Friday 22 January 2016

ಲಕ್ಷ್ಮೀನಾರಾಯಣ ಭಾಗ ಮೂರು

ಹದಿನೆಂಟರ ಹರೆಯಕ್ಕೇ ತುಂಬಾ ಕಷ್ಟಗಳನ್ನ ನೋಡಿದ್ದ ಲಕ್ಷ್ಮೀನಾರಾಯಣನಿಗೆ ಒಂದು ರೀತಿಯ ಆತ್ಮ ಸ್ಥೈರ್ಯ ಬಂದಿತ್ತು. ತನ್ನೆಲ್ಲಾ ಆಸೆಗಳನ್ನ ಮನಸ್ಸಿನಲ್ಲೇ ಬಚ್ಚಿಟ್ಟು ಆರ್ಥಿಕ ಏಳಿಗೆಗಾಗಿ ಹಗಲಿರುಳೂ ಶ್ರಮಿಸಲಾರಂಭಿಸಿದ. ಊರಿನ ಕೆಲವು ಹುಡುಗರು ಇವನಿಗೆ ಆತ್ಮೀಯರಾಗಿದ್ದರು. ಸಮಯವಿದ್ದಾಗ ಹುಡುಗರನ್ನೆಲ್ಲಾ ಸೇರಿಸಿಕೊಂಡು ಕ್ರಿಕೆಟ್ ಆಡುವ ಹುಚ್ಚೊಂದು ಲಕ್ಷ್ಮೀನಾರಾಯಣನಿಗಿತ್ತು. ಇವನೊಡನಿದ್ದ ಹುಡುಗರಲ್ಲಿ ಬ್ರಾಹ್ಮಣರಿಗಿಂತ ಬೇರೆಯವರೇ ಜಾಸ್ತಿ ಇದ್ದರು. ಕೆಲವು ಕುಡಿಯುವ ಸಿಗರೇಟ್ ಸೇದುವ ಹುಡುಗರೂ ಸೇರಿಕೊಂಡಿದ್ದರು. ಅದ್ಯಾಕೋ ಅಪ್ಪನ ಜೀವನದಲ್ಲಿ ಕಂಡಿದ್ದ ಘಟನೆಗಳಿಂದ ಲಕ್ಷ್ಮೀನಾರಾಯಣ ಇವುಗಳ ಕಡೆಗೆ ಆಕರ್ಷಿತನಾಗಿರಲಿಲ್ಲ. ಅವನ ಕಣ್ಣೆದುರಲ್ಲಿ ನೆಡೆದಿರುವ ಘೋರ ಘಟೆನೆಗಳ ಭಯ ಅವನನ್ನ ಕುಡಿತದಿಂದ ದೂರವಿರಿಸಿತ್ತು. ಎಲ್ಲಾ ಬ್ರಾಹ್ಮಣರೂ ಕಳ್ಳರೇ, ಎಲ್ಲಾರು ಕದ್ದು ಮುಚ್ಚಿ ಮಾಂಸ ತಿಂತಾರೆ ಅಂತ ಇವನ ಸ್ನೇಹಿತರು ಉದಾಹರಣೆ ಸಹಿತ ಕೆಲವೊಂದು ಘಟನೆಗಳನ್ನ ಬಿಚ್ಛಿಟ್ಟಾಗ ಲಕ್ಷ್ಮೀನಾರಾಯಣ ದಂಗಾಗಿದ್ದ. ನಾನು ಅಂದುಕೊಂಡ ಸಮಾಜಕ್ಕೂ ವಾಸ್ತವ ಸಮಾಜಕ್ಕೂ ಬಹಳ ವ್ಯತ್ಯಾಸ ಇದೆ ಎಂದು ಅರಿತಾಗ ಲಕ್ಷ್ಮೀನಾರಾಯಣ ನಿಧಾನವಾಗಿ ತನ್ನ ದೃಢನಿರ್ಧಾರಗಳನ್ನ ಸಡಿಲಗೊಳಿಸಿ ಮಾಂಸಾಹಾರಕ್ಕೆ ಕೈ ಇಟ್ಟಿದ್ದ.

ಅದ್ ಹೇಗೋ ಹರಡಿಬಿಟ್ಟಿತ್ತು ಸುದ್ದಿ. ಲಕ್ಷ್ಮೀನಾರಾಯಣ ಮಾಂಸ ತಿಂತಾನಂತೆ ಅನ್ನೋ ಮಾತು ಬ್ರಾಹ್ಮಣ ಕುಟುಂಬಗಳಲ್ಲಿ ಹರಿದಾಡಲಾರಂಬಿಸಿತು. ಮೊದಲೇ ಜಾತಿಯಿಂದ ಅರ್ಧ ಹೊರಗೆ ಇಟ್ಟಿದ್ದ ಜನ ಈಗ ಅವನನ್ನು ಜಾತಿ ಬ್ರಷ್ಟನಂತೆ ಕಾಣಲಾರಂಬಿಸಿದರು. ಅಪ್ಪನಂತೆ ಮಗನೂ ಕೆಟ್ಟ ಎಂಬ ಮಾತುಗಳು ಬೇಡವೆಂದರೂ ಇವನ ಕಿವಿಗೆ ಬೀಳಲಾರಂಬಿಸಿತು. ಜೊತೆ ಸೇರುತ್ತಿದ್ದ ಒಂದಿಬ್ಬರು ಬ್ರಾಹ್ಮಣ ಹುಡುಗರಿಗೂ ಇವನ ಜೊತೆ ಸೇರದಂತೆ ತಾಕೀತಾಗಿತ್ತು. ಅವರು ಇವನಿಗಿನ್ನ ಮುಂಚೆಯೇ ಮಾಂಸ ತಿನ್ನುತಿದ್ದರೆಂಬುದು ಬೇರೆ ಪ್ರಶ್ನೆ. ಒಮ್ಮೆ ಎದುರಿಗೆ ಸಿಕ್ಕಿದ್ದ ಜಾನಕಮ್ಮನಿಗೆ ಚೆನ್ನಾಗಿದೀರಾ ಅಂತ ಕೇಳ್ದಾಗ ಅವರು ಇವನಿಗೆ ಉತ್ತರಿಸದೇ ಮುಖ ತಿರುಗಿಸಿಕೊಂಡು ಹೋಗಿದ್ರು. ಅದ್ಯಾಕೆ ಹಾಗೆ ಮುಖ ಮಾಡ್ಕೊಂಡು ಹೋಗ್ತೀರಿ?? ನಿಮ್ಮ ಗಂಡನ ರಾಸಲೀಲೆಗಳನ್ನ ಒಮ್ಮೆ ಕೇಳಿ ಅನ್ನೋವಷ್ಟು ಕೋಪ ಬಂದಿದ್ದರೂ ತನಗೆ ತಾನೇ ಸಮಾಧಾನ ಮಾಡಿಕೊಂಡು ಅಲ್ಲಿಂದ ಮುಂದೆ ನೆಡೆದಿದ್ದ ಲಕ್ಷ್ಮೀನಾರಾಯಣ.

ಮನೆಯಲ್ಲಿ ಅಪ್ಪನ ಪರಿಸ್ಥಿತಿ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿತ್ತು. ದಿನಕ್ಕೆ ಎರಡರಿಂದ ಮೂರು ಕಟ್ಟು ಬೀಡಿ ಸೇದುತ್ತಿದ್ದ ಅಪ್ಪನಿಗೆ ಹಲ್ಲುನೋವು ಶುರುವಾಗಿ, ಕೀವಾಗಿ ಮುಖವೆಲ್ಲಾ ಬಾತುಕೊಂಡಿತ್ತು. ಆಪರೇಶನ್ ಮಾಡದೆ ಏನೂ ಮಾಡಕಾಗಲ್ಲ ಅಂತ ಡಾಕ್ಟರ್ ಹೇಳ್ದಾಗ ಇವನಿಗೆ ದಿಕ್ಕೇ ತೋಚಿರಲಿಲ್ಲ. ಈಗೀಗ ಸ್ವಲ್ಪ ಕರ್ಚಿಗೆ ಹಣ ಹೊಂದಿಸುವಷ್ಟು ದುಡಿಯುತ್ತಿದ್ದ ಲಕ್ಷ್ಮೀನಾರಾಯಣನಿಗೆ ಅಪ್ಪನ ಆಪರೇಶನ್ ಮಾಡಿಸುವುದು ಬಹಳ ಕಷ್ಟದ ಕೆಲಸವಾಗಿತ್ತು. ತೋಟದಲ್ಲಿ ನೆಟ್ಟಿದ್ದ ಏಲಕ್ಕಿ ಹಾಗೂ ವೆನಿಲಾ ಗಿಡಗಳು ಇವನ ಆದಾಯ ಹೆಚ್ಚಿಸಲು ಸಹಾಯಾಕಾರಿಯಾಗಿದ್ದರೂ ಕೂಡ ಅವು ಇವನಿಗೆ ಅಪ್ಪನಿಗೆ ಚಿಕಿತ್ಸೆ ಕೊಡಿಸಲಾಗುವಷ್ಟು ಆದಾಯ ಕೊಡುತ್ತಿರಲಿಲ್ಲ. ಕುಡಿತ ನಿಲ್ಲಿಸಿ ಎನ್ನುವ ಡಾಕ್ಟರ್ ಮಾತನ್ನು ಅಪ್ಪ ಕೇಳದೆ ಕುಡಿದು ಕುಡಿದು ಮೂಲ್‌ವ್ಯಾಧಿ ರೋಗಕ್ಕೆ ಬೇರೆ ತುತ್ಹಾಗಿದ್ದ. ಅತ್ತ ಅಪ್ಪನನ್ನು ಬದುಕಿಸಲೂ ಆಗದೆ ಇತ್ತ ಅವರ ಒದ್ದಾಟವನ್ನು ನೋಡಲೂ ಆಗದೆ ಒಂದು ರೀತಿಯ ಮಾನಸಿಕ ಸಂಧಿಗ್ನತೆಗೆ ಸಿಲುಕ್ಕಿದ್ದ ಲಕ್ಷ್ಮೀನಾರಾಯಣನಿಗೆ ನೆಮ್ಮದಿ ಸಿಗುತ್ತಿದ್ದುದು ಅವನ ಸ್ನೇಹಿತರೊಡನೆ ಮಾತ್ರ.

ಸ್ನೇಹಿತರೊಡನೆ ಹಾಗೂ ಹೀಗೂ ಕಾಲ ಕಳೆಯುತ್ತಿದ್ದ ಲಕ್ಷ್ಮೀನಾರಾಯಣನ ಗುಂಪಿಗೆ ಒಂದು ಹೊಸ ಬ್ರಾಹ್ಮಣ ಹುಡುಗನ ಸೇರ್ಪಡೆ ಆಗಿತ್ತು. ಅನುಕೂಲಾಸ್ತನಾಗಿದ್ದ  ನಾಗರಾಜ ಮನೆಗೆ ಒಬ್ಬನೇ ಗಂಡು ಮಗನಾಗಿದ್ದ. ನನ್ನ ಮಗ ಚೆನ್ನಾಗಿ ಓದಬೇಕೆಂಬ ಆಸೆಯಿಂದ ಅವರಪ್ಪ ಅವನನ್ನು ಪೇಟೆಯಲ್ಲಿ ಓದಿಸಿದ್ದರು. ಆದರೆ ನಾಗರಾಜನಿಗೆ ವಿದ್ಯೆ ತಲೆಗೆ ಹತ್ತಲೇ ಇಲ್ಲ. ಚಿಕ್ಕಂದಿನಿಂದಲೂ ಮನೆಯವರ ಭಯ ಇಲ್ಲದೆ ಕೈ ತುಂಬಾ ದುಡ್ಡು ಹಿಡಿದುಕೊಂಡು ಪುಂಡು ಪೋಕರಿಗಳ , ಬೇರೆ ಶ್ರೀಮಂತ ಹುಡುಗರಗಳ ಜೊತೆ ಓಡಾಡುತ್ತಿದ್ದ ನಾಗರಾಜನಿಗೆ ಸರಸ್ವತಿ ಒಲಿದಿರಲಿಲ್ಲ. ಹಾಗೂ ಹೀಗೂ ಕಷ್ಟ ಪಟ್ಟು ಹತ್ತನೇ ತರಗತಿಯಲ್ಲಿ ಪಾಸಾಗಿದ್ದ ನಾಗರಾಜ ಪಿ ಯು ಸಿ ನಲ್ಲಿ ಗೋತಾ ಹೊಡೆದಿದ್ದ. ನಾನು ಇನ್ನು ಓದಲ್ಲಾ ಅಂತ ಹಟ ಹಿಡಿದಿದ್ದ ಅವನನ್ನ ಅವ್ರಪ್ಪ ಬೇರೆ ದಾರಿ ತೋಚದೆ ಸರಿ ಮನೆಗೆ ಬಂದು ಜಮೀನು ನೋಡಿಕೊಂಡಿರು ಅಂತ ಹೇಳಿದ್ದರು. ಪೇಟೆಯಲ್ಲಿ ಇದ್ದ ಹುಡುಗರ ಸಹವಾಸದಿಂದ ಓದೊಂದನ್ನು ಬಿಟ್ಟು ಇನ್ನೆಲ್ಲಾ ವಿದ್ಯೆಗಳಲ್ಲೂ ಪಾರಂಗತನಾಗಿದ್ದ ನಾಗರಾಜ ಹಳ್ಳಿಯಲ್ಲಿ ಎಲ್ಲಾ ಹುಡುಗರಿಗೆ ಮಾರ್ಗದರ್ಶಕನಾಗಿದ್ದ. ದಿನ ಕಳೆದಂತೆ ಲಕ್ಷ್ಮೀನಾರಾಯಣ ಮತ್ತು ನಾಗರಾಜನ ಸ್ನೇಹ ದೃಢವಾಗ್ತಾ ಇತ್ತು.

ಒಂದೆರಡು ತಿಂಗಳಲ್ಲಿ ಇವರ ಸ್ನೇಹ ಬೆಳೆದು ಹೆಮ್ಮರವಾಗಿ ನಿಂತಿತ್ತು. ಲಕ್ಷ್ಮೀನಾರಾಯಣನಿಗೆ ಇದ್ದ ಚುರುಕು ಬುದ್ದಿ ನಾಗರಾಜನಿಗೆ ಹಿಡಿಸಿದರೆ, ಅವನು ಇವನಿಗೆ ಕೊಡುತ್ತಿದ್ದ ಗೌರವ, ಅವನ ಹತ್ತಿರ ಇದ್ದ ಧನಬಲ ಲಕ್ಷ್ಮೀನಾರಾಯಣನನ್ನು ಅವನೆಡೆಗೆ ಸುಲಭವಾಗಿ ಸೆಳೆದುಬಿಟ್ಟಿತ್ತು. ಒಮ್ಮೆ ಹೀಗೆ ಸಂಜೆಯ ತಂಪಾದ ಗಾಳಿಯಲ್ಲಿ ಇಬ್ಬರೂ ಮಾತನಾಡುತ್ತಾ ಕುಳಿತ್ತಿದ್ದಾಗ "ನಿಜ ಹೇಳು ಇಲ್ಲಿಯವರೆಗೂ ಯಾವುದಾದರೂ ಹೆಣ್ಣಿನ ಸವಿ ಕಂಡಿದ್ದೀಯಾ?" ಅಂತ ನಾಗರಾಜ ಕೇಳಿದಾಗ ಏನು ಹೇಳಬೇಕೆಂದು ಲಕ್ಷ್ಮೀನಾರಾಯಣನಿಗೆ ತೋಚಲಿಲ್ಲ. ತನ್ನ ಮನಸ್ಸಿನ ನೋವುಗಳನ್ನು ಹಂಚಿಕೊಳ್ಳಲು, ಮಾತನಾಡಲು ಒಬ್ಬಳು ಗೆಳತಿ ಬೇಕು ಅಂತ ಲಕ್ಷ್ಮೀನಾರಾಯಣನಿಗೆ ಎಷ್ಟೊಂದು ಬಾರಿ ಅನಿಸಿದ್ದರೂ ತನ್ನ ದೇಹ ಸುಖಕ್ಕಾಗಿ ಹೆಣ್ಣೊಂದು ಬೇಕೆಂಬ ಆಲೋಚನೆ ಕೂಡ ಅವನ ಮನಸ್ಸಿನಲ್ಲಿ ಬಂದಿರಲಿಲ್ಲ. ಪ್ರಾಕೃತಿಕವಾಗಿ ಆಗುವ ಭಯಕೆಗಳನ್ನ ಮದುವೆಯ ನಂತರವೇ ಇದೆಲ್ಲಾ ಅಂತ ಅಂದುಕೊಂಡು ಅದುಮಿಡುತ್ತಿದ್ದ ಇವನಿಗೆ ಹಟಾತ್ ಆಗಿ ಬಂದ ಪ್ರಶ್ನೆಗೆ ಏನು ಹೇಳಬೇಕೆಂದು ತಿಳಿಯದೆ ಅದೆಲ್ಲಾ ಮದುವೆಗೆ ಮುಂಚೆ ತಪ್ಪಲ್ವಾ ಅಂತ ಕೇಳಿದ್ದ. ಗೊಳ್ ಅಂತ ನಕ್ಕುಬಿಟ್ಟಿದ್ದ ನಾಗರಾಜ. ನೀನು ನಿಜವಾಗಲೂ ಮುಗ್ಧನ ಅಥವಾ ನನ್ನ ಹತ್ತಿರ ನಾಟಕ ಆಡ್ತಾ ಇದೀಯಾ ಅಂತ ಕೇಳ್ದಾಗ ನಿನಗೇ ಗೊತ್ತು ನಮ್ಮ ಬ್ರಾಹ್ಮಣ ಸಮಾಜದಲ್ಲಿ ಇವೆಲ್ಲಾ ನಿಷಿದ್ದ ಅಂತ ಆದರೂ ಯಾಕೆ ಕೇಳ್ತಾ ಇದೀಯಾ ಅಂದಿದ್ದ ಲಕ್ಷ್ಮೀನಾರಾಯಣ.

ನಿಧಾನವಾಗಿ ಇವನ ಭುಜದ ಮೇಲೆ ಕೈ ಹಾಕಿ "ನಮ್ಮನೆಗೆ ಕೆಲಸಕ್ಕೆ ಬರುವ ನಾಲ್ಕು ಹೆಣ್ಣಾಳುಗಳನ್ನ ನಾನೇ ನೋಡ್ಕೋತಿರೋದು " ಅಂತ ಹೇಳಿ ಮೆಲ್ಲಗೆ ಕಣ್ಣು ಹೊಡೆದಿದ್ದ ನಾಗರಾಜ. ಅಷ್ಟು ಹೇಳಿ ಸುಮ್ಮನಾಗದೆ ಊರಿನಲ್ಲಿ ಯಾರ್ಯಾರ ಕಥೆ ಏನೇನು, ಯಾವ್ ಯಾವ ಗಂಡಸರು ಯಾವ್ ಯಾವ ಹುಡುಗಿಯರನ್ನ ಇಟ್ಟುಕೊಂಡಿದಾರೆ, ಕೆಲವು ಹೆಂಗಸರು ಯಾಕೆ ಒಂದೇ ಮನೆಗೆ ಕೆಲಸಕ್ಕೆ ಹೋಗ್ತಾರೆ ಅಂತೆಲ್ಲಾ ನಾಗರಾಜ ವಿವರಿಸಿ ಹೇಳ್ತಾ ಇದ್ರೆ ಲಕ್ಷ್ಮೀನಾರಾಯಣನಿಗೆ ತಾನು ಸತ್ಯವೆಂದು ಭಾವಿಸಿದ್ದ ಗಾಜಿನ ಸೂರೊಂದು ಒಡೆದು ಮೈ ಮೇಲೆ ಬಿದ್ದಂತೆ ಭಾಸವಾಗುತ್ತಿತ್ತು. ತಾನು ಓದಿದ್ದ ಕೇಳಿದ್ದ  ಕಥೆ ಪುರಾಣಗಳು , ನೀತಿ ನಿಯಮಗಳೆಲ್ಲವೂ ಗಾಳಿಯಲ್ಲಿ ತೂರಿಹೋದಂತೆ ಅನಿಸುತ್ತಿತ್ತು. ನನ್ನ ನಂಬಿಕೆಗಳು, ಉದ್ದೇಶಗಳು, ತತ್ವ ಸಿದ್ದಾಂತಗಳೆಲ್ಲಾ ನನಗೊಬ್ಬನಿಗೇ ಮೀಸಲಿರುವ ಚೌಕಟ್ಟೆನಿಸಿಬಿಟ್ಟಿತ್ತು. "ನಿನಗೆ ನಾನು ಹೇಳುವುದರಲ್ಲಿ ನಂಬಿಕೆ ಇಲ್ಲಾ ಅಂದರೆ ನೀನೇ ಸ್ವಲ್ಪ ಗಮನಿಸಿ ನೋಡು. ಪುರುಷ ಪ್ರಕೃತಿಯನ್ನು ಸೇರುವುದು ಸಹಜ ಕ್ರಿಯೆ, ಈ ಮದುವೆ ಬಾಂಧವ್ಯ ಎಲ್ಲಾ ಮನುಷ್ಯ ಮಾಡ್ಕೊಂಡಿರುವ ಕಟ್ಟುಪಾಡುಗಳು. ಇರುವ ಯೌವ್ವನದ ಸಾರ ಸವಿಯೋದು ಬಿಟ್ಟು ಈ ಹಳೇ ತತ್ವ ಸಿದ್ದಾಂತಗಳನ್ನ ಇಟ್ಟುಕೊಂಡು ಏನು ಮಾಡ್ತೀಯಾ?? ಯೋಚನೆ ಮಾಡಿ ನೋಡು" ಅಂತ ಹೇಳಿ ಮನೆಗೆ ನಿರ್ಗಮಿಸಿದ್ದ ನಾಗರಾಜ.

ಯಾಕೋ ನಾಗರಾಜನ ಮಾತುಗಳು ಸ್ವಲ್ಪ ಘಾಡವಾದ ಪರಿಣಾಮ ಬೀರಿದ್ದವು ಲಕ್ಷ್ಮೀನಾರಾಯಣನ ಮೇಲೆ. ಅವನು ಬಲವಂತವಾಗಿ ಕಟ್ಟಿಟ್ಟಿದ್ದ  ವಯೋಸಹಜವಾದ ಮನೋಕಾಮನೆಗಳು ಗರಿಗೆದರಿ ನಾಗರಾಜನ ಮಾತಿಗೆ ಹೌದೌದು ಎನ್ನುತ್ತಿದ್ದವು.

ಸ ಶೇ ಷ
ಪ್ರಿಯಾಂಕ್ ರಾವ್ 

Tuesday 19 January 2016

ಸಿಂಪಲ್ ಆಗಿ ಒಂದು ಊರ್ ಸ್ಟೋರೀ ಭಾಗ 6

ಹಾಗೆಯೇ ವಾಪಸ್ ಮನೆಯವರೆಗೂ ಬಂದು ತಲುಪಿದ್ದೆ. ಮೇಲೆ ಹೋಗಿ ಕಾಫೀ ತೋಟ ಸುತ್ತಿ ಬರುವ ಅಂತ ಮನಸ್ಸಾಯ್ತು. ಉತ್ಸಾಹದಲ್ಲಿ ನಡೆದುಕೊಂಡು ಓಡಾಡುತ್ತಿದ್ದ ನನಗೆ ಸೂರ್ಯನ ಕೋಪಕ್ಕೆ ಉತ್ಸಾಹವೆಲ್ಲಾ  ಕರಗಿ ಬೆವರಾಗಿ ಹರಿಯುತ್ತಿತ್ತು. ಆದರೂ ಒಂದೈದು ನಿಮಿಷ ಸುಧಾರಿಸಿಕೊಂಡು ಕಾಫೀ ತೋಟದ ಕಡೆಗೆ ಕಾಲಿಟ್ಟೆ.

ಮೇಲೆ ಹೋಗಿ ಅಂತ ಯಾಕೆ ಹೇಳಿದೆ ಅಂದ್ರೆ ಈ ಕಾಫೀ ತೋಟ ಇರೋದು ಮನೆಯ ಮೇಲೆ ಇದ್ದ ಒಂದು ಬೆಟ್ಟದ ಮೇಲೆ. ಕಾಫೀ ತೋಟಗಳನ್ನ ನೋಡಿದವರಿಗೆ ಇದು ಗೊತ್ತಿರಬಹುದು. ಕಾಫೀ ಗಿಡಗಳನ್ನ ಸಮತಟ್ಟಾದ ಜಾಗಗಳಲ್ಲಿ ಬೆಳೆಯುವುದಿಲ್ಲ. ನಮ್ಮ ಇಡೀ ಕಾಫೀ ತೋಟ ತಿರುಗಾಡಲು ಎರಡರಿಂದ ಮೂರು ಕಿ ಮೀ ನೆಡಿಯಬೇಕು. ದಟ್ಟವಾದ ಕಾಡುಗಳಿಗೆ ಹೊಂದಿಕೊಂಡಿರುವ ಕಾಫೀ ತೋಟಕ್ಕೆ ಕಾಡು ಪ್ರಾಣಿಗಳು ಬರುವುದು ಸರ್ವೇ ಸಾಮಾನ್ಯ. ನಮ್ಮ ಅಜ್ಜನ ಕಾಲದಲ್ಲಿ ಹುಲಿಗಳು ಹಸುಗಳನ್ನು ತಿನ್ನಲು ಮನೆಯವರೆಗೂ ಬರುತ್ತಿದ್ದವಂತೆ. ಆದರೆ ನನಗಂತೂ ಕಾಡು ಕೋಣ, ಕೋತಿಗಳು, ಹಾವುಗಳು ಬಿಟ್ಟರೆ ಇನ್ಯಾವ ಕಾಡು ಪ್ರಾಣಿಗಳು ಕಂದಿರೋದು ಕಮ್ಮೀನೇ. ಆಗಾಗ ಅಲ್ಲಿ ಇಲ್ಲಿ ಗರಿ ಬಿಚ್ಚಿದ ನವಿಲುಗಳನ್ನ ನೋಡಿದ ನೆನಪಿದೆ ಅಷ್ಟೇ.  ಇವತ್ತಾದ್ರೂ ಏನಾದ್ರೂ ಸಿಗಬಹುದೇನೋ ನೋಡೋಣ ಅಂತ ನಿಧಾನವಾಗಿ ತೋಟಕ್ಕೆ ಹೋಗುವ ಕಾಲು ದಾರಿಯಲ್ಲಿ ಕಾಲಿಟ್ಟೆ.

ತೋಟಕ್ಕೆ ವಾಹನಗಳು ಓಡಾಡುವಷ್ಟು ದೊಡ್ಡ ರಸ್ತೆ ಇರ್ಲಿಲ್ಲ. ಮನುಷ್ಯರು ಓಡಾಡೋಕೆ ಅಂತ ಒಂದು ಚಿಕ್ಕ ಕಾಲು ದಾರಿ ಮಾಡಿದಾರೆ, ಅದರ ಅಕ್ಕಪಕ್ಕದಲ್ಲಿ ಮೊಣಕಾಲೆತ್ತರ ಬೆಳದಿರುವ ಹುಲ್ಲು. ಚಿಕ್ಕ ಪುಟ್ಟ ನಾಚಿಕೆ ಮುಳ್ಳಿನ ( ಮುಟ್ಟಿದರೆ ಮುನಿ) ಗಿಡಗಳು. ಚಿಕ್ಕ ವಯಸ್ಸಿನಲ್ಲಿ ಈ ಗಿಡದ ಜೊತೆ ಆಡುವ ಮಜಾನೇ ಬೇರೆ. ಈ ನಾಚಿಕೆ ಮುಳ್ಳಿನ ಗಿಡದ ಬಗ್ಗೆ ಗೊತ್ತಿದೆಯಲ್ಲ?? ಇದಕ್ಕೆ ಬೇರೆ ವಸ್ತುಗಳ ಸ್ಪರ್ಶ ಸ್ವಲ್ಪ ಆದಲ್ಲಿ, ಆಗ ತಾನೇ ಮದುವೆ ಆಗಿರುವ ಮಧುಮಗಳಿಗಿಂತ ಜೋರಾಗಿ ನಾಚಿಕೊಂಡು ತಮ್ಮ ಎಲೆಗಳನ್ನ ಮುಚ್ಚಿಕೊಳ್ತಾವೆ. ಚಿಕ್ಕವರಿಗೆ ಅದೇ ಒಂದು ಆಟ. ನೆಡೆದಾಡುವಾಗ ಸುಮ್ಮನೆ ಅವುಗಳಿಗೆ ತಾಗಿಸಿಕೊಂಡು, ಅವುಗಳ ಎಲೆಗಳನ್ನ ಬಲವಂತವಾಗಿ ಬಿಡಿಸಲು ಪ್ರಯತ್ನಿಸಿ ಹೀಗೆ ಹತ್ತು ಹಲವು ಚೇಷ್ಟೆಗಳು. ಸರಕ್ಕನೆ ನನ್ನ ಎದುರು ಹಾದು ಹೋಗಿತ್ತು ಒಂದು ಕಪ್ಪು ಬಣ್ಣದ ಹಾವು. ಕೇವಲ ಇನ್ನೆರಡು ಹೆಜ್ಜೆ ಇಟ್ಟಿದ್ದರೆ ಸೀದಾ ಅದರ ತಲೆಯ ಮೇಲೆ ಇಟ್ಟಿರುತ್ತಿದ್ದೆ ಕಾಲು. ಮಿನಿ ಹಾರ್ಟ್ ಅಟ್ಯಾಕ್ ಆದಂತೆ ಆ ಕ್ಷಣಕ್ಕೆ ಅಲ್ಲೇ ನಿಂತಿದ್ದ ನನಗೆ ವಾಸ್ತವದ ಅರಿವಾಗಲು ಒಂದೆರಡು ನಿಮಿಷ ಬೇಕಾಯ್ತು. ಜೋರಾಗಿ ಹೊಡೆದುಕೊಳ್ಳುತ್ತಿದ್ದ ಹೃದಯವನ್ನು ತಹಬದಿಗೆ ತಂದು ಮುಂದೆ ಹೆಜ್ಜೆ ಹಾಕಿದ್ದೆ.

ಹಾವುಗಳು ಎಂದ ತಕ್ಷಣ ಅಂತ ಭಯಪಡುವಂಥದ್ದೇನಿಲ್ಲಾ . ಅವುಗಳು ಬಿಸಿಲಿಗೆ ಬಂದು ಮೈ ಚಾಚಿ ಮಲಗುವುದು ಅಭ್ಯಾಸ. ಅದು ಅಲ್ಲದೆ ಎಲ್ಲಾ ಹಾವುಗಳು ವಿಷಕಾರಿ ಏನಲ್ಲಾ. ಅದರಲ್ಲೂ ಮಲೆನಾಡಿನಲ್ಲಿ ಕಾಲು ಕಾಲಿಗೆ ಸಿಗುವವು ಕೆರೆ ಹಾವುಗಳು. ಇವುಗಳಿಗೆ ವಿಷ ಇರಲ್ಲ ಆದರೂ ಬಾಲದಲ್ಲಿ ಹೊಡೆಯುತ್ತಾವೆ ಅಂತ ಕೇಳಿದೀನಿ ಆದ್ರೆ ನನಗೂ ಇದರ ಬಗ್ಗೆ ಇರುವ ಮಾಹಿತಿ ಕಮ್ಮಿ. ಕೆಲವೊಮ್ಮೆ ಹಾವುಗಳು ಮನೆಗಳಿಗೆ ಅತಿಥಿಗಳಾಗಿ ಬರುವುದುಂಟು. ಹೊರಗಡೆ ತಿನ್ನಲು ಸಿಗದಿದ್ದರೆ ಮನೆಯಲ್ಲಿ ಅಡಗಿರುವ ಇಲಿಗಳನ್ನು ಹಿಡಿಯಲು ಆಮಂತ್ರಣವಿಲ್ಲದೆ ಬರುವ ಅತಿಥಿಗಳಿವು . ಆದರೂ ನನಗೆ ಹಾವು ನೋಡಿದರೆ ಒಂದು ಸಲ ಮೈ ಜುಂ ಅನ್ನುತ್ತೆ. ತಮ್ಮ ದೇಹದಲ್ಲೇ ಸರ ಸರ ತೆವಳಿ ಹೋಗುವ ಹಾವನ್ನು ಕಂಡರೆ ರೌದ್ರಮಯ ದೃಶ್ಯವೊಂದನ್ನ ನೋಡಿದಂತಾಗುತ್ತೆ. ನನ್ನ ಸ್ನೇಹಿತ ಹೇಳಿದ್ದು ನೆನಪಾಯ್ತು ಅವನ ಗೆಳೆಯನೊಬ್ಬ ಸಿಟಿನಲ್ಲಿ ಬೆಳೆದವನು ಊರಿಗೆ ಬಂದಾಗ ಕೇಳಿದ್ದನಂತೆ "ಇದೇನಿದು ಹಾವುಗಳೆಲ್ಲಾ ಹೀಗೆ ಫ್ರೀ ಆಗಿ ಓಡಾಡ್ಕೊಂಡು ಇದಾವೆ?? " ಅಂತ. ಏನ್ ಮಾಡೋಣ ಮಾರೆಯಾ ಹಿಡಿದು ಮನೆಯಲ್ಲಿ ಸಾಕಿಕೊಳ್ಳೋಕೆ ಆಗಲ್ವಲ್ಲ ಅಂತ ಹೇಳಿದ್ದನಂತೆ. ಪಾಪ ಅವರಿಗೂ ಅರಿವಿರಲ್ಲ ಮಲೆನಾಡಿನ ಜೀವನ ಕಾಡಿನ ಜೀವನ ಅಂತ. ಕಾಡಿಗೆ ಹೊಂದಿಕೊಂಡೇ ಸಾಗುವ ಮಲೆನಾಡಿನ ಬಧುಕು ಅದ್ಭುತ ಅಂತ ಮನಸ್ಸಿನಲ್ಲೇ ಅಂದುಕೊಂಡು ಸುತ್ತಾ ಕಣ್ಣಾಯಿಸುತ್ತಿದ್ದೆ.

ನಮ್ಮ ತೋಟದಲ್ಲಿ ಇರದ ಮರಗಳಿರಲಿಲ್ಲ. ತೇಗ , ಬೀಟೆ, ಹೊನ್ನೆ, ಹಲಸು, ಮಾವು , ಶ್ರೀಗಂಧ ಹೀಗೆ ಹತ್ತು ಹಲವಾರು. ಒಮ್ಮೆ ಶ್ರೀಗಂಧದ ಕಳ್ಳರ ಕಾಟ ಜಾಸ್ತಿ ಅಂತ ಅಪ್ಪ ಆರಣ್ಯಾಧಿಕಾರಿಗಳಿಗೆ ಹೇಳಿ ತೋಟದ ಎಲ್ಲಾ ಗಂಧದ ಮರಗಳನ್ನ ಕಡಿಸಿ ಒಂದು ಟ್ರಕ್ ಲೋಡ್ ಗಂಧದ ಮರ ಸರ್ಕಾರಕ್ಕೆ ಕೊಟ್ಟಿದ್ದು ನೆನಪಾಯ್ತು. ಕೆಲವೊಮ್ಮೆ ಗಂಧದ ಗಿಡ ದೊಡ್ಡದು ಆಗೋಕೆ ಮುಂಚೇನೇ ಕಳ್ಳರು ದುಡ್ಡಿನ ಆಸೆಗೆ ಕಿತ್ತುಬಿಡೋರು. ಸಿಗುವ ಮೂರು ಕಾಸಿಗಾಗಿ ಮಲೆನಾಡಿನ ಸೌಂದರ್ಯವನ್ನೇ ಹಾಳು ಮಾಡ್ತಾ ಇದೀವಿ ಅನ್ನೋ ಅರಿವು ಅವರಿಗಿರಲಿಲ್ವೆ?? ಹೀಗೇ ಕಿತ್ತು ಕಿತ್ತು ಇಂದು ಶ್ರೀಗಂಧದ ಮರಗಳಿಗಾಗಿ ಹುಡುಕಾಡುವ ಪರಿಸ್ಥಿತಿಗೆ ಬಂದಿದೆ ಮಲೆನಾಡು. ಟಕ್ ಅಂತ ಕಾಲಿಗೆ ಏನೋ ತಗುಲಿದಾಗ ಬಗ್ಗಿ ನೋಡಿದ್ದೆ. ಧೂಪದ ಕಾಯಿ. ಹಾಗೇ ಸುತ್ತಾ ಕಣ್ಣು ಹಾಯಿಸಿದರೆ ಬೇಕಾದಷ್ಟು ಕಾಯಿಗಳು ಮರದಿಂದ ಉದುರಿ ಬಿದ್ದಿದ್ದವು. ಈ ಧೂಪದ ಕಾಯಿ ಗಟ್ಟಿಯಾಗಿರುವ ಕಪ್ಪು ಬಣ್ಣದ ಕಾಯಿ. ಬಿಸಿಲಿಗೆ  ಒಣಗಿದರೆ ಕಂದು ಬಣ್ಣಕ್ಕೆ ತಿರುಗುವ ಕಾಯಿಗಳು ಆಕ್ರೋಡು( ವಾಲ್ನಟ್) ವನ್ನು ಹೋಲುತ್ತೆ. ಇದನ್ನು ಒಡೆದರೆ ಅದರೊಳಗೆ ಎರಡು ಚಿಕ್ಕ ಬೀಜಗಳು. ಅದರ ರುಚಿ ಆಹಾ ಮಹದಾನಂದ. ಕಾಯಿಗಳನ್ನ ನಿಧಾನವಾಗಿ ಕತ್ತಿಯಲ್ಲಿ ಎರಡು ಭಾಗ ಮಾಡಿ ಗುಂಡುಪಿನ್ ಅಥವಾ ಸೇಫ್ಟೀಪಿನ್ನಿಂದ ಅದರ ಬೀಜಗಳನ್ನ ತೆಗೆದು ತಿಂತಾ ಇದ್ವಿ. ಒಂದು ಮೂಟೆ ಧೂಪದ ಕಾಯಿಗಳನ್ನು ತಂದ್ರೆ ಒಂದು ಪ್ಲೇಟ್ ಬೀಜ ಸಿಗುತ್ತೆ ಅಷ್ಟೇ. ಹಸಿ ಧೂಪದ ಕಾಯಿಯ ಬೀಜಕ್ಕೆ ಸಕ್ಕರೆ ಸೇರಿಸಿ ತಿನ್ನುವ ಮಜಾನೇ ಬೇರೆ ಬಿಡಿ.

ಅಲ್ಲೇ ಇದ್ದ ಕಲ್ಲಿನ ಮೇಲೆ ಒಂದು ಒಣಗಿರುವ ಧೂಪದ ಕಾಯಿ ಒಡೆದು ಬೀಜ ಬಾಯಿಗೆ ಹಾಕಿಕೊಂಡು ಮುಂದೆ ನೆಡೆದೆ. ಸ್ವಲ್ಪ ದೂರದಲ್ಲೇ ಸಿಕ್ಕಿತ್ತು ಒಂದು ಚಿಕ್ಕ ಕೆರೆ. ಕೆರೆ ಅಂದ್ರೆ ನಮ್ಮ ಕಡೆ ತುಂಬಾ ಚಿಕ್ಕದಾದ, ನೀರನ್ನು ಅಗತ್ಯವಿದ್ದಾಗ ಶೇಕರಿಸಿಡಲು ಮಾಡುವ ಜಾಗ. ನಮ್ಮ ಕಡೆಯ ಕೆರೆಗಳನ್ನ ದೊಡ್ಡದಾದ ಹೊಂಡ ಅಂತ ಕರಿಯಬಹುದು. ಹೆಚ್ಚು ಕಮ್ಮಿ ನಮ್ಮ ಫೈವ್ ಸ್ಟಾರ್ ಹೋಟೆಲ್ನ ಸ್ವಿಮ್ಮಿಂಗ್ ಪೂಲ್ಗಳಷ್ಟು ದೊಡ್ಡದಿರ್ತಾವೆ ಅಂದ್ಕೋಳಿ. ನಮ್ಮ ಮನೆಗಳಿಗೆ ಬರುವ ಕುಡಿಯುವ ನೀರು, ತೋಟಗಳಿಗೆ ನೀರಾವರಿಯ ನೀರು ಎಲ್ಲವೂ ಈ ಕೆರೆಯ ನೀರೆ ಆಗಿತ್ತು. ಬೆಟ್ಟದ ಮೇಲೆಲ್ಲೋ ಹುಟ್ಟುವ ನೀರುವ ಇಲ್ಲಿ ಬಂದು ಶೇಕರಣೆಯಾಗಿ ನಂತರ ಕೆಳಗೆ ಹರಿಯುತ್ತಿತ್ತು. ತೋಟಗಾರಿಕೆಗೆ ನೀರು ಜಾಸ್ತಿ ಅವಶ್ಯಕತೆ ಇದ್ದಾಗ ಮಾತ್ರ ಆ ಕೆರೆಯ ಕಿಂಡಿಯನ್ನು ಮುಚ್ಚಿ ಜಾಸ್ತಿ ನೀರು ಶೇಕಾರಣೆಯಾದ ನಂತರ ಅದನ್ನ ಹರಿಯಲು ಬಿಟ್ಟು ಉಪಯೋಗಿಸುತ್ತಿದ್ದರು. ಈ ರೀತಿ ಕಿಂಡಿಯನ್ನ ಮುಚ್ಚುವ ಕೆಲಸಕ್ಕೆ ತೂಬು ಹಾಕೋದು ಅಂತ ಕರಿತಾ ಇದ್ರು. ಬೇಸಿಗೆ ಬಂದ್ರೆ ಕೆರೆಗೆ ತೂಬು ಹಾಕಿ ರಾತ್ರಿಯೆಲ್ಲಾ ನೀರು ಶೇಕಾರಣೆಯಾಗಲು ಬಿಟ್ಟು ಅದನ್ನ ಬೆಳಿಗ್ಗೆ ಕಪ್ಪು ಕಾಲುವೆಗಳಿಗೆ ಹರಿಸಿ ಅಥವಾ ಸ್ಪ್ರಿಂಕ್ಲರ್ ನಿಂದ ತೋಟಗಾರಿಕೆಗೆ ಬಳಸುತ್ತಿದ್ರು. ಒಟ್ಟಿನಲ್ಲಿ ಮಲೆನಾಡಿನ ಜನರ ಜೀವನದ ಜೀವಾಳ ಬೆಟ್ಟದಲ್ಲಿ ಹುಟ್ಟುವ, ಭೂಮಿಯಿಂದ ಪುಟಿಯುವ ನೀರು. ಇದನ್ನ ಒರತೆ ಅಂತಾರೆ. ಈ ರೀತು ಹುಟ್ಟುವ ಹತ್ತು ಹಲವಾರು ಒರತೆಗಳು ಒಟ್ಟಾಗಿ ಕಾಲುವೆಗಳಾಗಿ, ಕಾಲುವೆಗಳೆಲ್ಲಾ ಒಟ್ಟಾಗಿ ನದಿಯಾಗಿ ಹರಿದು ನಾಗರೀಕತೆಯ ಶ್ರಷ್ಟಿಗೆ ಕಾರಣವಾಗಿದೆ ಅನ್ನುವುದು ಬೇರೆ ಪ್ರಶ್ನೆ.

ಸ ಶೇ ಷ
ಪ್ರಿಯಾಂಕ್ ರಾವ್ 

Tuesday 12 January 2016

ಲಕ್ಷ್ಮೀನಾರಾಯಣ ಭಾಗ ಎರಡು

 ತೋಟವನ್ನು ಮತ್ತೆ ಸಹಜ ಸ್ಥಿತಿಗೆ ತರುವುದು ಹೇಗೆ ಅನ್ನುವುದು ಬೃಹದಾಕಾರದ ಪ್ರಶ್ನೆಯಾಗಿ ಲಕ್ಷ್ಮೀನಾರಾಯಣನಿಗೆ ಕಾಡುತ್ತಿತ್ತು. ಅಲ್ಲಿ ಇಲ್ಲಿ ಊರಿನವರ ಹತ್ತಿರ ಕೈ ಸಾಲ ಮಾಡಿ ಚಿಕ್ಕ ಪುಟ್ಟ ಕೆಲಸಗಳಾದ ಹುಲ್ಲು ಸೌರುವುದು, ಕಪ್ಪು (ಕಾಲುವೆ) ಹೆರೆಯುದು ಈ ತರ ಕೆಲಸಗಳನ್ನ ಪ್ರಾರಂಭಿಸಿದ. ಎಲ್ಲಾ ವಿಷಯಗಳನ್ನ ಅರ್ಥ ಮಾಡಿಕೊಂಡು ಹೋಗುವಷ್ಟು ವಯಸ್ಸು ಇನ್ನೂ ಲಕ್ಷ್ಮೀನಾರಾಯಣನಿಗೆ ಆಗಿರಲಿಲ್ಲ. ಹದಿನಾರರ ಹರೆಯದ ಹುಡುಗರಿಗೆ ಕಾಡುವ ವಯೋಸಹಜವಾದ ಭಯಕೆಗಳು ಆಸೆಗಳು ಈತನನ್ನೂ ಕಾಡುತಿದ್ದವು. ಘೋರ ತಪಸ್ಸಿಗೆ ಕುಳಿತ ಮಹರ್ಷಿಯಂತೆ ತನ್ನೆಲ್ಲಾ ಆಥ್ಮಬಲವನ್ನು ಒಗ್ಗೂಡಿಸಿಕೊಂಡು ಭಯಕೆಗಳನ್ನು ಹತ್ತಿಕ್ಕಲ್ಲು ಪ್ರಯತ್ನಿಸುತ್ತಿದ್ದ. ತನ್ನ ಬಾಲ್ಯಾವಸ್ಥೆಯಲ್ಲಿ ಯಾವುದೇ ಮನುಷ್ಯ ಪ್ರೀತಿಯನ್ನು ಸರಿಯಾಗಿ ಕಾಣದ ಲಕ್ಷ್ಮೀನಾರಾಯಣ ಕ್ರಮೇಣವಾಗಿ ಪ್ರಾಣಿ ಪ್ರಿಯನಾಗಿ ಬದಲಾಗಿದ್ದ. ಮನೆಯಲ್ಲಿದ್ದ ಹಸುಗಳು, ನಾಯಿಗಳು, ಬೆಕ್ಕು ಇವೆಲ್ಲಾ ಅವನಿಗೆ ಅಂತ್ಯಂತ ಆತ್ಮೀಯವಾದ ಗೆಳೆಯರಾಗಿದ್ದವು.

ಹದಿನಾರು ವರ್ಷ ಆಯಿತು , ಬ್ರಾಹ್ಮಣ ಆಗಿ ಒಂದು ಜನಿವಾರ ಕೂಡ ಇಲ್ಲ, ಹೋಗಿ ಯಾವುದಾದರೂ ಸಾಮೂಹಿಕ ಉಪನಯನದಲ್ಲಿ ಒಂದು ದಾರ ಹಾಕಿಕೊ ಮಾರಾಯ ಅಂತ ಯಾರೋ ಹಿರಿಯರು ಹೇಳಿದಾಗ ಲಕ್ಷ್ಮೀನಾರಾಯಣನ ಮನಸ್ಸಿಗೆ ಬಹಳ ಖೇದವಾಗಿತ್ತು. ಬ್ರಾಹ್ಮಣ ಹಾಗಿರಬೇಕು ಹೀಗಿರಬೇಕು ಎಂದು ಹೇಳುವ ಊರುಮನೆಯವರಾಗಲಿ, ಬಂಧು ಬಳಗದವರಾಗಲಿ ಯಾರು ಇವನ ಆಪ್ಪನಿಗೆ ಇವನಿಗೊಂದು ನೂಲು ಹಾಕುವಂತೆ ಹೇಳಿರಲಿಲ್ಲ. ಅಕ್ಕ ಪಕ್ಕದ ಮನೆಯವರೆಲ್ಲಾ ತಮ್ಮ ಮಕ್ಕಳಿಗೆ ಉಪನಯನವನ್ನ ಮದುವೆಗಿಂತಾ ಜೋರಾಗಿ ಮಾಡಿದ್ದನ್ನ ಇವನು ನೋಡಿದ್ದ. ನನ್ನ ಉಪನಯನವೂ ಹೀಗೇ ಆಗಬಹುದೆಂದು ಬಾಲ್ಯದಲ್ಲಿ ಕನಸು ಕಂಡಿದ್ದ ಲಕ್ಷ್ಮೀನಾರಾಯಣನಿಗೆ ಅದರ ಬಗ್ಗೆ ಯಾರೂ ಅಷ್ಟೊಂದು ತಲೆ ಕೆಡಿಸಿಕೊಳ್ಳುತ್ತಿಲ್ಲ ಎಂದು ಅರಿವಾದಾಗ ಮನಸ್ಸಿಗೆ ಬಹಳ ನೋವಾಗಿತ್ತು. ಹಾಗಾದರೆ ನಾನು ಅಧಿಕೃತವಾಗಿ ಬ್ರಹ್ಮಣನಾಗಲು ಅವರ ಇವರ ಕಾಲು ಹಿಡಿದು ದೇವಸ್ಥಾನದಲ್ಲಿ ಸಾಮೂಹಿಕ ಉಪನಯನದಲ್ಲಿ ಮಾಡಿಕೊಳ್ಳಬೇಕೆ?? ಹೀಗೆ ಅಂದ್ರೆ ನನಗೆ ಆ ಬ್ರಾಹ್ಮಣ ಪಟ್ಟವೇ ಬೇಡ ಎಂದು ತೀರ್ಮಾನಿಸಿಬಿಟ್ಟಿದ್ದ.

ತೋಟದ ಕೆಲಸದ ಕಡೆ ಜಾಸ್ತಿ ಗಮನ ಕೊಟ್ಟಿದ್ದ ಲಕ್ಷ್ಮೀನಾರಾಯಣ ತೋಟವನ್ನೆಲ್ಲ ಅಚ್ಚುಕಟ್ಟಾಗಿ ಸಿದ್ದಪಡಿಸಿದ್ದ. ತನ್ನ ರೇಷನ್ ಕಾರ್ಡ್ ಹಿಡಿದು ಗ್ರಾಮೀಣಾಭಿವೃದ್ದಿ ಸೊಸೈಟೀಗೆ ಹೋಗಿ ಅಡಿಕೆ ಸಸಿಗೆ ಸ್ವಲ್ಪ ರಿಯಾಯಿತಿ ಕೊಡಿ ಮಾರಾಯ ಅಂದಾಗ, ಬ್ರಾಹ್ಮಣರಿಗೆ ಎಂಥಾ ರಿಯಾಯಿತಿ?? ಮೇಲ್ವರ್ಗದವರೆಲ್ಲಾ ಪೂರ ದುಡ್ಡು ಕೊಟ್ಟೇ ತಗೋಬೇಕು ಅಂತ ಸೊಸೈಟೀಯ ಮೇಲ್ವಿಚಾರಕ ಗ್ರೀನ್ ಕಾರ್ಡ್ ಯೆಲ್ಲೊ ಕಾರ್ಡ್ ಬಗ್ಗೆ  ಅರ್ಧ ಘಂಟೆ ತಲೆ ತಿಂದಿದ್ದ. ಸದ್ಯಕ್ಕೆ ಇವನಿಗಾಗಿ ಸೀಮೆ ಎಣ್ಣೆ ಸಕ್ಕರೆಯನ್ನಾದರೂ ಕೊಡುತ್ತಿದ್ದ ಆತನ ಹತ್ತಿರ ಜಾಸ್ತಿ ವಾದ ಮಾಡಿದರೆ ನಾಳೆಯಿಂದ ಅದೂ ಸಿಗುವುದಿಲ್ಲ ಎಂದು ಸುಮ್ಮನಾಗಿದ್ದ.  ಕಲಿಯುಗದಲ್ಲಿ ಬ್ರಾಹ್ಮಣನಾಗಿ ಹುಟ್ಟು ಅನ್ನೋದು ಶಾಪವಂತೆ ಅಂತ ಯಾರೋ ಹೇಳಿದ್ದ ಮಾತು ಲಕ್ಷ್ಮೀನಾರಾಯಣನ ತಲೆಗೆ ಬಂದಿತ್ತು. ಯಾಕಾದರೂ ಬ್ರಾಹ್ಮಣನಾಗಿ ಹುಟ್ಟಿದೆನೋ ಅಂತ ಅಂದುಕೊಂಡು ಅಡಿಕೆ ಸಸಿ ಕರೀದಿಗೆ ಬೇಕಾದ ದುಡ್ಡಿಗೆ ಅವರಿವರ ಕಾಲು ಹಿಡಿಯಲು ದೃಡಮನಸ್ಸು ಮಾಡಿಕೊಂಡ.

ಹಾಕೊದಾದ್ರೆ ಮಂಗಳದ ತಳಿ ಗಿಡಗಳನ್ನ ಹಾಕು ಬೇಗ ಉತ್ಪತ್ತಿ ಬರುತ್ತೆ ಅಂತ ದುಡ್ಡು ಕೊಟ್ಟ ದೊಡ್ಡ ಮನುಷ್ಯ ಹೇಳಿದಾಗ ಇವನೂ ಅದೇ ತೀರ್ಮಾನಕ್ಕೆ ಬಂದಿದ್ದ. ಹದಿನೈದು ದಿನ ಅವರಿವರ ಮನೆ ತಿರುಗಿ ದುಡ್ಡಿಗಾಗಿ ಎಲ್ಲಾರ ಕಾಲೂ ಹಿಡಿದಿದ್ದ. ಜೀವನದಲ್ಲಿ ಚೆನ್ನಾಗಿರುವ ಕೆಲವು ಸಂಭಂಧಿಕರು ಜಗತ್ತಿನಲ್ಲಿ ಎಲ್ಲಾ ತೊಂದರೆಗಳೂ ಅವರಿಗೇ ಇದೆ, ಇವನಿಗೆ ದುಡ್ಡು ಕೊಡಲು ಅವರ ಹತ್ತಿರವೇ ಏನೂ ಇಲ್ಲ ಅನ್ನುವ ರೀತಿಯಲ್ಲಿ ಮಾತನಾಡಿದ್ದರು. ಇನ್ನೂ ಕೆಲವರು ಇವನು ಹೇಗಿದ್ದಾನೆ ಅಂತ ಕೇಳುವ ಬದಲು ನಿಮ್ಮಪ್ಪ ಈಗಲೂ ಕುಡೀತಾನಾ?? ಈಗಲೂ ಆ ಹುಡುಗಿಯರ ಮನೆಗ ಹೋಗಿ ಬರ್ತಾನಾ ಅಂತ ಇವನ ಜೀವನದ ಕಹಿ ಘಟನೆಗಳನ್ನ ಕೆದಕಿ ಇವನ ಮನಸ್ಸಿಗೆ ಘಾಸಿಯುಂಟು ಮಾಡಿದ್ರು. ಹಾಗೂ ಹೀಗೂ ದುಡ್ಡು ಹೊಂದಿಸಿ ಮಂಗಳದ ಸಸಿಗಳನ್ನ ತಂದು ತೋಟದಲ್ಲಿ ನೆಡಲಾರಂಭಿಸಿದ.

ಹೊರಗಡೆಯಿಂದ ಗೊಬ್ಬರ ಕರೀದಿಸಲು ದುಡ್ಡಿರದಿದ್ದರಿಂದ ಸಾವಯವ ಕೃಷಿಗೆ ಅವಲಂಭಿತನಾದ ಲಕ್ಷ್ಮೀನಾರಾಯಣ. ಮನೆಯಲ್ಲಿದ್ದ ಎರಡು ಹಸುಗಳಿಂದ ಅಷ್ಟೊಂದು ಗೊಬ್ಬರ ಮಾಡಲಾರನೆಂದು ಎರಡು ಸಿಂಧಿ ಹಸುಗಳನ್ನು ಕರೀದಿಸಿದ್ದ. ತೋಟದ ಉತ್ಪತ್ತಿ ಮನೆ ಸಾಗಿಸಲು ಸಾಕಾಗುತ್ತಿರಲಿಲ್ಲ. ಉತ್ಪತ್ತಿಗೆ ಹತ್ತು ವರ್ಷ ತೆಗೆದುಕೊಳ್ಳುವ ಅಡಿಕೆಯ ಜೊತೆ ಚಿಕ್ಕ ಪುಟ್ಟ ಬೆಳೆಗಳಾದ ಏಲಕ್ಕಿ, ಜಾಕಾಯಿ , ಲವಂಗದ ಗಿಡಗಳನ್ನೂ ಬೆಳೆಸುತ್ತಿದ್ದ. ಅಲ್ಲಲ್ಲಿ ಕಾಫೀ ಗಿಡಗಳನ್ನೂ ನೆಟ್ಟಿದ್ದ ಲಕ್ಷ್ಮೀನಾರಾಯಣನಿಗೆ ಅವುಗಳ ಬೆಳೆಗಾಗಿ ಎರಡರಿಂದ ಮೂರು ವರ್ಷ ಕಾಯಬೇಕಿತ್ತು.  ಈ ಮಧ್ಯ ಜೀವನಕ್ಕಾಗಿ  ಮಳೆಗಾಲದಲ್ಲಿ ಹಲಸಿನಕಾಯಿ ಹಪ್ಪಳ, ಮುರುಗನ ಹುಳಿ ಬೇರೆ ಸಮಯದಲ್ಲಿ  ನಿಂಬೆಹಣ್ಣು , ಜೀರಿಗೆ ಮೆಣಸು, ಚಕ್ಕೋತ ಹೀಗೆ ಹತ್ತು ಹಲವಾರು ವ್ಯಾಪಾರಗಳನ್ನ ಮಾಡುತ್ತಿದ್ದ.

ಹೀಗೆ ಬರುತ್ತಿದ್ದ ಅಲ್ಪ ಸ್ವಲ್ಪ ಹಣದಲ್ಲಿ ಮನೆಯ ಕರ್ಚು ತೂಗಿಸುತ್ತಿದ್ದ. ಬರುತ್ತಿದ್ದ ಸ್ವಲ್ಪ ದುಡ್ಡಿನಲ್ಲಿ ಒಳ್ಳೆಯ ಬಟ್ಟೆಗಳನ್ನ ಖರೀದಿಸಲು ಲಕ್ಷ್ಮೀನಾರಾಯಣನಿಗೆ ಆಗುತ್ತಿರಲಿಲ್ಲ. ಹೊರಗಡೆ ಹೋದಾಗ ವಯೋಸಜವಾದ ಇವನ ಭಯಕೆಗಳು ಹುಡುಗಿಯರೆಡೆಗೆ ಕಣ್ಣಾಯಿಸುವಂತೆ ಪ್ರೇರೇಪಿಸುತ್ತಿದ್ದವು . ಇವನ ಮಾಸಲು ಬಟ್ಟೆ, ಎಣ್ಣೆ ಕಾಣದ ಕೂದಲು, ಹಳೆಯ ಹವಾಯಿ ಚಪ್ಪಲಿಯನ್ನ ನೋಡಿದ ಯಾವುದೇ ಹುಡುಗಿ ಇವನೆಡೆಗೆ ಮತ್ತೊಮ್ಮೆ ಕಣ್ಣಾಯಿಸುತ್ತಿರಲಿಲ್ಲ. ಇದನ್ನೆಲ್ಲ ನೋಡಿ ಒಮ್ಮೊಮ್ಮೆ ದುಃಖ ಹೆಚ್ಚಾಗಿ ಒಬ್ಬನೇ ಕೂತು ಆಳುತ್ತಿದ್ದ ಲಕ್ಷ್ಮೀನಾರಾಯಣನಿಗೆ ತನ್ನ ಆರ್ಥಿಕ ಪರಿಸ್ಥಿತಿಯೇ ಇದಕ್ಕೆಲ್ಲಾ ಕಾರಣ ಎಂದು ಮನದಟ್ಟಾಗಿತ್ತು. ಹಾಗೂ ಹೀಗೂ ಹದಿನೆಂಟರ ಗಡಿ ತಲುಪಿದ್ದ ಲಕ್ಷ್ಮೀನಾರಾಯಣನಿಗೆ ಜಗತ್ತಿನಲ್ಲಿ ಯಾವುದು ಸತ್ಯ ಯಾವುದು ಸುಳ್ಳು ಎಂಬುದರ ಅರಿವು ಸ್ವಲ್ಪ ಸ್ವಲ್ಪವೇ ಆಗತೊಡಗಿತ್ತು.

ಸ ಶೇ ಷ
ಪ್ರಿಯಾಂಕ್ ರಾವ್ 

Thursday 7 January 2016

ಲಕ್ಷ್ಮೀನಾರಾಯಣ ಭಾಗ ಒಂದು

ಇದೊಂದು ಕಥೆ ಮಾತ್ರ. ನಿಜವಾದ ಸನ್ನಿವೇಶಗಳಿಗೆ ಯಾವುದೇ ಹೋಲಿಕೆ ಇದ್ದಲ್ಲಿ ದಯವಿಟ್ಟು ಕ್ಷಮಿಸಿ.

ಶೂನ್ಯಕ್ಕೆ ದೃಷ್ಟಿ ನೆಟ್ಟು ಮನದಾಳದ ಆಲೋಚನಾ ಲಹರಿಯನ್ನು ಹತ್ತಿಕ್ಕಲು ಶತಾಯಗತಾಯ ಪ್ರಯತ್ನಿಸುತ್ತಿದ್ದ. ಭೋರ್ಗರೆಯುತ್ತಿರುವ ಸಾಗರದ ಅಲೆಗಳು ಬಂದು ಬಂಡೆಗೆ ಅಪ್ಪಳಿಸುತ್ತಿರುವ ಶಬ್ದ ಕೂಡ ಅವನ ಮನಸ್ಸಿನ ಕಲರವವನ್ನು ಹತ್ತಿಕ್ಕಲು ವಿಪಲವಾಗಿದ್ದವು. ನಿರ್ಲಿಪ್ತತೆಯ ಭಾವ ಅವನ ಕಣ್ಣಂಚಿನಲ್ಲಿ ಎದ್ದು ಕಾಣುತ್ತಿತ್ತು. ಅಂಕಲ್ ಅಂಕಲ್ ಸ್ವಲ್ಪ ಬಾಲ್ ಕೊಡಿ ಅಂಕಲ್ ಅನ್ನೋ ಮಗುವಿನ ಕೂಗು ಅವನನ್ನ ಬಲವಂತವಾಗಿ ಅವನ ಯೋಚನೆಗಳಿಂದ ಆಚೆ ತಂದಿತ್ತು. ಚೆಂಡನ್ನು ಮಗುವಿಗೆ ಎಸೆದು ಹಾಗೆಯೇ ಆ ಮಕ್ಕಳ ಆಟವನ್ನು ನೋಡುತ್ತಾ ಮತ್ತೆ ಅದೇ ನಿರ್ವಿಕಾರದ ಸಾಗರದಲ್ಲಿ ಮುಳುಗಿದ. ಸಾಗರದಲ್ಲಿ ಸಮಾಧಿಯಾಗಲು ಅಣಿಯಾಗಿದ್ದ ಸೂರ್ಯ ಇವನನ್ನೊಮ್ಮೆ ನೋಡಿ ಅಣಕಿಸಿ ನಕ್ಕಂತೆ ಭಾಸವಾಯಿತು. ದಿನಾ ಹುಟ್ಟಿ ದಿನಾ ಸಾಯೋ ಸೂರ್ಯನ ಬದುಕೇ ಎಷ್ಟೋ ಮೇಲು ಅನಿಸಿಬಿಟ್ಟಿತ್ತು ಆತನಿಗೆ. ಹಾಗೆಯೇ ಬಂಡೆಯ ಮೇಲೆ ಕಾಲು ಚಾಚಿ ನಿದ್ರಾದೇವಿಗೆ ಶರಣಾಗಲು ಯತ್ನಿಸುತ್ತಿದ್ದ ಅವನನ್ನು ಅವನ ಜೀವನದ ಕಹಿ ಸತ್ಯಗಳು ಕಾಡುತ್ತಿದ್ದವು.

ಮಲೆನಾಡಿನ ಒಂದು ಚಿಕ್ಕ ಹಳ್ಳಿಯಲ್ಲಿ ಒಂದು ಬ್ರಾಹ್ಮಣ ಕುಟುಂಬದಲ್ಲಿ ಆಗಿತ್ತು ಈತನ ಜನನ. ಇವನು ಮುಂದೆ ಲಕ್ಷ್ಮಿಯನ್ನು ಒಲಿಸಿಕೊಳ್ತಾನೆ ಇವನಿಗೆ ಲಕ್ಷ್ಮೀನಾರಾಯಣ ಅಂತ ಹೆಸರಿಡಿ ಅಂತ ಯಾರೋ ಜ್ಯೋತಿಷಿ ಹೇಳಿದ್ದರಂತೆ. ಅಲ್ಲಿಂದ ಶುರುವಾದ ಲಕ್ಷ್ಮೀನಾರಾಯಣನ ಬದುಕು ಸಿಹಿ ಘಟನೆಗಳನ್ನ ನೋಡಿದ್ದು ತುಂಬಾ ಕಮ್ಮಿ. ಅಂಥಾ ಸ್ಥಿತಿವಂತರಲ್ಲದ ಕುಟುಂಬದಲ್ಲಿ ಹುಟ್ಟಿದ್ದ ಲಕ್ಷ್ಮೀನಾರಾಯಣನ ಅಪ್ಪನಿಗಿದ್ದಿದ್ದು ಒಂದು ಎಕರೆ ಅಡಿಕೆ ತೋಟವಷ್ಟೆ. ಅಪ್ಪ ಕುಡುಕ. ಬುದ್ದಿ ಬಂದಾಗಿನಿಂದಲೂ ಅವನು ನೋಡಿದ್ದು ಬರೀ ಅಪ್ಪ ಅಮ್ಮನ ಜಗಳವಷ್ಟೆ. ಇದ್ದ ತೋಟವನ್ನು ಸರಿಯಾಗಿ ನೋಡಿಕೊಳ್ಳದ ಅಪ್ಪ ದಿನ ಕುಡಿದು ಅಮ್ಮನಿಗೆ ಬಾರಿಸುತ್ತಿದ್ದ. ದಿನಾ ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದ ಅಮ್ಮ ಇವನಿಗೆ ಏನು ತಾನೇ ಪ್ರೀತಿ ತೋರಿಯಾಳು. ಈತನ ಬಾಲ್ಯದ ಚಿಕ್ಕ ಪುಟ್ಟ ಆಸೆಗಳನ್ನ ನೆರವೇರಿಸುವ ಯಾವುದೇ ಹಂಬಲ ಆಸಕ್ತಿ ಅವರಿಗಿರಲಿಲ್ಲ. ಗಂಡ ಕೊಡುತ್ತಿದ್ದ ಅಲ್ಪ ಸ್ವಲ್ಪ ದುಡ್ಡಿನಲ್ಲಿ ತನ್ನ ಸಂಬಧಿಕರೆದುರು ಮರ್ಯಾದೆ ಉಳಿಸಿಕೊಳ್ಳಲು ಒದ್ದಾಡುತ್ತಿದ್ದ ಅಮ್ಮ ಇವನು ಜಾಸ್ತಿ ಹಟ ಮಾಡಿದರೆ ನಾಲ್ಕು ಬಾರಿಸ್ತ ಇದ್ಲು ಅಷ್ಟೆ. ಇನ್ನು ಸಂಬಧಿಕರೊ ಇವನಪ್ಪ ಸರಿ ಇಲ್ಲ ಅದ್ಯಾವ್ದೋ ಹುಡುಗಿಯನ್ನ ಇಟ್ಕೊಂಡಿದಾನೆ ಅಂತ ಇವನೆದುರೇ ಮಾತಾಡಿ ನಗ್ತಾ ಇದ್ರೆ ಹೊರತು ಇವನ ಆಸೆಗಳಿಗೆ, ಬಾಲ್ಯದ ಕನಸುಗಳಿಗೆ ಸಹಾಯವಾಗಿ ನಿಂತವರು ತುಂಬಾ ಕಡಿಮೆ.

ಚಿಕ್ಕಂದಿನಲ್ಲೇ ತುಂಬಾ ಚುರುಕಾಗಿದ್ದ ಲಕ್ಷ್ಮೀನಾರಾಯಣ ವಿಷಯಗಳನ್ನ ಚೆನ್ನಾಗಿ ಗ್ರಹಿಸುತ್ತಿದ್ದ. ಇವನಿಗೆ ಆರು ವರ್ಷ ತುಂಬಿದರೂ ಶಾಲೆಗೆ ಸೇರಿಸುವ ಯಾವುದೇ ಆಸಕ್ತಿಯನ್ನ ಅಪ್ಪ ತೋರದಿದ್ದಾಗ ಯಾರೋ ತಿಳಿದವರು ಇವರಪ್ಪನಿಗೆ ಕರೆದು "ಅವನನ್ನ ಶಾಲೆಗಾದ್ರೂ ಸೇರಿಸು ಮಾರಾಯ ಪಾಪ ಮಗು ಚುರುಕು ಉಂಟು ಹುಡುಗ" ಅಂತ ಹೇಳಿದ ಮೇಲೆ ಅದೇ ಊರಿನಲ್ಲಿದ್ದ ಸರ್ಕಾರಿ ಶಾಲೆಗೆ ಸೇರಿಸಿದ್ರು ಅವನನ್ನ. ಓದಿನಲ್ಲಿ ಆಟದಲ್ಲ್ಲಿ ಎಲ್ಲದರಲ್ಲೂ ಚುರುಕಾಗಿದ್ದ ಲಕ್ಷ್ಮೀನಾರಾಯಣನಿಗೆ ಶಾಲೆಯಲ್ಲಿ ಆದದ್ದು ಕೂಡ ಕಹಿ ಅನುಭವಾನೆ . ಅದೇ ಊರಿನ ಶ್ರೀಮಂತ ಒಕ್ಕಲಿಗರ ಮನೆಯ ಹುಡುಗಿ ಇವನಿಗೆ ಎಲ್ಲಾ ವಿಷಯದಲ್ಲೂ ಪ್ರತಿಸ್ಪರ್ದಿ. ಇವನಷ್ಟೇ ಚುರುಕಾಗಿದ್ದ ಆ ಹುಡುಗಿ ಎಲ್ಲದರಲ್ಲೂ ಮೊದಲು ಬರಬೇಕೆಂಬುದು ಆ ಶಾಲೆಯ ಮಾಸ್ಟರ್ ಆಸೆ. ಹಾಗಾಗಿ ಇವನ ಬುದ್ದಿವಂತಿಕೆಗೆ ಭೇಷ್ ಅನ್ನಿಸಿಕೊಂಡಿದ್ಡಕಿಂತ ಬೈಸಿಕೊಂಡಿದ್ದೆ ಜಾಸ್ತಿ. ಶಾಲೆಯಲ್ಲಿ ನೆಡೆಯುವ ಎಲ್ಲಾ ಸ್ಪರ್ದೆಗಳಲ್ಲೂ ಇವನಿಗೆ ಎರಡನೇ ಸ್ಥಾನ. ಕೊನೆಗೆ ಪರೀಕ್ಷೆಯಲ್ಲೂ ಎರಡನೇ ಸ್ಥಾನ. ಹೀಗೇ ಅವನ ಯೋಗ್ಯತೆಗಳಿಂದ ವಂಚಿತಗೊಂಡ್ರು ಛಲ ಬಿಡದೆ ತನ್ನ ಪ್ರಯತ್ನಗಳನ್ನ ಮುಂದುವರೆಸಿದ್ದ ಲಕ್ಷ್ಮೀನಾರಾಯಣ. ಹಾಗೂ ಹೀಗೂ ಏಳನೇ ತರಗತಿಯರೆಗೂ ಬಂದು ತಲುಪಿದಾಗ ನೆಡೆದಿತ್ತು ಆ ದುರ್ಘಟನೆ.

ಅಮ್ಮನ ಅಸ್ತಂಗತ. ಇತ್ತೀಚೆಗೆ ತಾರಕಕ್ಕೇರಿದ್ದ ಅಪ್ಪನ ಕಾಟ ತಡೆಯಲಾರದೆ ಅಮ್ಮ ನೇಣಿಗೆ ಶರಣಾಗಿದ್ದಳು. ಅಲ್ಲಿಯವರೆಗೂ ಬದುಕಿದಿರೋ ಇಲ್ಲವೋ ಎಂದು ಕೇಳದಿದ್ದ ಸಂಬಂಧಿಕರೆಲ್ಲರೂ ಜಮಾಯಿಸಿದ್ದರು ಮನೆಯಲ್ಲಿ. ಅದರಲ್ಲಿ ಒಂದು ಗುಂಪು ಇದು ಆತ್ಮಹತ್ಯೆಯಲ್ಲ ಕೊಲೆ ಎಂಬ ನಿರ್ಧಾರಕ್ಕೆ ಬಂದು ಪೋಲೀಸ್ರನ್ನು ಕರೆಸಿ ಕಂಪ್ಲೇಂಟ್ ಸಹ ಮಾಡಿದ್ದರು. ಯಾರೋ ಪುಣ್ಯಾತ್ಮರು ಪಾಪ ಆಪ್ಪ ಜೈಲೆಗೆ ಹೋದ್ರೆ ಮಗು ಅನಾಥ ಆಗಿ ಬಿಡುತ್ತೆ ಅಂತ ಬೇಲ್ ಕೊಟ್ಟು ಅವನ ಅಪ್ಪನನ್ನು ಕಾಪಾಡಿದ್ದರು . ಇದ್ದಿದರಲ್ಲಿ ಲಕ್ಷ್ಮೀನಾರಾಯಣನಿಗೆ ಸ್ವಲ್ಪ ಪ್ರೀತಿ ತೋರಿಸಿದ್ದು ಅಂದ್ರೆ ಮನೆಗೆ ಕೆಲಸಕ್ಕೆ ಅಂತ ಬರುತ್ತಿದ್ದ ಆಳುಗಳು. ಇನ್ನೆಲ್ಲಾ ಬಂಧುಗಳೂ ಅಮ್ಮನ ಕಾರ್ಯ ಮುಗಿಸಿ ಹಿಂತಿರುಗಿ ಹೋದವರು ಯಾರು ಮನೆ ಕಡೆ ತಲೆ ಹಾಕಿರಲಿಲ್ಲ. ಇನ್ನೆಲ್ಲಿ ಮಗು ಜವಾಬ್ದಾರಿ ನಮ್ಮ ತಲೆ ಮೇಲೆ ಬರುತ್ತೋ ಅನ್ನೋ ತಲೆಬಿಸಿ ಅವರಿಗೆ. ಅಮ್ಮ ಇದ್ದಾಗ ಊಟವಾದರೂ ಸರಿಯಾದ ಸಮಯಕ್ಕೆ ಸಿಗುತ್ತಿದ್ದ ಲಕ್ಷ್ಮೀನಾರಾಯಣನಿಗೆ ಈಗ ಅದಕ್ಕೂ ಪರದಾಟ. ಬಂಧುಗಳಲ್ಲೇ ದೊಡ್ಡವರೊಬ್ಬರು ಒಂದು ಆಳಿಗೆ ಇವನಿಗೆ ಊಟ ತಿಂಡಿ ಮಾಡಿಕೊಡೋಕೆ ಹೇಳಿದ್ದರು. ಹೀಗೆ ಆಳು ಮಾಡಿದ ಊಟ ತಿನ್ನುತ್ತಾ ಇದ್ದ ಇವನನ್ನು ಜಾತಿ ಬಿಟ್ಟವನು ಎಂದು . ಇಡೀ ಬ್ರಾಹ್ಮಣ ಸಮುದಾಯ ಗುರುತಿಸಿಬಿಟ್ಟಿತ್ತು.

ಹೀಗೆ ಇರೊಬದ್ಲು ಪಟಾಶಾಲೆಗಾದ್ರೂ ಸೇರಿಸಿ ಮಠದವರು ನೋಡಿಕೊಳ್ತಾರೆ ಅಂತ ಯಾರೋ ಹೇಳಿದ್ದನ್ನು ಕೇಳಿದಾಗ ನಾನು ಮಂತ್ರ ಎಲ್ಲಾ ಕಲಿಯಲ್ಲ ನಾನು ಹೋದ್ರೆ ಸ್ಕೂಲ್ ಗೆ ಹೋಗೋದು ಅಂತ ಓಡಿದ್ದ ಲಕ್ಷ್ಮೀನಾರಾಯಣ. ಈ ಎಲ್ಲಾ ಪರಿಸ್ಥಿತಿಗಳ ನಡುವೆ ಆರಾಮಾಗಿ ಏಳನೇ ತರಗತಿ ಮುಗಿಸಿ ಮುಂದಕ್ಕೆ ಹೋಗಿದ್ದ ಲಕ್ಷ್ಮೀನಾರಾಯಣ. ಈಗ ಅವನ ಜೀವನದಲ್ಲಿ ಇದ್ದಿದ್ದು ಬರೆ ಶಾಲೆ, ಸಹಪಾಠಿಗಳು ಮಾತ್ರ. ಅಪ್ಪ ಬೆಳಿಗ್ಗೆ ಕುಡಿಯೋಕೆ ಶುರು ಮಾಡಿದ್ರೆ ರಾತ್ರಿವರೆಗೂ ಕುಡಿತ ಇದ್ದ. ಹಾಗೂ ಹೀಗೂ ಹತ್ತನೇ ತರಗತಿಯವರೆಗೂ ಬಂದು ತಲುಪಿದ್ದ ಲಕ್ಷ್ಮೀನಾರಾಯಣನಿಗೆ ನಾಟಕದಲ್ಲಿ ರಾಜ್ಯಮಟ್ಟದಲ್ಲಿ ಅತ್ಯುತ್ತಮ ನಟ ಅವಾರ್ಡ್ ಸಿಕ್ಕಿತ್ತು. ಆದರೆ ಅದಕ್ಕೆ ಸಂತೋಷಿಸುವ ಯಾವ ಸಂಗಾತಿಯೂ ಆವನೊಡನಿರಲಿಲ್ಲ .  ಹತ್ತನೇ ತರಗತಿಯಲ್ಲಿ ಚೆನ್ನಾಗಿ ಓದಿ ಸ್ಚೂಲ್‌ಗೆ ಫರ್ಸ್ಟ್ ಬಂದಿದ್ದ ಲಕ್ಷ್ಮೀನಾರಾಯಣನಿಗೆ ಮುಂದಿನ ಓದು ಹೇಗೆ ಅನ್ನೋ ಚಿಂತೆ ಹತ್ತಿಕೊಂಡಿತ್ತು.

ಕಾಲೇಜ್ಗೆ ಹೋಗಬೇಕಂದರೆ ಊರು ಬಿಡಬೇಕು. ಕುಡಿದು ಕುಡಿದು ಹತ್ತಾರು ರೋಗಗಳನ್ನು ಮೈಗೆ ಅಂಟಿಸಿಕೊಂಡಿರುವ ಅಪ್ಪ ಬೇರೆ. ಕಾಲೇಜ್ಗೆ ಕಟ್ಟೋಕೆ ಹಣಾನು ಇವನ ಹತ್ರ ಇರಲಿಲ್ಲ. ಬ್ರಾಹ್ಮಣರಿಗೆ ಯಾವ ಗೋವೆರ್ನ್‌ಮೇಂಟು, ಸಂಘ ಸಂಸ್ಥೆಗಳೂ ಸಹಾಯ ಮಾಡಲ್ಲ. ಮಂತ್ರ ಕಲಿಯುವುದಾದರೆ ಮಠದವರು ಸಹಾಯ ಮಾಡ್ತಾರೆ ಆದರೆ ಅದು ಇವನಿಗೆ ಇಷ್ಟ ಇಲ್ಲ. ಬ್ಯಾಂಕ್ನಲ್ಲಿ ಸಾಲ ಕೇಳೋಕೆ ಇವನ ಹತ್ತಿರ ಏನೂ ಇಲ್ಲ. ಮುಂದೆ ಏನು ಹೇಗೆ ಅಂತ ಕುಳಿತಿದ್ದ ಇವನಿಗೆ ದೊಡ್ಡವರೊಬ್ಬರು ಓದಿ ಯಾವ ದೇಶ ಉದ್ದಾರ ಮಾಡ್ಬೇಕು ನೀನು?? ಅಪ್ಪನ್ನ ನೋಡಿಕೊಂಡು ಮನೆಯಲ್ಲೇ ಇರೋ ತೋಟದಲ್ಲಿ ಕೃಷಿ ಮಾಡು, ಜೀವನ ಕಲಿ ಅಂದಾಗ ಆಯ್ತು  ಅನ್ನದೆ ಬೇರೆ ದಾರಿಯಿರಲಿಲ್ಲ ಲಕ್ಷ್ಮೀನಾರಾಯಣನಿಗೆ.

ತೋಟವೇಲ್ಲಾ ತಿರುಗಾಡಿದಾಗ ಲಕ್ಷ್ಮೀನಾರಾಯಣನಿಗೆ ಅರಿವಾಗಿದ್ದು ಅಲ್ಲಿ ಸರಿ ಇದ್ದಿದ್ದು ಯಾವುದೂ ಇರಲಿಲ್ಲ. ಯಾವುದೇ ಆರೈಕೆ ಇಲ್ಲದೆ ಗಿಡ ಮರಗಳು ಸೂರ್ಯನ ಕೋಪಕ್ಕೆ ತುತ್ತಾಗಿ ಬಾಡಿಹೋಗಿದ್ದವು. ಮೊಣಕಾಲೆತ್ತರ ಬೆಳೆದಿರುವ ಹುಲ್ಲು ಭೂಮಿಯ ಸಾರವನ್ನೆಲ್ಲಾ ಹೀರಿ ಅಡಿಕೆ ಸಸಿಗಳ ಬೆಳವಣಿಗೆಗೆ ಮಾರಕವಾಗಿದ್ದವು. ಕೊಲೆವೊಂದು ಕಡೆ ಮಳೆಯ ನೀರನ್ನು ಬಿಟ್ಟು ಇನ್ಯಾವ ನೀರನ್ನು ಕಾಣದ ಅಡಿಕೆ ಸಸಿಗಳು ಸುಟ್ಟು ಕರಕಲಾಗಿದ್ದವು. ಇಡೀ ತೋಟವನ್ನು ತಿರುಗಿದ ಲಕ್ಷ್ಮೀನಾರಾಯಣನಿಗೆ ಅನಿಸಿದ್ದು  ಈ ತೋಟವನ್ನು ಮತ್ತೆ ಸಹಜ ಸ್ಥಿತಿಗೆ ತಂದು ಸರಿಯಾದ ಆದಾಯ ಪಡೆಯಲು ಕಮ್ಮಿ ಅಂದರೂ ಐದು ವರ್ಷ ಬೇಕು ಅಂತ. ಆದರೂ ಛಲ ಬಿಡದ ಲಕ್ಷ್ಮೀನಾರಾಯಣ ಅದನ್ನು ಮತ್ತೆ ಸಹಜ ಸ್ಥಿತಿಗೆ ತರಲು ಮನಸ್ಸಿನಲ್ಲಿಯೇ ಸಜ್ಜಾಗತೊಡಗಿದ.

ಸ ಶೇ ಷ
ಪ್ರಿಯಾಂಕ್ ರಾವ್ 

Monday 4 January 2016

ಸಿಂಪಲ್ ಆಗಿ ಒಂದು ಊರ್ ಸ್ಟೋರೀ ಭಾಗ 5



ಮೈ ಮೇಲೆ ಹತ್ತುತ್ತಿದ್ದ ಜಿಗಣೆಗಳಿಗೆ ಲಿಂಬೆಹಣ್ಣು ತಾಗಿಸುತ್ತಾ(ಲಿಂಬೆಹಣ್ಣು ಹಾಗೂ ಉಪ್ಪು ನಿಮ್ಮನ್ನು ಜಿಗಣೆಗಳಿಂದ ಕಾಪಾಡೋಕೆ ಬಹಳ ಸಹಾಯಕಾರಿ) ಮುಂದೆ ಸಾಗುತ್ತಿದ್ದ ನಾನು ಯೋಚನಾ ಲಹರಿಯಲ್ಲಿ ಮುಳುಗಿದ್ದೆ. ಈ ಮನೆ ತೋಟ ಎಲ್ಲಾ ನಾನು ಹುಟ್ಟಿದಾಗಿನಿಂದ 16 ವರ್ಷದವರೆಗೂ ನನ್ನ ಜೀವನದ ಅವಿಭಾಜ್ಯ ಅಂಗಗಳಾಗಿದ್ದವು ಆದರೆ ಈಗ ಅದರ ಬಗ್ಗೆ ಒಲವು ತೋರಿಸಲು ಯಾರೂ ಇಲ್ಲದೆ ಸೊರಗಿ ಹೋಗಿವೆ. ನಮ್ಮ ತೋಟದಲ್ಲಿ ಇಲ್ಲದೆ ಇರುವ ಗಿಡಗಳು ತುಂಬಾ ಕಮ್ಮಿ . ಅಡಿಕೆ, ಕಾಫೀ , ಏಲಕ್ಕಿ, ಲವಂಗ, ಜಾಕಾಯಿ , ಸಪೋಟ , ದಾಲ್ಚಿನಿ , ನಿಂಬು , ಚಕ್ಕೋತ ಹೀಗೆ ಹೇಳ್ತಾ ಹೋದ್ರೆ ಮುಗಿಯದೆ ಇರೋವಷ್ಟು ಗಿಡಗಳು. ನಮ್ಮ ಅಪ್ಪ ಕೃಷಿ ಪ್ರಿಯ . ಅವರಿಗೆ ತೋಟ ಅಂದ್ರೆ ಪ್ರಾಣ ಆದರೆ ಕೆಲವೊಮ್ಮೆ ಜೀವನದಲ್ಲಿ ಎಲ್ಲಾನು ನಾವು ಅಂದುಕೊಂಡ ಹಾಗೆ ಆಗುವುದಿಲ್ಲ ನೋಡಿ. ನಾವು ಸುಂದರವಾದ ಊರು ಬಿಟ್ಟು ಜೀವನದ ಅನಿವಾರ್ಯತೆಗೆ ಬೆಂಗಳೂರು ಸೇರಿದೀವಿ. ಹಾಗೆ ತೋಟಕ್ಕೆ ಒಂದು ಸುತ್ತು ಬಂದು ನಮ್ಮ ಹಳೆಯ ಪ್ರೈಮರೀ ಸ್ಕೂಲ್ ಕಡೆ ಹೊರಟೆ.

ಊರಿನಲ್ಲಿರುವ ಎಲ್ಲಾ ಮಕ್ಕಳು ಓದ್ತಾ ಇದ್ದ ಶಾಲೆ ಇದು. ಸರ್ಕಾರಿ ಕಿರಿಯ ಪ್ರಾಥಮಿಕ ಪಾಟಶಾಲೆ. ನಾನು ಶಾಲೆಗೆ ಸೇರಿದಾಗ ಇದ್ದಿದ್ದು ಒಬ್ರು ಟೀಚರ್. ಅವ್ರು ಬಂದ್ರೆ ಮಾತ್ರ ಸ್ಕೂಲ್ ತೆರೀತಾ ಇದ್ರು ಇಲ್ಲಾಂದ್ರೆ ರಜೆ. ಈಗ ಆ ಸ್ಕೂಲ್ ಸಹಿತ ಮಕ್ಕಳಿಲ್ದೆ ಮುಚ್ಚೋ ಪರಿಸ್ಥಿತಿಗೆ ಬಂದಿದೆ. ಶಾಲೆಯ ಎದುರಿಗೆ ಇರುವ ಒಂದು ಚಿಕ್ಕ ಮೈದಾನ . ನಮ್ಮ ಊರಿನ ಎಲ್ಲಾ ಮಕ್ಕಳ ಬಾಲ್ಯಕ್ಕೆ  ಹಾಗೂ ಅವರ ಚೇಷ್ಟೆಗಳಿಗೆ ಮೂಕಪ್ರೇಕ್ಷಕ ಆಗಿತ್ತು ಆ ಮೈದಾನ. ಹಾಗೇ ಸುತ್ತ ನೋಡಿದ್ರೆ ಏನೋ ಮಿಸ್ ಆದ ಹಾಗೆ ಅನ್ನಿಸ್ತು. ಶಾಲೆಗೂ ಮುನ್ನ ನಮ್ಮ ಚೇಷ್ಟೆಗಳನ್ನ ಸಹಿಸಿಕೊಂಡ ಇನ್ನೊಂದೆನೋ ಮಿಸ್ ಆಗ್ತಿದೆ ಅಂತ ಅನ್ನಿಸ್ತು. ಹಾಗೇ ಯೋಚಿಸಿದಾಗ ತಲೆಗೆ ಬಂದಿದ್ದು ಅಂಗನವಾಡಿ. ನಿಮ್ಮಲ್ಲಿ ಎಷ್ಟು ಜನಕ್ಕೆ ಅಂಗನವಾಡಿ ಅಂದ್ರೆ ಏನು ಅಂತ ಗೊತ್ತು?? ಸರ್ಕಾರದಿಂದ ನೆಡೆಸ್ತ ಇದ್ದ ಮೊನ್ತೆಸ್ಸೊರಿ.  ಅದು. ಅಂಗನವಾಡಿಯಲ್ಲಿ ಕೊಡ್ತಾ ಇದ್ದ ಫುಡ್ ಗಾಗಿ ಅಲ್ಲಿ ಆಡಿಸೋ ಆಟಗಳಿಗಾಗಿ ಓಡೋಡಿ ಹೋಗ್ತಾ ಇದ್ವಿ. ಈಗ ಆ ಅಂಗನವಾಡಿ ಜಾಗದಲ್ಲಿ ಎರಡು ಖಾಲಿ ಮನೆಗಳಿವೆ. ಆ ಮನೆಗಳನ್ನ ಊರಿನವರು ಶಾಲೆಯ ಶಿಕ್ಷಕರಿಗಾಗಿ ಕಟ್ಟಿಸಿ ಕೊಟ್ಟಿರೋದು. ಯಾಕೆ ಅಂದರೆ ಬಸ್ ಸೌಲಭ್ಯ ಇಲ್ದೆ ಇರೋ ನಮ್ಮ ಊರಿಗೆ ಯಾವ ಶಿಕ್ಷಕರು ಬರೋಕೆ ತಯಾರಿರಲಿಲ್ಲ . ಊರಿನಲ್ಲಿ ಅವರಿಗೆ ಉಳಿದುಕೊಳ್ಳೋಕೆ ಯಾವುದೇ ವ್ಯವಸ್ತೆ ಇರಲಿಲ್ಲ . ಅದಿಕ್ಕೆ ಊರಿನವರೆಲ್ಲ ಸೇರಿ ಎರಡು ಮನೆ ಕಟ್ಟಿಸಿ ಅದನ್ನ ಶಿಕ್ಷಕರಿಗೆ ಕೊಟ್ಟಿದ್ರು. ಆದರೆ . ಈಗ ಯಾವ ಶಿಕ್ಷಕ ತಾನೇ ಮೂಲಭೂತ ಸೌಕರ್ಯಗಲಿಲ್ಲದಿರೊ ಈ ಹಳ್ಳಿಯಲ್ಲಿ ವಾಸ ಮಾಡೋಕೆ ಇಷ್ಟ ಪಡ್ತಾರೆ ಹೇಳಿ.
ಈಗಿನ ನಮ್ಮೊರಿನ ಪರಿಸ್ಥಿತಿಗೆ ಮನಸ್ಸಿನಲ್ಲೇ ವಿಷಾದಿಸುತ್ತ ವಾಪಸ್ ಮನೆ ಕಡೆಗೆ ಹೊರಟೆ. ಮನೆಯ ದಾರಿಯಲ್ಲಿಯೇ ಸಿಗುವ ಒಂದಿಬ್ಬರು ಪರಿಚಯದವರೊಡನೆ ಉಭಯಕುಶಲೋಪರಿ ಮಾತಾಡಿಕೊಂಡು ಮನೆಯ ಕಡೆ ಹೆಜ್ಜೆ ಹಾಕುತ್ತಿದ್ದೆ. ನಾವು ಮಿಡ್ಲ್ ಹೈ ಸ್ಕೂಲ್ ಹಾಗೂ ಹೈ ಸ್ಕೂಲ್ ಗೆ ಹೋಗೋವಾಗ ಪೋಸ್ಟ್‌ಮ್ಯಾನ್ ಕೆಲಸ ಮಾಡುತ್ತಿದ್ದ ನೆನಪು ಹಾಗೆಯೇ ನನ್ನ ಮನದಲ್ಲಿ ಸುಳಿಯಿತು.

ಮೊದಲೇ ಪ್ರಸ್ತಾಪಿಸಿರುವ ಹಾಗೆ ನಮ್ಮೋರಿಗೆ ಯಾವುದೇ ಬಸ್ ಸಂಚರವಿರಲಿಲ್ಲ. ಪಾಕದಲ್ಲೇ 5 ಕಿ ಮೀ ದೂರ ಇದ್ದ ಊರಿನಲ್ಲಿ ಇದ್ದ ಸರ್ಕಾರಿ ಮಿಡ್ಲ್ ಹೈ ಸ್ಕೂಲ್ ಹಾಗೂ ಹೈ ಸ್ಕೂಲ್ಗೆ  ನೆಡೆದುಕೊಂಡು ಹೋಗಿ ಬರುವುದು ಅಭ್ಯಾಸ. ನ್ಯೂಸ್ ಪೇಪರ್, ದಿನಸಿ ಸಾಮಗ್ರಿಗಳು, ಪೋಸ್ಟ್ ಆಫೀಸ್, ಗ್ರಾಮ ಪಂಚಾಯಿತಿ ಎಲ್ಲವೂ ಇದ್ದದ್ದು ಆ ಊರಿನಲ್ಲೇ. ದಿನಾ ಶಾಲೆಗೆ ಹೋಗಿ ಬರುವಾಗ ದಾರಿಯಲ್ಲಿ ಸಿಗುವವರ ಮನೆಗೆ ಬೇಕಾದ ವಸ್ತುಗಳನ್ನು ತಂದು ಕೊಡೋದು ನಮ್ಮ ಕೆಲಸ. ಹ್ಹಾಗೆಯೇ ಆ ಊರಿನ ಪೋಸ್ಟ್ ಮ್ಯಾನ್ ಕೆಲಸ ಕೂಡ ಅರ್ಧ ಕಮ್ಮಿ ಮಾಡ್ತ ಇದ್ದೋರು ನಾವು. ಅವರ ಮನೆಗಳಲ್ಲಿ ಯಾವುದೇ ಚಿಕ್ಕ ಪೂಜೆ ಅಥವಾ ಫಂಕ್ಶನ್ ಆದ್ರೂ ಸಂಜೆ ಶಾಲೆ ಮುಗಿಸಿ ಬರುವಾಗ ಊಟಕ್ಕೆ ಬಾ ಆಯ್ತಾ ಅಂತ ಕರಿಯೋರು. ನಾವು ಅದೇ ಕುಶಿಯಲ್ಲಿ ಅವರ ಮನೆಗೆ ಬೇಕಾದ ಸಕ್ಕರೆ, ಸೀಮೆ ಎಣ್ಣೆ ಎಲ್ಲದನ್ನೂ ತಂದು, ಅವರ ಮನೆಯಲ್ಲಿ ಮಾಡಿರೋ ಕೇಸರಿಭಾತ್ ತಿಂದು ಮನೆ ಕಡೆ ಓಡ್ತಾ ಇದ್ವಿ.  ಆದರೆ ಈಗ ಇರೋ ಮನೆಗಳಲ್ಲಿ ಅರ್ಧ ಮನೆಗಳು ಬೀಗ ಹಾಕಿವೆ. ಅರ್ಧ ಜನ ಜೀವನದ ಹುಡುಕಾಟದಲ್ಲಿ ಊರು ಬಿಟ್ಟು ಬೇರೆ ಊರು ಸೇರಿದ್ದಾರೆ. ಇಡೀ ಊರಿನಲ್ಲಿ ಸ್ಮಶಾನ ಮೌನ ಆವರಿಸಿದೆ. ಕೆಲವೊಮ್ಮೆ ನೋಡಿದರೆ ಊರು ವ್ರುದ್ದಾಶ್ರಮದ ಹಾಗೆ ಕಾಣುತ್ತೆ. ಯುವಕರೆಲ್ಲಾ ಊರು ತೊರೆದಿದ್ದಾರೆ. ಊರಿನಲ್ಲಿ ಇರುವವರಲ್ಲಿ ಬಹುಸಂಕ್ಯಾತರು ವೃದ್ದರೆ .

ಹೀಗೇ ತಲೆಯಲ್ಲಿ ಹಲವಾರು ಯೋಚನೆಗಳು ಭರದಿಂದ ಓಡ್ತಾ ಇದ್ವು. ಜನ ಊರು ಬಿಡೋಕೆ ಕಾರಣ ಏನು?? ನಾವು ಚಿಕ್ಕವರಿದ್ದಾಗ ಈ ಊರಿನ ಬಹುತೇಕ ಮನೆಗಳಿಗೆ ಕರೆಂಟ್ ಇಲ್ಲ, ಫೋನ್ ಇಲ್ಲ, ಆಸ್ಪತ್ರೆ ಇಲ್ಲ. ಹೀಗೇ ಮೂಲಭೂತ ಸೌಕರ್ಯಗಳಿಗೆ ಒದ್ದಾಡ್ತಾ ಇದ್ದ ಜನ  ಕ್ರಮೇಣವಾಗಿ ಊರನ್ನ ತೋರಿತಾ ಬಂದ್ರು. ಹುಡುಗರೆಲ್ಲಾ ವಿದ್ಯೆಗಾಗಿ ಕೆಲಸಕ್ಕಾಗಿ ಊರು ಬಿಟ್ರು. ಒಂದು ಕಾಲದಲ್ಲಿ ಹಲವಾರು ಒಳ್ಳೆಯ ವಿಷಯಗಳಿಗೆ ಹೆಸರುವಾಸಿಯಾಗಿದ್ದ ಒಂದು ಮಲೆನಾಡಿನ ಹಳ್ಳಿ ಇಂದು ಸ್ಮಶಾನ ಮೌನ ಆವರಿಸಿರುವ , ಜನರೇ ಕಾಣದ ಒಂದು ನಿರ್ಭಿದ ಪ್ರಧೆಶವಾಗಿದೆ .

ಆಗ ಈ ಊರಿನಲ್ಲಿ ಕರೆಂಟ್ ಇದ್ದ ಮನೆಗಳು ಕೆಲವೇ ಕೆಲವು. ಟೀವೀ ಇದ್ದ ಮನೆ ಒಂದೋ ಎರಡೋ. ಟೀವೀ ಯಲ್ಲಿ ಬರುತ್ತಿದ್ದ ಚ್ಯಾನೆಲ್ ಒಂದೇ ಅದು ಡಿ ಡಿ ನ್ಯಾಶನಲ್. ಆ ಒಂದು ಚ್ಯಾನೆಲ್ನಲ್ಲಿ ಭಾನುವಾರ ಹಾಕ್ತಾ ಇದ್ದ ಫಿಲ್ಮ್ ನೋಡೋಕೆ ಊರಲ್ಲಿರೋ ಹುಡುಗರೆಲ್ಲ ಟೀವೀ ಇರೋರ ಮನೆಯಲ್ಲಿ ಸೇರ್ತಾ ಇದ್ವಿ . ಭಾನುವಾರ ಡಿ ಡಿ ನ್ಯಾಶನಲ್ ನಲ್ಲಿ ಸಂಜೆ 4 ಘಂಟೆಗೆ ಒಂದು ಸಿನಿಮಾ ಹಾಕ್ತಾರೆ ಗೊತ್ತಲ್ಲ?? ಆ ಸಿನಿಮಾ ಒಂದೇ ನೋಡೋಕೆ ಸಿಗ್ತಾ ಇದ್ದಿದ್ದು ನಮಗೆ. ಬೇರೇ ಸಮಯದಲ್ಲಿ ಮನರಂಜನೆ ಅಂದ್ರೆ ಆಟ , ರೇಡಿಯೋ ಹಾಗೂ ಇನ್ನೂ ಕೆಲವರ ಮನೆಯಲ್ಲಿ ಟೇಪ್ ರೆಕಾರ್ಡರ್ ಇತ್ತು. ಆದರೆ ಟೇಪ್ ರೆಕಾರ್ಡರ್ ಊರಿಗೆ ಬಂದಿದ್ದು ನಾನು ಹುಟ್ಟಿ ಒಂದು ಹತ್ತು ಹನ್ನೆರಡು ವರ್ಷಗಳ ನಂತರ ಅನ್ಸುತ್ತೆ. ಸಿನಿಮಾ ಇರಬಹುದು ಅಥವಾ ಕ್ರಿಕೆಟ್ ಮ್ಯಾಚ್ ಇರಬಹುದು ಎಲ್ಲದಕ್ಕೂ ಒಂದೇ ಮನೆ ಅದು ಟೀವೀ ಇರುವವರ ಮನೆ. ಅವರೂ ಏನು ಬೇಜಾರು ಮಾಡ್ಕೋತಾ ಇರಲಿಲ್ಲ. ಯಾಕೆಂದ್ರೆ ಅವರಿಗೂ ನೋಡೋಕೆ ಕಂಪನೀ ಸಿಗೋದು ಅಂತ. ಆದ್ರೆ ಇವೆಲ್ಲಾ ಮಾಡೋಕೆ ಆಗ್ತಾ ಇದ್ದಿದ್ದು ಕರೆಂಟ್ ಇದ್ರೆ ಮಾತ್ರ. ನಮ್ಮೊರಿನಲ್ಲಿ ಕರೆಂಟ್ ಇರೋದಕ್ಕಿಂತ ಇಲ್ದೆ ಇರುವ ಸಮಯಾನೇ ಜಾಸ್ತಿ.

ಆದರೆ ಒಂದಂತೂ ಸತ್ಯ ಕರೆಂಟ್ ಟೀವೀ ಯಾವ್ದು ಇಲ್ದೆ ನಾವು ಬೇಳ್ಡ್ವಿ. ಈಗ ಜೀವನದಲ್ಲಿ ಜ್ಞಾಪಿಸಿಕೊಳ್ಳೋಕೆ ಹಲವಾರು ವಿಷಯಗಳಿವೆ, ನೆನಪುಗಳಿವೆ, ಕಲಿತಿರೋ ಹಲವು ಪಾಟಗಳಿವೆ, ಕಷ್ಟದ ಅನುಭವಗಳಿವೆ, ನೆರೆ ಹೊರೆಯವರ ಪ್ರೀತಿಯ ಮಮಕಾರದ ಸವಿ ನೆನಪುಗಳಿವೆ, ಕಂಡ ಕನಸುಗಳ ಅರಿವಿದೆ, ಹಳ್ಳಿಯ ಮತ್ತು ದಿಲ್ಲಿಯ ಜೀವನದ ವೈತ್ಯಾಸದ ಪರಿವಿದೆ.

ಇನ್ನಷ್ಟು ವಿಷಯಗಳನ್ನ ಮತ್ತೆ ಬಿಚ್ಚಿಡ್ತೀನಿ. ಆಲಿವರೆಗೂ ಇದನ್ನ ಓದಿ, ಶೇರ್ ಮಾಡಿ, ಮಲೆನಾಡಿನ ಜೀವನದ ಅರಿವನ್ನ ಜನ ಸವಿಯಲೀ.
ಸ ಶೇ ಷ 

Tuesday 17 September 2013

ರಸಾಯಣ ( Small Funny Story)




ಲೇ ಇವಳೇ ಚಡ್ಡೀವರೆಗೂ ಪೂರಾ ನೆಂದಿದೀನಿ ಕಣೆ , ಸ್ನಾನಕ್ಕೆ ಹೋಗ್ಲಾ ಅಂತ ಕಿರಿಚಿದ್ರು ನಮ್ಮ ಶ್ಯಾನಬೋಗ್ರು . ಅದ್ಯಾಕ್ರಿ ಅಷ್ಟು ಆತುರ ನಿಮಗೆ , ಸ್ವಲ್ಪ ಎಣ್ಣೆ ಮೈಗೆ ಇಳಿಯೊವರೆಗೂ ಕಾಯೋಕೆ ಆಗಲ್ವಾ ಅಂತ ಒಳಗಿಂದಲೇ ಉತ್ತರಿಸಿದ್ರು  ಅವರ ಮುದ್ದು ಮಡದಿ ಸಾವಿತ್ರಿ. ಹಿಂದಿನ ದಿನ ಸ್ವಲ್ಪ ಮೈ ಕೈ ನೋವಿದೆ ಅಂತ ಶ್ಯಾನುಬೋಗ್ರು ಹೇಳಿದ್ದಕ್ಕೆ ಬೆಳಿಗ್ಗೇನೇ ಎದ್ದು ಅವರ ಮೈಗೆ ಎಣ್ಣೆ ಹಚ್ಚಿ ಅಂಗಳದಲ್ಲಿ ಬಿಸಿಲು ಕಾಯಿಸೋಕೆ ಕೂರ್ಸಿದ್ರು ಸಾವಿತ್ರಮ್ಮ . ಇವರಿಗೆ ವಯಸ್ಸು ಕಮ್ಮಿ ಏನು ಆಗಿರ್ಲಿಲ್ಲ. ವಯಸ್ಸು 60 ದಾಟಿದ್ರೂನೂ ಗಟ್ಟಿ ಮುಟ್ಟಾಗಿ ಒಡ್ಯಾಡ್ಕೊಂಡು ಇದ್ರು ನಮ್ಮ ಶ್ಯಾನುಬೋಗ್ರು. ಸಾವಿತ್ರಮ್ಮ ಇವರ ಎರಡನೇ ಹೆಂಡತಿ. 16 ವರ್ಷಕ್ಕೇನೆ ಮೊದಲ ಮದುವೆ ಆದ ಶ್ಯಾನುಬೋಗ್ರಿಗೆ ಮೊದಲನೇ ಹೆಂಡತಿಯಿಂದ 4 ಜನ ಮಕ್ಳು , 5 ನೇ ಮಗು ಹೆರಿಗೆ ಸಮಯದಲ್ಲಿ ಹೆಂಡತಿ ಮತ್ತು ಮಗು ಇಬ್ರೂ ಕಾಲವಾದ ಮೇಲೆ ಎರಡನೇ ಮದುವೆ ಆದ್ರು ನಮ್ಮ ಶ್ಯಾನುಬೋಗ್ರು . ಸಾವಿತ್ರಮ್ಮನಿಗೂ 4 ಮಕ್ಳು . ಎಲ್ಲರೂ ಸಿಟೀನಲ್ಲಿ ಸೆಟ್ಲ್ ಆಗಿದಾರೆ. ಗಂಡ ಹೆಂಡತಿ ಮಾತ್ರ ಇಲ್ಲಿ ಇರೋದು . ದೇವರು ಕೊಟ್ಟಿರುವ ಆಸ್ತಿ ಚೆನ್ನಾಗಿರೋದ್ರಿಂದ ಆಳುಕಾಳುಗಳಿಗೆ ಏನು ಕಮ್ಮಿ ಇಲ್ಲ. ಆದರೂ ನಮ್ಮ ಶ್ಯಾನುಬೋಗ್ರು ಕೆಲವು ವಿಷಯಗಳಲ್ಲಿ ಸ್ವಲ್ಪ ಕಂಜೂಸ್.  ಸುಮ್ನೆ ದುಡ್ಡು ದಂಡ ಅಂತ ಗೊಣಗ್ತಾನೇ ಇರ್ತಾರೆ.

ಲೇ ನೋಡೆ ಊರ ಹೆಣ್ಣುಮಕ್ಳು ಎಲ್ಲ ನನ್ನ ಎಣ್ಣೆ ಹಚ್ಚಿರೋ ದೇಹ ನೋಡೋಕೆ ಮನೆ ಹತ್ರಾನೇ ಬಂದುಬಿಟ್ಟಿದಾರೆ ಅಂತ ಶ್ಯಾನುಬೋಗ್ರು ಹೇಳ್ದಾಗ ಒಳಗಡೆ ಯಾವುದೋ ಕೆಲಸದಲ್ಲಿ ಮೈ ಮರೆತಿದ್ದ ಸಾವಿತ್ರಮ್ಮ ಹಾಗೆ ಕಿಟಕಿಯಿಂದ ಆಚೆ ಇಣುಕಿದರು. ಎಲ್ಲ ಮನೆಯ ಹೆಣ್ಣಾಳುಗಳು ಕೆಲಸಕ್ಕೆ ಬಂದಿದ್ರು. ಹೊವ್ದು ಅವರು ನಿಮ್ಮ ಈ 60 ವರ್ಷದ ಮುಪ್ಪಿನ ದೇಹನ ನೋಡೋಕೆ ತಮ್ಮ ಗಂಡಂದಿರನ್ನ ಬಿಟ್ಟು ಇಲ್ಲಿಗೆ ಬಂದಿದಾರೆ , ಸುಮ್ನೆ ಬಿಸಿಲು ಕಾಯಿಸಿಕೊಳ್ಳಿ ಅಂತ ಗೊಣಗಿ ಬಂದವರಿಗೆ ಕಾಫೀ ಎಲೆ ಅಡಿಕೆ ರೆಡೀ ಮಾಡೋಕೆ ಶುರು ಮಾಡಿದ್ರು ಸಾವಿತ್ರಮ್ಮ. ಶ್ಯಾನುಬೋಗ್ರಿಗೆ ಹೆಂಗಸರ ಕಾಲು ಎಳಿಯೋಕೆ ತುಂಬಾ ಖುಷಿ. ಒಮ್ಮೊಮ್ಮೆ ಹೆಣ್ಣಾಳುಗಳಿಗೆ ಏನಮ್ಮ ಮುಖ ಒಂಥರಾ ಇದೆ ರಾತ್ರಿ ನಿದ್ದೆ ಮಾಡಿಲ್ವಾ ಗಂಡ ಹೆಂಡತಿ  ಅಂತ ಕೀಟಲೆಗೆ ಕೇಳಿ ಅವರ ಕೆಂಪಾದ ಮುಖ ನೋಡಿ ತಮ್ಮ ಮೀಸೆ ಆಡಿಯಲ್ಲೇ ನಗ್ತಾ ಇದ್ರು . ಶ್ಯಾನುಬೋಗ್ರು ರಸಿಕರು ಈಗ್ಲೂ ಸಾವಿತ್ರಮ್ಮಂಗೆ ಕಾಟ ಕೊಡ್ತಾರೆ ಅನ್ಸುತ್ತೆ ಅಂತ ಹೆಣ್ಣಾಳುಗಳು ಮಾತಾಡಿಕೊಳ್ಳೋರು. 

ಲೇ ಶಂಕ್ರ ಎಲ್ಲೇ ಎಂದಾಗ ಇಲ್ಲೆ ಎಲ್ಲೋ ಹಸುಗೆ ಹುಲ್ಲು ತರೋಕೆ ಹೋಗಿದಾನೆ ಅಂದ್ರು ಸಾವಿತ್ರಮ್ಮ. ಶಂಕ್ರ ಇವರ ಪಟ್ಟ ಶಿಷ್ಯ . ಬೆಪ್ಪ ಶಂಕ್ರ ಅಂತಾನೆ ಹೆಸರುವಾಸಿ ಆಗಿರೋ ಇವನನ್ನ ಮಗನಿಗಿಂತಲೂ ಚೆನ್ನಾಗಿ ನೋಡ್ಕೊಂಡಿದಾರೆ ಶ್ಯಾನುಬೋಗ್ರು . ಒಮ್ಮೆ ಅಭ್ಯಂಜನ ಮಾಡ್ಬೇಕು ಒಲೆಗೆ ಬೆಂಕಿ ಹಾಕು ಅಂದಾಗ ಕಾಲಿ ಹಂಡೆಗೆ ಬೆಂಕಿ ಹಾಕಿ, ಅದು ತಳ ಸುಟ್ಟು ಮನೆ ಎಲ್ಲಾ ವಾಸನೆ ಆದ ಮೇಲೆ ಶ್ಯಾನುಬೋಗ್ರ ಕೈಯಲ್ಲಿ ಚೆನ್ನಾಗಿ ಬೈಸಿಕೊಂಡಿದ್ದ. ಹೀಗೆ ದಿನ ಏನಾದ್ರೂ ಒಂದು ಬೆಪ್ಪು ಕೆಲಸ ಮಾಡ್ತ ಇದ್ದ ಇವನು ಬೆಪ್ಪ ಶಂಕ್ರ ಅಂತಾನೆ ಹೆಸರುವಾಸಿ. ಒಮ್ಮೆ ಹಸು ಹೀಟ್ ಗೆ ಬಂದಿದೆ ಹೋರಿ ಕರ್ಕೊಂಡ್ ಬಾ ಅಂತ ಕಳಿಸಿದ್ರೆ ಕೋಣನ ಕರ್ಕೊಂಡು ಬಂದಂಥ ಬೂಪ. ಅದನ್ನ ನೋಡಿ ತಲೆ ಚೆಚ್ಚಿಕೊಂಡ ಶ್ಯಾನುಬೋಗ್ರು ನೀನೇನು ಹೊಸ ಪ್ರಾಣಿ ಸೃಷ್ಟಿಸೋಕೆ ಹೊರ್ಟಿದಿಯಾ?? ಎಲ್ಲಾ ಬೀಗಾನೂ ಒಂದೇ ಕೀ ನಲ್ಲಿ ತೆಗೆಯೋಕೆ ಆಗಲ್ಲ !! ಅದಕ್ಕೆ ಅಂತಾನೆ ಬೇರೆ ಕೀ ಇರುತ್ತೆ , ನಿನಗೆ ಇದನ್ನ ಅರ್ಥ ಮಾಡಿಸೋ ಅಷ್ಟರಲ್ಲಿ ನನ್ನ ಜೀವನ ಮುಗಿದಿರುತ್ತೆ  ಅಂತ ಗುಡುಗಿದ್ರು .  ಆದರೂ ಅವ್ನನ್ನ ಕಂಡ್ರೆ ಏನೋ ಪ್ರೀತಿ ಶ್ಯಾನುಬೋಗ್ರಿಗೆ.

ಏನೇ ಅಂದ್ರು ನಮ್ಮ ಶ್ಯಾನಬೋಗ್ರು ಒಮ್ಮೆ ಮಾಡಿದ ಕೆಲಸದಿಂದ ಇಡೀ ಊರಿನಲ್ಲೇ ಪಂಚೆ ಶ್ಯಾನಬೋಗ್ರು  ಅಂತ ಫೇಮಸ್ ಆಗೋದ್ರು. 5 ವರ್ಷದ ಹಳೇ ಕಥೆ . ಶ್ಯಾನಬೋಗ್ರಿಗೆ ಸರಿ ಸುಮಾರು 55 ವರ್ಷ .  ಅದೊಂದು ಭಾನುವಾರ , ಮಳೆ ಬೇರೆ ಚಿಕ್ಕದಾಗಿ ಸುರಿತ ಇತ್ತು. ನಮ್ಮ ಶ್ಯಾನಬೋಗ್ರಿಗೆ ನೀರ್ ದೋಸೆ ಜೊತೆ ಮಾವಿನ ಹಣ್ಣಿನ ರಸಾಯಣ ತಿನ್ಬೇಕು ಅನ್ನೋ ಆಸೇ. ಲೇ ಇವಳೇ ಇವತ್ತು ನೀರ್ ದೋಸೆ ರಸಾಯಣ ಮಾಡ್ಟ್ಯೇನೆ ?? ಮಾವಿನ ಹಣ್ಣು ತಗೊಂಡ್ ಬರ್ತೀನಿ ಅಂತ ಕೇಳ್ದಾಗ, ಸಾವಿತ್ರಮ್ಮ ವಯಸ್ಸು 50 ಆದ್ರೂ  ನಿಮಗೆ ಇನ್ನೂ ಬಾಯಿ ಚಪಲ ಹೋಗಿಲ್ಲ, ಮಾವಿನ ಹಣ್ಣು ತಗೊಂಡು ಬನ್ನಿ ಮಾಡಿಕೊಡ್ತೀನಿ ಅಂತ ಹೇಳಿದ್ರು.  ಪೇಟೆಗೆ ಹೋಗಿ ಬರೋಣ ಅಂದ್ರೆ ಮಳೆ ಬಂದು ಮರ ಬಿದ್ದಿರೋದ್ರಿಂದ  ಇದ್ದ ಒಂದು ಬಸ್ ಕೂಡ ಇವತ್ತು ಬರೋದಿಲ್ಲ, ಬೇರೆ ಗಾಡಿ ಮಾಡ್ಕೊಂಡು ಹೋಗಿ ಮಾವಿನ ಹಣ್ಣು ತರೋಕೆ ಏನಿಲ್ಲ ಅಂದ್ರು 200 ರೂಪಾಯೀ ಕರ್ಚಾಗುತ್ತಲ್ಲ. ಮಾವಿನ ಹಣ್ಣು ಬೇರೆ ಕೆಜಿಗೆ 50 ರೂಪಾಯೀ ಹೇಳ್ತಾರೆ ಅಷ್ಟು ದುಡ್ಡು ಕರ್ಚು ಮಾಡಿ ರಸಾಯಣ ತಿನ್ಬೇಕಾ ಅನ್ನೋ ಜಿಪುಣತನದ ಆಲೋಚನೆಯೊಂದು ಶ್ಯಾನಬೋಗ್ರ  ತಲೆಯಲ್ಲಿ ಸುಳಿದಾಡಿತ್ತು .  ಲೇ ಇವಳೇ , ಇವತ್ತು ಪೇಟೆ ಮಾವಿನಹಣ್ಣು ಬೇಡ , ನಾನು ಶಂಕ್ರ ಇಲ್ಲೇ ಕಾಡಿಗೆ ಹೋಗಿ ಕಾಡು ಮಾವಿನ ಹಣ್ಣು ತಗೊಂಡು ಬರ್ತೀವಿ . ಕಾಡು ಮಾವಿನ ಹಣ್ಣಿನ ರುಚೀನೇ ಬೇರೆ ಬಿಡು ಏನ್ ಅಂತೀಯಾ ಅಂದಾಗ ನಿಮ್ಮ ಜಿಪುಣತನದ ಬುದ್ದಿ ನನಗೆ ಗೊತ್ತಿಲ್ವಾ , ಹೋಗಿ ಹೋಗಿ ಆದ್ರೆ ಹುಷಾರು, ಮಳೆ ಬೇರೆ ತುಂಬಾ ಜಾರುತ್ತೆ, ಜಿಗಣೆ ಕಾಟ ಬೇರೆ. ಲೇ ಶಂಕ್ರ ಹುಷಾರಾಗಿ ಕರ್ಕೊಂಡು ಹೋಗು ಅಂತ ಹೇಳಿ ಸುಮ್ನಾದ್ರು ಸಾವಿತ್ರಮ್ಮ. ಏನ್ ನಾನು ನೋಡ್ದೆ ಇರೋ ಕಾಡೆನೆ ?? 50 ವರ್ಷದಿಂದ ಓಡಾಡಿದೀನಿ ಗೊತ್ತಾ , ಲೇ ಶಂಕ್ರ ಬಾರೋ ಅಂತ ತಮ್ಮ ಶಿಷ್ಯನ್ನ ಕರ್ಕೊಂಡು ಹೊರಟೇ ಬಿಟ್ರು ಶ್ಯಾನಬೋಗ್ರು .

ಕೈಯಲ್ಲಿ ಒಂದು ಕೋಲು ಹಿಡಿದು ಹುಷಾರಾಗಿ ಹೆಜ್ಜೆ ಹಾಕ್ತಿದ್ದ್ರು ಶ್ಯಾನಬೋಗ್ರು . ಕುರಿ ಹಿಂದೆ ಮರಿ ಹೋಗುವ ಹಾಗೆ ಅವರನ್ನೇ ನಿಧಾನವಾಗಿ ಹಿಂಬಾಲಿಸುತ್ತಿದ್ದ ನಮ್ಮ ಬೆಪ್ಪ ಶಂಕರ. ಹಾಗೆ  ನೆಡಿತಾ ನೆಡಿತಾ ತೋಟದ ಕೊನೆಗೆ ಬಂದು ತಲುಪಿದ್ರು ಶ್ಯಾನಬೋಗ್ರು. ತೋಟ  ದಾಟಿ 2 ಕಿ ಮೀ ಕಾಡೊಳಗೆ ಹೋದರೆ ಮಾವಿನ ಮರ ಸಿಗುತ್ತೆ.  ತೋಟದ ಕೊನೆಯಲ್ಲಿ ಬಗ್ಗಿ  ನಿಂತು ಕೆಲಸ ಮಾಡ್ತಿದ್ದ ಹೆಣ್ಣಾಳುಗಳನ್ನ ನೋಡಿ ಕೀಟಲೆಯಿಂದ ಹುಷಾರು ಕಣ್ಣ್ರಮ್ಮಾ ಹಗಲೆಲ್ಲಾ ಬಗ್ಗಿ ಕೆಲಸ ಮಾಡಿ ಸೊಂಟ ನೋಯಿಸಿಕೊಂಡ್ರೆ ರಾತ್ರಿಗೆ ಕಷ್ಟ ಆಗುತ್ತೆ ಅಂದ್ರು ಶ್ಯಾನಬೋಗ್ರು.  ಅಯ್ಯೋ ಶ್ಯಾನಬೋಗ್ರೇ ನಾವು ಹೇಗೋ ಸುದಾರಿಸಿಕೊಳ್ತೀವಿ ನೀವು ಹುಷಾರಾಗಿ ಹೋಗಿ , ಬಿದ್ದು ಸೊಂಟ ಮುರ್ಕೊಂಡ್ರೆ ಪಾಪ ಸಾವಿತ್ರಮ್ಮಂಗೆ ಕಷ್ಟ ಅಂದ್ಲು ಹೆಣ್ಣು ಮಗಳು ಒಬ್ಳು.  ಎಂಟು ಮಕ್ಲಾದಾಗ ಮುರಿದೆ ಇರೋ ಸೊಂಟ ಈಗ ಮುರಿಯುತ್ತಾ ಎಂದು ನಗುತ್ತಾ ಹೇಳಿದ ಶ್ಯಾನುಬೋಗ್ರು ಬೇಲಿ ಕಡೆ ಹೆಜ್ಜೆ ಹಾಕಿದ್ರು. ಬೇಲಿ ದಾಟುವುದಕ್ಕೆ ಇದ್ದ ಚಿಕ್ಕ ಜಾಗದಲ್ಲಿ ಇದ್ದ ಮರದ ಮೇಲೆ ಕಾಲಿಟ್ಟು ಆಚೆ ಇನ್ನೊಂದು ಕಾಲಿಟ್ರು ಶ್ಯಾನಬೋಗ್ರು . ಹೆಣ್ಣು ಮಕ್ಕಳನ್ನ ಕಾಡಿಸೋ ಉತ್ಸಾಹದಲ್ಲಿದ್ದ ಶ್ಯಾನುಬೋಗ್ರಿಗೆ ಮುಳ್ಳಿಗೆ ಸಿಕ್ಕಿ ಹಾಕಿಕೊಂಡ ಅವರ ಪಂಚೆಯ ಅರಿವಿರಲಿಲ್ಲ.  ತಮ್ಮ ಇನ್ನೊಂದು ಕಾಲನ್ನ ಆಚೆ ಇಟ್ಟು ಜಿಗಿದಾಗಲೇ ಗೊತ್ತಾಗಿದ್ದು ಅವರು ಮಾತ್ರ ಬೇಲಿ ಆಚೆ  ಇದ್ರು  ಅವರ ಪಂಚೆ ಬೇಲಿಗೆ ಸಿಕ್ಕಿಕೊಂಡು ನೇತಾಡುತ್ತಾ ಇತ್ತು. ಬರೇ ಲಂಗೋಟಿಯಲ್ಲಿ ನಿಂತಿದ್ದ ಅವರನ್ನ ನೋಡಿ ಹೆಣ್ಣಾಳುಗಳೆಲ್ಲಾ ನಗೋಕೆ ಶುರು ಮಾಡಿದ್ರು. ಅಯ್ಯೋ ಶ್ಯಾನಬೋಗ್ರೇ ಇದೇನ್ ಮಾಡ್ಕೊಂಡ್ರಿ ಅಂತ ಕೇಳಿದ್ದ ಹುಡುಗಿಗೆ ಏನು ಹೇಳೋದು ಅಂತ ಗೊತ್ತಾಗ್ದೇ ಇದ್ರೂನೂ , ತಮ್ಮ ಹಾಸ್ಯ ಪ್ರಜ್ಞೆ ಮರಿದೆ ಯಾಕಮ್ಮ ಎಲ್ಲಾ ಹಾಗೆ ನೋಡಿ ಕಿಸಿತಾ ಇದೀರಾ?? ನಿಮ್ಮ ಗಂಡಂಗೆ ಇಲ್ದೆ ಇರೋದೇನು ನನ್ನ ಹತ್ರ ಇಲ್ಲಾ ಸುಮ್ನೆ ಕೆಲ್ಸ ನೋಡಿ , ಲೇ ಶಂಕರ ಆ ಪಂಚೆ ತಗೊಂಬಾ ಹುಷಾರು ಹರಿದುಬಿಟ್ಟಾತು ಅಂದ್ರು. ನಮ್ಮ ಬೆಪ್ಪ ಶಂಕ್ರ ಅದನ್ನ ಮುಳ್ಳಿಂದ ಬಿಡಿಸ್ದೇ ಹಾಗೆ ಎಳೆದಾಗ ಅರ್ದ ಹರಿದು ಕೈಗೆ ಬಂದಿತ್ತು ಪಂಚೆ.

ಆ ಹರಿದ ಪಂಚೆನ ಸೂತ್ಕೊಂಡು , ಏನೂ ಆಗಿಲ್ಡೆ ಇರೋ ತರ ಕಾಡಿನ ಕಡೆ ಹೆಜ್ಜೆ ಹಾಕಿದ್ರು ಶ್ಯಾನಬೋಗ್ರು. ಹಾಗೂ ಹೀಗೂ ಮಾವಿನ ಮರದ ಹತ್ರ ಹೋಗಿ ಒಂದು ಬ್ಯಾಗ್ ತುಂಬಾ ಮಾವಿನ ಹಣ್ಣು ತುಂಬಿಸಿಕೊಂಡು , ವಾಪಸ್ ಮನೆ ಕಡೆ ಹೆಜ್ಜೆ ಹಾಕೋಕೆ ಶುರು ಮಾಡಿದ್ರು ಶ್ಯಾನಬೋಗ್ರು. ಮಳೆ ಬೇರೆ ಜೋರಾಗಿ ಕೊಡೆ ಇದ್ರೂನೂ ಮೈ ಎಲ್ಲಾ ಒದ್ದೆ ಆಗ್ತಿತ್ತು. ಕೈಯಲ್ಲಿ ಹಿಡಿದ ಕೋಲಿನ ಸಹಾಯದಿಂದ ಬೆಟ್ಟದ ತರ ಇದ್ದ ಜಾಗದಿಂದ ಹುಷಾರಾಗಿ ಇಳಿತ ಇದ್ರು ಶ್ಯಾನಬೋಗ್ರು . ಹೀಗೆ ಯಾವುದೋ ಯೋಚನೆಯಲ್ಲಿ ಇಟ್ಟ ಹೆಜ್ಜೆ ಭಸ್ಸ್ ಎಂದು ಜಾರಿದಾಗ ಎದೆ ದಸ್ಸಕ್ ಅಂದಿತ್ತು ಶ್ಯಾನಬೋಗ್ರಿಗೆ. ಒಂದಿಂಚು ಜಾರಿದ ಕಾಲು , ನಿಲ್ಲೋಕೆ ಆಗ್ದೇ ಹಾಗೆ ಜಾರಿ ಬಿದ್ರು ಶ್ಯಾನಬೋಗ್ರು. ಬಿದ್ದ ರಭಸಕ್ಕೆ ಪಂಚೆ ಕಲ್ಲಿಗೆ ಸಿಕ್ಕಿಕೊಂಡು ಮುಕ್ಕಾಲು ಹರಿದುಹೋಗಿ ಬರೆ ಒಂದು ಟವಲ್ ನಷ್ಟು ಮಾತ್ರ ಉಳ್ಡಿತ್ತು. ಸೊಂಟ ಬೇರೆ ಸ್ವಲ್ಪ ನೋಯ್ತಾ ಇತ್ತು. ಇವತ್ತು ಬೆಳಿಗ್ಗೇನೇ ನಿನ್ನ ಮುಕಾ ನೋಡ್ದೆ ಅನ್ಸುತ್ತೆ. ಎಲ್ಲ ಎಡವಟ್ಟಾಗ್ತಾ ಇದೆ ಎಂದು ಶಂಕ್ರಂಗೆ ಬೈದು, ಪಂಚೆನ ಟವಲ್ ತರ ಉಟ್ಕೊಂಡು, ಆಗ್ತಾ ಇದ್ದ ನೋವನ್ನ ಸಹಿಸಿಕೊಂಡು ಮನೆ ಕಡೆ ಹೆಜ್ಜೆ ಹಾಕಿದ್ರು.  ದಾರಿಯಲ್ಲಿ ಸಿಗುವವರೆಲ್ಲಾ ಮುಸಿ ಮುಸಿ ನಗುತ್ತಾ ಏನ್ ಶ್ಯಾನಬೋಗ್ರೇ?? ಮಾವಿನ ಹಣ್ಣಾ ?? ರಸಾಯಣ ಜೋರಾ?? ಏನಾಯ್ತು ಪಂಚೆಗೆ ಅಂತಾ ಕೇಳ್ತಾ ಇದ್ರೆ ಶ್ಯಾನಬೋಗ್ರಿಗೆ ಏನು ಹೇಳ್ಬೇಕು ಅಂತಾ ಗೊತ್ತಾಗದೆ ಏನು ಮಾಡೋದಪ್ಪಾ ವಯಸ್ಸಾಯ್ತು ಅಂತ ಹೇಳಿ ಮನೆ ಕಡೆ ಹೆಜ್ಜೆ ಹಾಕಿದ್ರು.

ವೈದ್ಯರಿಗೆ 300 ರೂಪಾಯೀ,  ಪಂಚೆಗೆ 200 ರೂಪಾಯೀ ಮತ್ತು ಹೋದ ಮರ್ಯಾದೆಗೆ ದುಡ್ಡು ಎಣಿಸೋಕೆ ಆಗಲ್ಲ ಅಂತ ಮನಸ್ಸಿನಲ್ಲೇ ಕೊರಗುತ್ತ ರಸಾಯಣ ತಿಂದ ಶ್ಯಾನಬೋಗ್ರು ಅಂದಿನಿಂದ ಪಂಚೆ ಶ್ಯಾನಬೋಗ್ರು ಅಂತ ಫೇಮಸ್ ಅಗೋದ್ರು. 

Monday 9 September 2013

ಲೂಸಿಯ ಅನ್ನೋ ಸ್ವಪ್ನ ಕಥೆ ( Small Review)

ಲೂಸಿಯ ಅನ್ನೋ ಸ್ವಪ್ನ ಕಥೆ

ಮೂವೀ ನೋಡಿದ ಮೇಲೆ ನಂಗೊಂದು ಲೂಸಿಯ ಮಾತ್ರೆ ಇದ್ರೆ ಕೊಡಿ ಮಾರಾಯ್ರೆ ಜೀವನ ಸಾಕಾಗಿ ಹೋಗಿದೆ ಅಂತ ಹೇಳುವ ಜನರನ್ನ ತುಂಬಾ ನೋಡಿದೆ.
ನಾನು ಒಂದು ಬಾರಿ ಈ ಮೂವೀ ನೋಡಿ ರಿವ್ಯೂ ಬರೀತಾ ಇದೀನಿ. ಇನ್ನೊಮ್ಮೆ ನೋಡಿದ್ರೆ ಬಹುಶ್ಯ ಇನ್ನೂ ಚೆನ್ನಾಗಿ ಕಥೆ ಅರ್ಥ ಆಗಬಹುದು ಅನ್ನಿಸುತ್ತೆ.

ಇನ್ಸೋಮೇನಿಯಾ ( ನಿದ್ರೆ ಬರದೇ ಇರುವ ಕಾಯಿಲೆ ) ಇರುವ ಒಬ್ಬ ಹುಡುಗನ ಸುತ್ತ ಹೆಣೆದಿರುವ ಕಥೆ ಇದು. ಕನ್ನಡದಲ್ಲಿ ಪ್ರಪ್ರಥಮ ಬಾರಿಗೆ ಆಡಿಯೆನ್ಸ್ ದುಡ್ಡು ಹಾಕಿ ತೆಗೆದಿರುವ ಮೂವೀ. ಸುಮಾರು 1700 ಜನ ತಮ್ಮ ಹಣವನ್ನು ಇದಕ್ಕೆ ಹಾಕಿದ್ದಾರೆ . ಹೀಗೊಂದು ವಿಭಿನ್ನ ಪ್ರಯತ್ನಕ್ಕೆ ಕೈ ಹಾಕಿ ಯಶಸ್ವಿ ಆಗ್ತಾ ಇರೋರು ಇನ್ಯಾರು ಅಲ್ಲ ನಮ್ಮ ಲೈಫ್ ಇಷ್ಟೇನೆ ಮೂವೀ ಡೈರೆಕ್ಟರ್ ಪವನ್ ಕುಮಾರ್ ಅವರು. ಕನಸಿನ ಲೋಕ ಹಾಗೂ ನಿಜ ಜೀವನದ ಮದ್ಯೆ ಹೆಣೆದಿರುವ ಕಥೆಯನ್ನು ತುಂಬಾ ಚೆನ್ನಾಗಿ ನ್ಯಾರೇಟ್ ಮಾಡಿದ್ದಾರೆ ಡೈರೆಕ್ಟರ್ ಪವನ್ ಕುಮಾರ್.  ನಿದ್ರೆ ಬಾರದೆ ಇರೋ ಹುಡುಗ ಲೂಸಿಯ ಅನ್ನೋ ಕೆಮಿಕಲ್ ಹೆಲ್ಪಿಂದ ಸುಂದರವಾದ ಕನಸುಗಳನ್ನ ಕಾಣೋಕೆ ಶುರು ಮಾಡ್ತಾನೆ. ಅವನು ನಿಜ ಜೀವನದಲ್ಲಿ ಮಾಡೋಕೆ ಆಗದೆ ಇರುವ ಕೆಲಸಗಳ ಬಗ್ಗೆ ಕನಸು ಕಟ್ತಾನೆ. ಇನ್ನೊಂದು ಕಡೆ ಪೋಲೀಸ್ ಲೂಸಿಯ ಡ್ರಗ್ ಬಗ್ಗೆ ಇನ್ವೆಸ್ಟಿಗೇಶನ್ ಮಾಡ್ತಾ ಇರ್ತಾರೆ. ಹೀಗೆ ಹೀರೊನಾ ನಿಜ ಜೀವನ, ಕನಸು ಮತ್ತು ಪೋಲೀಸ್ ಇನ್ವೆಸ್ಟಿಗೇಶನ್  ಮೂರು ಸ್ಟೋರಿಗಳು ಪರಲ್ಲೆಲ್ಲ್ ಆಗಿ ಮೂವ್ ಆಗುತ್ತೆ. ಹೀರೊ ನೀ ನಾ ಸಂ ಸತೀಶ್ ಅವ್ರ ಆಕ್ಟಿಂಗ್ ಗೆ ಫುಲ್ ಕ್ರೆಡಿಟ್.  ನಿಜ ಜೀವನ ಹಾಗೂ ಕನಸಿನ ಜೀವನದ ರೋಲ್ ಗಳನ್ನು ತುಂಬಾ ಚೆನ್ನಾಗಿ ನಿಭಾಯಿಸಿದ್ದಾರೆ.

ಮೂರು ಸ್ಟೋರೀಗಳನ್ನ ಬ್ಯಾಲೆನ್ಸ್ಡ್ ಆಗಿ ತಗೊಂಡು ಹೋಗ್ತಾರೆ ಡೈರೆಕ್ಟರ್. ಅವರ ನಾರೇಶನ್ ಸ್ಟೈಲ್ , ಎಡಿಟಿಂಗ್ ಸ್ವಲ್ಪ ಉಪೇಂದ್ರ ಅವರ ಏ  ಮೂವೀ ಜ್ಞಾಪಕಕ್ಕೆ ತಂದ್ರುನೂ ಇದು ಏ ಗಿನ್ನಾ ತುಂಬಾ ಭಿನ್ನವಾಗಿ ಹಾಗೂ ಅಪರೂಪದ ಮೂವೀ ಆಗಿ ಹೊರಬಂದಿದೆ. ಪ್ರೇಕ್ಷಕನಿಗೆ ಯಾವುದು ನಿಜ , ಯಾವುದು ಡ್ರೀಮ್ ಅನ್ನೋ ಇಕ್ಕಟ್ಟಿನಲ್ಲಿ ಸಿಕ್ಕಿಸೋ ಮೂವೀ ಸಸ್ಪೆನ್ಸ್ ಮೇನ್‌ಟೇನ್ ಮಾಡುವುದರಲ್ಲಿ ಯಶಸ್ವಿಯಾಗಿದೆ.  ಕನ್ನಡದಲ್ಲಿ ಯಾಕೆ ಡಿಫರೆಂಟ್ ಮೂವೀಸ್ ಟ್ರೈ ಮಾಡಲ್ಲ ಅಂತ ಕೇಳುವವರಿಗೆ ಪವನ್ ಕುಮಾರ್ ಒಂದು ಒಳ್ಳೆಯ ಉತ್ತರ ಕೊಟ್ಟಿದ್ದಾರೆ . ಹೊಸ ಸಂಗೀತ ನಿರ್ದೇಶಕ ಪೂರ್ಣಚಂದ್ರ ತೇಜಸ್ವಿ ಅವರ ಮ್ಯೂಸಿಕ್ ಸುಪರ್ಬ್. ಹೇಳು ಶಿವ, ತಿನ್ಬೇಡ ಕಮ್ಮಿ, ಜಮ್ಮಾ ಜಮ್ಮಾ ಹಾಡುಗಳು ಪ್ರೇಕ್ಷಕನನ್ನು ಮೆಚ್ಚಿಸುವಲ್ಲಿ ಯಶಸ್ವಿ ಆಗಿದೆ.  ನಾಯಕಿ ಶ್ರುತಿ ಹರಿಹರನ್ ಅವರ ಆಕ್ಟಿಂಗ್ ಕೂಡ ತುಂಬಾ ಚೆನ್ನಾಗಿದೆ.  ಕ್ಯಾಮರ ವರ್ಕ್ ಅಂತೂ ತುಂಬಾನೇ ಚೆನ್ನಾಗಿದೆ. ಏಚ್ ಡೀ ಪಿಕ್ಚರ್ ಕ್ವಾಲಿಟೀ.

ಲಂಡನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಬೆಸ್ಟ್ ಫಿಲ್ಮ್ ಆಡಿಯೆನ್ಸ್ ಚಾಯ್ಸ್ ಗೆದ್ದಿರುವ ಈ ಮೂವೀಯನ್ನ ಕಂಡಿತ ನೋಡಿ. ಸದಭಿರುಚಿಯ ಕನ್ನಡ ಮೂವೀಗಳನ್ನ ಸಪೋರ್ಟ್ ಮಾಡ್ದೆ ಇದ್ರೆ ಯಾರು ಈ ತರ ಪ್ರಯತ್ನಗಳಿಗೆ ಮತ್ತೆ ಕೈ ಹಾಕೋಲ್ಲ. ಅಪರೂಪಕ್ಕೆ ಬರುವ ಒಳ್ಳೆ ಮೂವೀಗಳನ್ನ ಸಪೋರ್ಟ್ ಮಾಡಿದ್ರೆ ಕನ್ನಡ ಇಂಡಸ್ಟ್ರೀ ಬೆಳೆಯುತ್ತೆ, ಕನ್ನಡ ಬೆಳೆಯುತ್ತೆ. 

ಪುಣೆ, ಚೆನ್ನೈ ಹೀಗೆ ಆಲ್ ಓವರ್ ಇಂಡಿಯಾದಲ್ಲಿ ಫಿಲ್ಮ್ ರಿಲೀಸ್ ಆಗಿದೆ. ನಾನ್ ಕನ್ನಡಿಗ ಫ್ರೆಂಡ್ಸ್ ಗೋಸ್ಕರ ಸಬ್‌ಟೈಟಲ್ಸ್ ಕೊಡಲಾಗಿದೆ. ಎಲ್ಲಾ ಊರಿನಲ್ಲಿರುವ ಕನ್ನಡಿಗರಿಗೆ ನಾನು ಹೇಳುವುದಿಷ್ಟೆ ನೀವು 100 ಕೆಟ್ಟ ಕನ್ನಡ ಫಿಲ್ಮ್ಸ್ ನೋಡಿರಬಹುದು , ಕನ್ನಡ ಮೂವೀಸ್ ನೋಡುವುದನ್ಣ ನಿಲ್ಲಿಸರಬಹುದು ಆದರೆ ಸ್ವಲ್ಪ ಕನ್ನಡ ಅಭಿಮಾನ ಇದ್ರೆ ಹೋಗಿ ಲೂಸಿಯ ನೋಡಿ , ನಿಮ್ಮ ಸ್ನೇಹಿತರನ್ನು ಕರ್ಕೊಂಡು ಹೋಗಿ . ನಿಮಗೆ ಕಂಡಿತ ನಿರಾಸೆ ಆಗಲ್ಲ. ಆದರೆ ಇದ್ರಲ್ಲಿ ಯಾರು ಮಚ್ಚು ಬೀಸಲ್ಲ, ಟಾಟಾ ಸುಮೋಗಳು ಹಾರಲ್ಲ, ಆದರೆ ಒಂದು ಒಳ್ಳೆ ಕಥೆ ಇದೆ, ಡೈರೆಕ್ಶನ್ ಇದೆ, ಆಕ್ಟಿಂಗ್ ಇದೆ, ಇದೆಲ್ಲಾದುಕಿನ್ನ ಜಾಸ್ತಿ ಕನ್ನಡದಲ್ಲಿ ಬೇರೆ ಬೇರೆ ತರ ಮೂವೀಸ್ ಮಾಡುವ ಟ್ರೆಂಡ್ ತರಬೇಕು ಅನ್ನೋ ಕನಸಿದೆ.

ಧನ್ಯವಾದ