ಅಲ್ಲಿಂದ ನಮ್ಮ ಮನೆ
1.5 ಕಿ ಮೀ ಇದೆ. ಹಾಗೇ ಗಾಡಿ ಓಡಿಸುತ್ತಾ ಆಚೆ ಈಚೆ ಕಣ್ಣು ಹಾಯಿಸುತ್ತಾ ಹೋದೆ . ದಾರಿಯಲ್ಲಿ ಒಂದು
ಶಾಲೆ ಕಾಣಿಸುತ್ತೆ . ಅದನ್ನ ಅಲ್ಲಿ ಕಟ್ಟೋಕೆ ಪಟ್ಟ ಪಾಡು ಅಷ್ಟಿಷ್ಟಲ್ಲ . ಶ್ರಮದಾನ ( ಪ್ರತಿ ಮನೆಯಿಂದ
ಒಬ್ಬರು ಅಥವಾ ಇಬ್ಬರಂತೆ ಎಲ್ಲಾ ಒಟ್ಟಾಗಿ , ಸ್ವ ಇಚ್ಛೆಯಿಂದ , ಸಾಮಾಜಿಕ ಕಳಕಳಿಯಿಂದ ಮಾಡುವ ಕೆಲಸ)
ಮಾಡಿ, ಜಾಗ ಕ್ಲೀನ್ ಮಾಡಿ , ಅಲ್ಲೊಂದು ಬಿದಿರಿನ ಕಟ್ಟಡ ಕಟ್ಟಿ , ಅದಕ್ಕೆ ಸೋಗೆ ಮಾಡು ಮಾಡಿ ಶಾಲೆಯನ್ನು
ಆಗಿನ ಕಾಲದ ವಿದ್ಯಾ ಮಂತ್ರಿ ಕೈಯಲ್ಲಿ ಉದ್ಘಾಟನೆ ಮಾಡಿಸಲಾಗಿತ್ತು . ಅದರ ಉದ್ಘಾಟನೆ ಬಗ್ಗೆ ಅಲ್ಲಿನ
ಸ್ಥಳೀಯ ವಾರ ಪತ್ರಿಕೆಗೆ ನಾನು ಬರೆದು ಕಳಿಸಿದ್ದ ಲೇಖನ ಒಂದು ಹಾಗೇ ನನ್ನ ಮನಸ್ಸಿನಲ್ಲಿ ಸುಳಿದಾಡಿತ್ತು. ಚಿಕ್ಕವರಾಗಿದ್ದಾಗ ಏನೇನು ಆಸೆ ಇರುತ್ತೆ ಸಾರ್ , ರೈಟರ್
ಆಗ್ಬೇಕು, ಲಾಯರ್ ಆಗ್ಬೇಕು , ಡಾಕ್ಟರ್ ಆಗ್ಬೇಕು , ಆಕ್ಟರ್ ಆಗ್ಬೇಕು , ಕ್ರಿಕೆಟರ್ ಆಗ್ಬೇಕು ಹೀಗೆ
ಆಸೆಗೆ ಮಿತಿನೇ ಇರಲ್ಲ .
ಹಾಗೇ ಆಲೋಚಿಸುತ್ತಾ
ಮುಂದೆ ಸಾಗ್ತಾ ಇದ್ದ ನನಗೆ ಕಾಣಿಸಿದ್ದು ಮನೆಗಳ ಸಾಲು . ಅದು ತೋಟಕ್ಕೆ ಕೆಲಸಕ್ಕೆ ಬರುವವರ ಮನೆಗಳ
ಸಾಲು . ಹಾಗೇ ಅಲ್ಲೊಂದು ಅಂಗಡಿ. "ಹಾಳೂರಿಗೆ ಉಳಿದವನೇ ಗೌಡ " ಅಂದ ಹಾಗೆ ಸುತ್ತಮುತ್ತ
4 ಕಿ ಮೀ ಗೆ ಇದೊಂದೇ ಅಂಗಡಿ. ಚಿಕ್ಕ ಪುಟ್ಟ ಮಿಟಾಯಿಂದ ಹಿಡಿದು ಮನೆ ನೆಡೆಸಲು ಬೇಕಾದ ಅಕ್ಕಿ , ಬೇಳೆ , ತರಕಾರಿ ಎಲ್ಲಾ ಇಲ್ಲಿ ಸಿಗುತ್ತೆ
ಆದರೆ ಆಪ್ಶನ್ಸ್ ಕಡಿಮೆ ಹಾಗೂ ಬೆಲೆ ಸ್ವಲ್ಪ ಜಾಸ್ತಿ ಅಷ್ಟೇ . 6 ನೇ ಕ್ಲಾಸ್ ನಲ್ಲಿ ಫರ್ಸ್ಟ್ ಬಂದಿದಕ್ಕೆ
ಅಪ್ಪ 50 ರೂಪಾಯಿ ಕೊಟ್ಟು ಚಾಕ್ಲೇಟ್ ತರೋಕೆ ಹೇಳ್ದಾಗ , ಕೋಟಿ ರೂಪಾಯಿ ಸಿಕ್ಕಿದಷ್ಟು ಖುಷಿ ಆಗಿ
ಅಲ್ಲಿ ಇದ್ದ ಮೈಸೂರುಪಾಕ್ ಹಾಗೂ ಹತ್ತು ಹಲವಾರು ತಿಂಡಿ ತಗೊಂಡು ಮನೆಗೆ ಓಡೋಗಿದ್ದು ನೆನಪಾಯ್ತು.
ಈಗ 50 ರೂಪಾಯಿ ಜೇಬಲ್ಲಿ ಇದ್ರೆ ಕೈಯಲ್ಲಿ ಕಾಸೆ ಇಲ್ಲ ಅನ್ನೋ ಯೋಚ್ನೆ ಕಾಡ್ತಾ ಇರುತ್ತೆ. ಯಾಕೆಂದ್ರೆ
ಬೆಂಗಳೂರಿನಂತ ದುಬಾರಿ ಜಾಗದಲ್ಲಿ 50 ರೂಪಾಯಿ ಒಂದು ಹೊತ್ತಿನ ಊಟಕ್ಕೂ ಸಾಕಾಗೊಲ್ಲ ಕೆಲವೊಮ್ಮೆ.
ಹಾಗೇ ಮನೆ ಹತ್ರಕ್ಕೆ
ಬಂದಿದ್ದೆ. ಶಿಥಿಲಗೊಂಡು ಆರ್ದಂಬರ್ಧ ಆಗಿರುವ ಮುಚ್ಚಿರುವ ಗೇಟ್ . ಮೊದಲೇ ಹೇಳಿದ ಹಾಗೆ ಸರಿ ಸುಮಾರು
2 ವರ್ಷದಿಂದ ಯಾರೂ ವಾಸವಿಲ್ಲ ಆ ಮನೆಯಲ್ಲಿ . ನಿಧಾನವಾಗಿ
ಗೇಟ್ ನ ತೆಗೆದು ಒಳಗೆ ಕಾಲಿಟ್ಟೆ , ಇಡ್ತಾ ಇದ್ದ ಒಂದೊಂದು ಹೆಜ್ಜೇನು ಒಂದೊಂದು ನೆನಪನ್ನು ಮಾರುಕಳಿಸ್ತಾ
ಇತ್ತು . ಮನೆಯ ಪಕ್ಕದಲ್ಲಿ ಇರೋ ಆ ತೆಂಗಿನ ಮರ , ಅಲ್ಲೇ ಮೇಲೆ ಇದ್ದ ಅನಾನಸ್ ಗಿಡಗಳು , ಅದರ ಪಕ್ಕದಲ್ಲಿ
ಪೇರಳೆ ( ಚೆಪೆ ) ಹಣ್ಣಿನ ಗಿಡ , ಅದರಲ್ಲಿ ಬಿಡ್ತಾ
ಇದ್ದ ಪೇರಳೆ ಹಣ್ಣಿಗೆ ನಾವು ಕಿತ್ತಾಡ್ತಾ ಇದ್ದಿದ್ದು ಹೀಗೆ ಹಲವಾರು ನೆನಪುಗಳು ನನ್ನ ತಲೆಯಲ್ಲಿ
ಸುರುಳು ಸುರುಳಾಗಿ ಎಳೆ ಬಿಡ್ತಾ ಹೋಯ್ತು. ಹಾಗೇ ಮುಂದೆ
ಹೋಗಿ ಮನೆ ಅಂಗಳಕ್ಕೆ ಕಾಲಿಟ್ಟೆ . ಒಂದು ಅಡಿ ಎತ್ತರ ಹುಲ್ಲಿದೆ ಅಲ್ಲಿ . ಮನೆ ಪಕ್ಕದ ಹೂವಿನ ತೋಟ
ಈಗ ಕಾಡು ಸೊಪ್ಪು ಬೆಳೆಯುವ ಜಾಗ ಆಗಿದೆ. ಎಂಥಾ ಕ್ರಿಕೆಟ್
ಆಡ್ತಿದ್ವಿ ಆ ಅಂಗಳದಲ್ಲಿ. ಪ್ರತಿ ಸಲ ಆಡ್ಡಾಗ್ಲೂ ಒಂದೊಂದು ಬಾಲ್ ಕಳಿತ ಇದ್ವಿ ಅನ್ನೋದು ಬೇರೆ ಪ್ರಶ್ನೆ
. ಮನೆ ಎದುರುಗಡೆ ತೋಟ ಇರೋದರಿಂದ ಸ್ವಲ್ಪ ಜೋರಾಗಿ ಹೊಡೆದ್ರೂ ಬಾಲ್ ಮಾಯ . ಅದಿಕ್ಕೆ ನಮ್ಮಪ್ಪ ರಬ್ಬರ್
ಬಾಲ್ ಬಿಟ್ರೆ ಬೇರೆ ಯಾವ ಬಾಲ್ ನೂ ಕೊಡಿಸ್ತ ಇರ್ಲಿಲ್ಲ ಅನ್ಸುತ್ತೆ. ಟೆನ್ನಿಸ್ ಬಾಲ್ ನಲ್ಲಿ ಆಡೋಕೆ
ತುಂಬಾ ದುಬಾರಿ ಕ್ರಿಕೆಟ್ ನಮ್ಮದು.
ಆದರೂ ನಾವು ಶಾಲೆಯ
ರಜದ ಸಮಯದಲ್ಲಿ ತುಂಬಾ ಕ್ರಿಕೆಟ್ ಆಡ್ತಾ ಇದ್ವಿ. ಬತ್ತ ಬೆಳೆಯುವ ಗದ್ದೆಯಲ್ಲಿ ಪಿಚ್ ಕೆತ್ತಿ, ಅದಿಕ್ಕೆ
ನೀರು ಹಾಕಿ, ಮಟ್ಟ ಮಾಡಿ ಆಮೇಲೆ ಆಡ್ತಾ ಇದ್ವಿ. ಪಿಚ್ ರೆಡೀ ಮಾಡೋದು ಎರಡು ದಿನದ ಕೆಲಸ. ಆಮೇಲೆ ದಿನಾ
ಮದ್ಯಾನ್ಹ 3 ಘಂಟೆ ಇಂದ ಸೂರ್ಯ ಮುಳುಗೊವರೆಗೂ ಕ್ರಿಕೆಟ್. ಸುತ್ತಮುತ್ತಾ 2 ಕಿ ಮೀ ದೂರದಲ್ಲಿ ಇರುವ
ಎಲ್ಲಾ ಹುಡುಗರೂ ಅಲ್ಲಿಗೆ ಕ್ರಿಕೆಟ್ ಆಡೋಕೆ ಬರೋರು. ಕೆಲವು ಸಲ 20 - 25 ವರ್ಷದ ಹುಡುಗರು ಕೂಡ ಸೇರಿಕೊಳ್ಳೋರು.
ಹೊಂಡ ಗುಂಡಿ ಇರೋ ಗದ್ದೆಯಲ್ಲಿ ಆಚೆ ಈಚೆ ಹೋಗುವ ಬಾಲ್ ನಾ ಹಿಡಿಯೋಕೆ ಮಾಡೋ ಹರಸಾಹಸದ ಮಜಾನೇ ಬೇರೆ
ಬಿಡಿ.
ಅಂಗಳದ ಪಕ್ಕದಲ್ಲೇ
ಒಂದು ಕೊಟ್ಟಿಗೆ , ಅದು ನಮ್ಮ ಮನೆಯ ಅಡಿಕೆ ಸುಲಿಯುವ ಜಾಗ. ಅಲ್ಲಿ ಒಂದು ಪಣತ ( ಬತ್ತ ತುಂಬಿಡಲು
ಉಪಯೋಗಿಸುವ ಮರದ ಪೆಟ್ಟಿಗೆ ) , ಅದರ ಪಕ್ಕದಲ್ಲಿ ಗೊಬರ್ ಗ್ಯಾಸ್ ನಾ ಡ್ರಮ್ ಇತ್ತು ಆದರೆ ಈಗ ಇಲ್ಲ
. ಎಲ್ಲಾ ಮಾರಿ ಆಗಿದೆ. ಪಕ್ಕದಲ್ಲಿ ಇರುವ ಗೊಬ್ಬರದ ಗುಂಡಿಗಳು ಮಾತ್ರ ಸೊಪ್ಪು , ಹುಲ್ಲು ಬೆಳೆದುಕೊಂಡು
ತುಂಬಿದ ಹಾಗೆ ಕಾಣಿಸ್ತಾ ಇದ್ವು. ಅಲ್ಲೇ ಒಂದು ದನದ ಕೊಟ್ಟಿಗೆ ಬೇರೆ ಇದೆ. ನಾವು ವಾಸಿಸ್ತ ಇದ್ದಾಗ
4-5 ಹಸುಗಳಿಂದ ತುಂಬಿರುತ್ತಿದ್ದ ಕೊಟ್ಟಿಗೆ ಈಗ ಯಾರು ನನ್ನನ್ನು ಉಪಿಯೋಗಿಸೋರು ಇಲ್ಲ ಅಂತ ಬೇಸರದಿಂದ
ನಿತ್ತ ಹಾಗೆ ಅನ್ನಿಸ್ತಾ ಇತ್ತು. ಒಂದು ಕಾಲದಲ್ಲಿ
ಜನ , ಪ್ರಾಣಿಗಳಿಂದ ತುಂಬಿ ತುಳುಕುತ್ತಾ ಇದ್ದ ಮನೆ ಇಂದು ಪಾಳು ಬಿದ್ದ ದೇವಾಲಯದ ಹಾಗೆ, ಭೂತದ ಬಂಗಲೆ
ಥರ ಕಾಣಿಸ್ತಾ ಇತ್ತು ಅನ್ನೋದ್ರಲ್ಲಿ ಸಂಶಯ ಇಲ್ಲ. ಇಲ್ಲಿಗೆ ಯಾಕೆ ಫ್ರೆಂಡ್ಸ್ ನಾ ಕರ್ಕೊಂಡು ಬಂದು
ಒಂದು ಕ್ಯಾಂಪ್ ಫೈಯರ್ ಹಾಕ್ಕೊಂಡು ರಾತ್ರಿ ಕಳೆಯಬಾರ್ದು ಅನ್ನೋ ಯೋಚನೆ ಬಂದ್ರುನೂ ಅಂತ ಹರಸಾಹಸ ಮಾಡೋದು
ಬೇಡ ಅಂತ ಅಂದುಕೊಂಡು ಸುಮ್ಮನಾದೆ.
ಹಾಗೇ ಯೋಚಿಸ್ತಾ
ತೋಟದ ಕಡೆಗೆ ಹೊರಟೆ. ಮಳೆಗಾಲ ಆಗಿದ್ರಿಂದ ಜಿಗಣೆಗಳಿಗೇನು ಕಮ್ಮಿ ಇರ್ಲಿಲ್ಲ . ಹಾಗಂತ ಅವೇನು ನಮ್ಮನ್ನ
ಜೀವ ಹೋಗೋವರೆಗೂ ಕಚ್ಚೋದಿಲ್ಲ . ಯಾಕೆ ಈ ಮಾತು ಹೇಳ್ದೆ ಅಂದ್ರೆ ನಮ್ಮದೇ ಬೆಂಗಳೂರಿನ ಜನ ಹೇಗೆ ಯೋಚಿಸ್ತಾರೆ
ಅಂದ್ರೆ ಆ ಜಿಗಣೆಗಳು ಅವ್ರಿಗೆ ಪ್ರಾಣಾಪಾಯನೆ ತಂದುಬಿಡ್ತಾವೇನೋ ಅನ್ನೋ ಹಾಗೆ. ಅವು ಕಚ್ಚಿ ಸ್ವಲ್ಪ
ರಕ್ತ ಕುಡಿದು ಬಿದ್ದೊಗ್ತಾವೆ ಅಷ್ಟೇ ಅದನ್ನ ಬಿಟ್ರೆ ಅವು ಜೀವ ತೆಗಿಯೋ ಕೆಲಸ ಮಾಡೋದಿಲ್ಲ. ಅವುಗಳಿಗಿನ್ನ
ಡೇಂಜರಸ್ ಮನುಷ್ಯರನ್ನೇ ನೋದಿರ್ತೀರಾ ಬೆಂಗಳೂರಿನಲ್ಲಿ ಆ ಜಿಗಣೆಗಳಿಗೆ ಯಾಕೆ ಸರ್ ಅಷ್ಟು ಹೆದರ್ತೀರಾ?? ಸಕ್ಕರೆಗೆ ಇರುವೆ ಮುತ್ತಿದ ಹಾಗೆ ಕಾಲಿಗೆ ಹತ್ತುತ್ತಿದ್ದ
ಜಿಗಣೆಗಳನ್ನ ಕೈಯಿಂದ ಬಿಡಿಸಲು ಯತ್ನಿಸುತ್ತ ಮುಂದೆ ಹೋಗ್ತಾ ಇದ್ದೇ. ನೂಲಿನಷ್ಟು ಉದ್ದ ಇರುವ ಜಿಗಣೆಗಳಿಗೆ
ಹಿಂದಿನ ಭಾಗದಲ್ಲಿ ಸ್ವಲ್ಪ ಅಂಟು ಇರುತ್ತೆ. ಆ ಅಂಟಿನಿಂದ ನಮ್ಮ ಚರ್ಮಕ್ಕೆ ಅಂಟಿಕೊಂಡು ಮುಂದಿನ ಭಾಗವನ್ನು
ಸ್ವಲ್ಪ ಚಾಚಿ ಬಾಯಿಯಿಂದ ಅರೆ ಸೆಂಟಿಮೀಟೆರ್ ದೂರದಲ್ಲಿ ಇರುವ ಚರ್ಮವನ್ನು ಕಚ್ಚಿ ತನ್ನ ಹಿಂದಿನ ಭಾಗವನ್ನು
ಮುಂದೆ ತರುತ್ತವೆ. ಹೀಗೆ ವಿವರಿಸಲು ತುಂಬಾನೇ ಕಷ್ಟ ಇರೋ ಈ ಕೆಲಸವನ್ನ ಎಷ್ಟು ಸರಾಗವಾಗಿ , ಫಾಷ್ಟಾಗಿ
ಮಾಡ್ತವೆ ಅಂದ್ರೆ ಅದನ್ನ ನೋಡೋದಕ್ಕೆ ಒಂದು ಮಜಾ . ಹೀಗೆ ನಮ್ಮ ಚರ್ಮದ ಮೇಲೆ ಓಡಾಡಿ ಕಚ್ಚೋಕೆ ಒಂದು
ಜಾಗವನ್ನ ಚೂಸ್ ಮಾಡ್ಕೋತಾವೆ. ಬೆರಳಿನ ಸಂದಿ, ಅರೆ ಮಾಗಿರುವ ಗಾಯ ಈ ಥರ ಯಾವ ಜಾಗದಿಂದ ರಕ್ತಾನ ಈಸೀ
ಆಗಿ ತೆಗಿಯಬಹುದೋ ಅಂತ ಜಾಗ. 5 ನಿಮಿಷ ಬಿಟ್ಟು ನೋಡಿದ್ರೆ ದಾರದಷ್ಟಿದ್ದ ಜಿಗಣೆ ಒಂದು ಚಿಕ್ಕ ಬೆಲೂನ್
ಹಾಗೆ ಕಾಣಿಸುತ್ತೆ. ರಕ್ತ ಕುಡಿದ ಮೇಲೆ ಅವುಗಳ ಮೈ ಬಣ್ಣ ಕಪ್ಪಿನಿಂದ ಸ್ವಲ್ಪ ಕೆಂಪು ಬಣ್ಣಕ್ಕೆ ತಿರುಗಿರುತ್ತೆ
. ಆಶ್ಚರ್ಯ ಏನಂದ್ರೆ ಅವಕ್ಕೆ ಎಷ್ಟು ಬೇಕೋ ಅಷ್ಟು ರಕ್ತ ಕುಡಿದ ಮೇಲೆ ಅವುಗಳ ಹಿಂದಿನ ಭಾಗದಲ್ಲಿರೋ
ಅಂಟು ಹೋಗಿ ಅವು ತಾನಾಗೇ ಕೆಳಗೆ ಬಿದ್ದು ಹೋಗ್ತಾವೆ. ಅವುಗಳು ಕಚ್ಚಿದ ಜಾಗದಿಂದ ಸುರಿಯುವ ರಕ್ತ ತಾನಾಗೇ
ನಿಲ್ಲೋದಿಲ್ಲ. ಅರಿಶಿನ ಕೂಡ ಕೆಲಸ ಮಾಡೊಲ್ಲಾ. ಚಿಕ್ಕ ಪೇಪರ್ ಪೀಸ್ ನಿಂದ ಆ ಜಾಗಾನ ಬ್ಲಾಕ್ ಮಾಡಿ
ಇಟ್ಕೋಬೇಕು. ಒಂದೈದು ನಿಮಿಷದ ನಂತರ ರಕ್ತ ಹರಿಯೋದು ನಿಲ್ಲುತ್ತೆ. ಈ ಜಿಗಣೆಗಳನ್ನ ನೀವು ಎರಡು ಪೀಸ್
ಮಾಡಿದ್ರೆ ಅವು ಎರಡಾಗ್ತಾವೆ . ಅವನ್ನ ಸಾಯಿಸಬೇಕು ಅಂದ್ರೆ ಬೆಂಕಿಗೆ ಹಾಕಬೇಕು ಅಷ್ಟೇ. ಎಲ್ಲೋ ರಕ್ತಬೀಜಾಸುರನ
ಸಂತತಿ ಇರಬೇಕು ಅನ್ನಿಸುತ್ತೆ.
ಹೀಗೆ ಜಿಗಣೆಗಳ ಜೊತೆ
ನನ್ನ ಕಾದಾಟವನ್ನು ಮುಂದುವರಿಸ್ಕೊಂಡು ತೋಟದ ಒಳಗೆ ಕಾಲಿಟ್ಟೆ.
ಸ ಶೇ ಷ