗ ಬರೀ ಜೆಲ್ಲೀ ರಸ್ತೆ .

ಬೈಕ್ ನಲ್ಲಿ ಕೂತು , ಸುತ್ತ ಮುತ್ತ ಏನಾದ್ರೂ ಬದಲಾವಣೆಗಳು ಇದೆಯಾ ಅಂತ ನೋಡುತ್ತಾ ಮನೆ ಬರುವುದನ್ನೇ ಕಾಯ್ತಾ ಇದ್ದೆ.

ಸಶೇಷ

2 comments:

  1. excellent vocabulary man ... try to get into some serious writing ...

    ReplyDelete