Tuesday, 17 September 2013

ರಸಾಯಣ ( Small Funny Story)




ಲೇ ಇವಳೇ ಚಡ್ಡೀವರೆಗೂ ಪೂರಾ ನೆಂದಿದೀನಿ ಕಣೆ , ಸ್ನಾನಕ್ಕೆ ಹೋಗ್ಲಾ ಅಂತ ಕಿರಿಚಿದ್ರು ನಮ್ಮ ಶ್ಯಾನಬೋಗ್ರು . ಅದ್ಯಾಕ್ರಿ ಅಷ್ಟು ಆತುರ ನಿಮಗೆ , ಸ್ವಲ್ಪ ಎಣ್ಣೆ ಮೈಗೆ ಇಳಿಯೊವರೆಗೂ ಕಾಯೋಕೆ ಆಗಲ್ವಾ ಅಂತ ಒಳಗಿಂದಲೇ ಉತ್ತರಿಸಿದ್ರು  ಅವರ ಮುದ್ದು ಮಡದಿ ಸಾವಿತ್ರಿ. ಹಿಂದಿನ ದಿನ ಸ್ವಲ್ಪ ಮೈ ಕೈ ನೋವಿದೆ ಅಂತ ಶ್ಯಾನುಬೋಗ್ರು ಹೇಳಿದ್ದಕ್ಕೆ ಬೆಳಿಗ್ಗೇನೇ ಎದ್ದು ಅವರ ಮೈಗೆ ಎಣ್ಣೆ ಹಚ್ಚಿ ಅಂಗಳದಲ್ಲಿ ಬಿಸಿಲು ಕಾಯಿಸೋಕೆ ಕೂರ್ಸಿದ್ರು ಸಾವಿತ್ರಮ್ಮ . ಇವರಿಗೆ ವಯಸ್ಸು ಕಮ್ಮಿ ಏನು ಆಗಿರ್ಲಿಲ್ಲ. ವಯಸ್ಸು 60 ದಾಟಿದ್ರೂನೂ ಗಟ್ಟಿ ಮುಟ್ಟಾಗಿ ಒಡ್ಯಾಡ್ಕೊಂಡು ಇದ್ರು ನಮ್ಮ ಶ್ಯಾನುಬೋಗ್ರು. ಸಾವಿತ್ರಮ್ಮ ಇವರ ಎರಡನೇ ಹೆಂಡತಿ. 16 ವರ್ಷಕ್ಕೇನೆ ಮೊದಲ ಮದುವೆ ಆದ ಶ್ಯಾನುಬೋಗ್ರಿಗೆ ಮೊದಲನೇ ಹೆಂಡತಿಯಿಂದ 4 ಜನ ಮಕ್ಳು , 5 ನೇ ಮಗು ಹೆರಿಗೆ ಸಮಯದಲ್ಲಿ ಹೆಂಡತಿ ಮತ್ತು ಮಗು ಇಬ್ರೂ ಕಾಲವಾದ ಮೇಲೆ ಎರಡನೇ ಮದುವೆ ಆದ್ರು ನಮ್ಮ ಶ್ಯಾನುಬೋಗ್ರು . ಸಾವಿತ್ರಮ್ಮನಿಗೂ 4 ಮಕ್ಳು . ಎಲ್ಲರೂ ಸಿಟೀನಲ್ಲಿ ಸೆಟ್ಲ್ ಆಗಿದಾರೆ. ಗಂಡ ಹೆಂಡತಿ ಮಾತ್ರ ಇಲ್ಲಿ ಇರೋದು . ದೇವರು ಕೊಟ್ಟಿರುವ ಆಸ್ತಿ ಚೆನ್ನಾಗಿರೋದ್ರಿಂದ ಆಳುಕಾಳುಗಳಿಗೆ ಏನು ಕಮ್ಮಿ ಇಲ್ಲ. ಆದರೂ ನಮ್ಮ ಶ್ಯಾನುಬೋಗ್ರು ಕೆಲವು ವಿಷಯಗಳಲ್ಲಿ ಸ್ವಲ್ಪ ಕಂಜೂಸ್.  ಸುಮ್ನೆ ದುಡ್ಡು ದಂಡ ಅಂತ ಗೊಣಗ್ತಾನೇ ಇರ್ತಾರೆ.

ಲೇ ನೋಡೆ ಊರ ಹೆಣ್ಣುಮಕ್ಳು ಎಲ್ಲ ನನ್ನ ಎಣ್ಣೆ ಹಚ್ಚಿರೋ ದೇಹ ನೋಡೋಕೆ ಮನೆ ಹತ್ರಾನೇ ಬಂದುಬಿಟ್ಟಿದಾರೆ ಅಂತ ಶ್ಯಾನುಬೋಗ್ರು ಹೇಳ್ದಾಗ ಒಳಗಡೆ ಯಾವುದೋ ಕೆಲಸದಲ್ಲಿ ಮೈ ಮರೆತಿದ್ದ ಸಾವಿತ್ರಮ್ಮ ಹಾಗೆ ಕಿಟಕಿಯಿಂದ ಆಚೆ ಇಣುಕಿದರು. ಎಲ್ಲ ಮನೆಯ ಹೆಣ್ಣಾಳುಗಳು ಕೆಲಸಕ್ಕೆ ಬಂದಿದ್ರು. ಹೊವ್ದು ಅವರು ನಿಮ್ಮ ಈ 60 ವರ್ಷದ ಮುಪ್ಪಿನ ದೇಹನ ನೋಡೋಕೆ ತಮ್ಮ ಗಂಡಂದಿರನ್ನ ಬಿಟ್ಟು ಇಲ್ಲಿಗೆ ಬಂದಿದಾರೆ , ಸುಮ್ನೆ ಬಿಸಿಲು ಕಾಯಿಸಿಕೊಳ್ಳಿ ಅಂತ ಗೊಣಗಿ ಬಂದವರಿಗೆ ಕಾಫೀ ಎಲೆ ಅಡಿಕೆ ರೆಡೀ ಮಾಡೋಕೆ ಶುರು ಮಾಡಿದ್ರು ಸಾವಿತ್ರಮ್ಮ. ಶ್ಯಾನುಬೋಗ್ರಿಗೆ ಹೆಂಗಸರ ಕಾಲು ಎಳಿಯೋಕೆ ತುಂಬಾ ಖುಷಿ. ಒಮ್ಮೊಮ್ಮೆ ಹೆಣ್ಣಾಳುಗಳಿಗೆ ಏನಮ್ಮ ಮುಖ ಒಂಥರಾ ಇದೆ ರಾತ್ರಿ ನಿದ್ದೆ ಮಾಡಿಲ್ವಾ ಗಂಡ ಹೆಂಡತಿ  ಅಂತ ಕೀಟಲೆಗೆ ಕೇಳಿ ಅವರ ಕೆಂಪಾದ ಮುಖ ನೋಡಿ ತಮ್ಮ ಮೀಸೆ ಆಡಿಯಲ್ಲೇ ನಗ್ತಾ ಇದ್ರು . ಶ್ಯಾನುಬೋಗ್ರು ರಸಿಕರು ಈಗ್ಲೂ ಸಾವಿತ್ರಮ್ಮಂಗೆ ಕಾಟ ಕೊಡ್ತಾರೆ ಅನ್ಸುತ್ತೆ ಅಂತ ಹೆಣ್ಣಾಳುಗಳು ಮಾತಾಡಿಕೊಳ್ಳೋರು. 

ಲೇ ಶಂಕ್ರ ಎಲ್ಲೇ ಎಂದಾಗ ಇಲ್ಲೆ ಎಲ್ಲೋ ಹಸುಗೆ ಹುಲ್ಲು ತರೋಕೆ ಹೋಗಿದಾನೆ ಅಂದ್ರು ಸಾವಿತ್ರಮ್ಮ. ಶಂಕ್ರ ಇವರ ಪಟ್ಟ ಶಿಷ್ಯ . ಬೆಪ್ಪ ಶಂಕ್ರ ಅಂತಾನೆ ಹೆಸರುವಾಸಿ ಆಗಿರೋ ಇವನನ್ನ ಮಗನಿಗಿಂತಲೂ ಚೆನ್ನಾಗಿ ನೋಡ್ಕೊಂಡಿದಾರೆ ಶ್ಯಾನುಬೋಗ್ರು . ಒಮ್ಮೆ ಅಭ್ಯಂಜನ ಮಾಡ್ಬೇಕು ಒಲೆಗೆ ಬೆಂಕಿ ಹಾಕು ಅಂದಾಗ ಕಾಲಿ ಹಂಡೆಗೆ ಬೆಂಕಿ ಹಾಕಿ, ಅದು ತಳ ಸುಟ್ಟು ಮನೆ ಎಲ್ಲಾ ವಾಸನೆ ಆದ ಮೇಲೆ ಶ್ಯಾನುಬೋಗ್ರ ಕೈಯಲ್ಲಿ ಚೆನ್ನಾಗಿ ಬೈಸಿಕೊಂಡಿದ್ದ. ಹೀಗೆ ದಿನ ಏನಾದ್ರೂ ಒಂದು ಬೆಪ್ಪು ಕೆಲಸ ಮಾಡ್ತ ಇದ್ದ ಇವನು ಬೆಪ್ಪ ಶಂಕ್ರ ಅಂತಾನೆ ಹೆಸರುವಾಸಿ. ಒಮ್ಮೆ ಹಸು ಹೀಟ್ ಗೆ ಬಂದಿದೆ ಹೋರಿ ಕರ್ಕೊಂಡ್ ಬಾ ಅಂತ ಕಳಿಸಿದ್ರೆ ಕೋಣನ ಕರ್ಕೊಂಡು ಬಂದಂಥ ಬೂಪ. ಅದನ್ನ ನೋಡಿ ತಲೆ ಚೆಚ್ಚಿಕೊಂಡ ಶ್ಯಾನುಬೋಗ್ರು ನೀನೇನು ಹೊಸ ಪ್ರಾಣಿ ಸೃಷ್ಟಿಸೋಕೆ ಹೊರ್ಟಿದಿಯಾ?? ಎಲ್ಲಾ ಬೀಗಾನೂ ಒಂದೇ ಕೀ ನಲ್ಲಿ ತೆಗೆಯೋಕೆ ಆಗಲ್ಲ !! ಅದಕ್ಕೆ ಅಂತಾನೆ ಬೇರೆ ಕೀ ಇರುತ್ತೆ , ನಿನಗೆ ಇದನ್ನ ಅರ್ಥ ಮಾಡಿಸೋ ಅಷ್ಟರಲ್ಲಿ ನನ್ನ ಜೀವನ ಮುಗಿದಿರುತ್ತೆ  ಅಂತ ಗುಡುಗಿದ್ರು .  ಆದರೂ ಅವ್ನನ್ನ ಕಂಡ್ರೆ ಏನೋ ಪ್ರೀತಿ ಶ್ಯಾನುಬೋಗ್ರಿಗೆ.

ಏನೇ ಅಂದ್ರು ನಮ್ಮ ಶ್ಯಾನಬೋಗ್ರು ಒಮ್ಮೆ ಮಾಡಿದ ಕೆಲಸದಿಂದ ಇಡೀ ಊರಿನಲ್ಲೇ ಪಂಚೆ ಶ್ಯಾನಬೋಗ್ರು  ಅಂತ ಫೇಮಸ್ ಆಗೋದ್ರು. 5 ವರ್ಷದ ಹಳೇ ಕಥೆ . ಶ್ಯಾನಬೋಗ್ರಿಗೆ ಸರಿ ಸುಮಾರು 55 ವರ್ಷ .  ಅದೊಂದು ಭಾನುವಾರ , ಮಳೆ ಬೇರೆ ಚಿಕ್ಕದಾಗಿ ಸುರಿತ ಇತ್ತು. ನಮ್ಮ ಶ್ಯಾನಬೋಗ್ರಿಗೆ ನೀರ್ ದೋಸೆ ಜೊತೆ ಮಾವಿನ ಹಣ್ಣಿನ ರಸಾಯಣ ತಿನ್ಬೇಕು ಅನ್ನೋ ಆಸೇ. ಲೇ ಇವಳೇ ಇವತ್ತು ನೀರ್ ದೋಸೆ ರಸಾಯಣ ಮಾಡ್ಟ್ಯೇನೆ ?? ಮಾವಿನ ಹಣ್ಣು ತಗೊಂಡ್ ಬರ್ತೀನಿ ಅಂತ ಕೇಳ್ದಾಗ, ಸಾವಿತ್ರಮ್ಮ ವಯಸ್ಸು 50 ಆದ್ರೂ  ನಿಮಗೆ ಇನ್ನೂ ಬಾಯಿ ಚಪಲ ಹೋಗಿಲ್ಲ, ಮಾವಿನ ಹಣ್ಣು ತಗೊಂಡು ಬನ್ನಿ ಮಾಡಿಕೊಡ್ತೀನಿ ಅಂತ ಹೇಳಿದ್ರು.  ಪೇಟೆಗೆ ಹೋಗಿ ಬರೋಣ ಅಂದ್ರೆ ಮಳೆ ಬಂದು ಮರ ಬಿದ್ದಿರೋದ್ರಿಂದ  ಇದ್ದ ಒಂದು ಬಸ್ ಕೂಡ ಇವತ್ತು ಬರೋದಿಲ್ಲ, ಬೇರೆ ಗಾಡಿ ಮಾಡ್ಕೊಂಡು ಹೋಗಿ ಮಾವಿನ ಹಣ್ಣು ತರೋಕೆ ಏನಿಲ್ಲ ಅಂದ್ರು 200 ರೂಪಾಯೀ ಕರ್ಚಾಗುತ್ತಲ್ಲ. ಮಾವಿನ ಹಣ್ಣು ಬೇರೆ ಕೆಜಿಗೆ 50 ರೂಪಾಯೀ ಹೇಳ್ತಾರೆ ಅಷ್ಟು ದುಡ್ಡು ಕರ್ಚು ಮಾಡಿ ರಸಾಯಣ ತಿನ್ಬೇಕಾ ಅನ್ನೋ ಜಿಪುಣತನದ ಆಲೋಚನೆಯೊಂದು ಶ್ಯಾನಬೋಗ್ರ  ತಲೆಯಲ್ಲಿ ಸುಳಿದಾಡಿತ್ತು .  ಲೇ ಇವಳೇ , ಇವತ್ತು ಪೇಟೆ ಮಾವಿನಹಣ್ಣು ಬೇಡ , ನಾನು ಶಂಕ್ರ ಇಲ್ಲೇ ಕಾಡಿಗೆ ಹೋಗಿ ಕಾಡು ಮಾವಿನ ಹಣ್ಣು ತಗೊಂಡು ಬರ್ತೀವಿ . ಕಾಡು ಮಾವಿನ ಹಣ್ಣಿನ ರುಚೀನೇ ಬೇರೆ ಬಿಡು ಏನ್ ಅಂತೀಯಾ ಅಂದಾಗ ನಿಮ್ಮ ಜಿಪುಣತನದ ಬುದ್ದಿ ನನಗೆ ಗೊತ್ತಿಲ್ವಾ , ಹೋಗಿ ಹೋಗಿ ಆದ್ರೆ ಹುಷಾರು, ಮಳೆ ಬೇರೆ ತುಂಬಾ ಜಾರುತ್ತೆ, ಜಿಗಣೆ ಕಾಟ ಬೇರೆ. ಲೇ ಶಂಕ್ರ ಹುಷಾರಾಗಿ ಕರ್ಕೊಂಡು ಹೋಗು ಅಂತ ಹೇಳಿ ಸುಮ್ನಾದ್ರು ಸಾವಿತ್ರಮ್ಮ. ಏನ್ ನಾನು ನೋಡ್ದೆ ಇರೋ ಕಾಡೆನೆ ?? 50 ವರ್ಷದಿಂದ ಓಡಾಡಿದೀನಿ ಗೊತ್ತಾ , ಲೇ ಶಂಕ್ರ ಬಾರೋ ಅಂತ ತಮ್ಮ ಶಿಷ್ಯನ್ನ ಕರ್ಕೊಂಡು ಹೊರಟೇ ಬಿಟ್ರು ಶ್ಯಾನಬೋಗ್ರು .

ಕೈಯಲ್ಲಿ ಒಂದು ಕೋಲು ಹಿಡಿದು ಹುಷಾರಾಗಿ ಹೆಜ್ಜೆ ಹಾಕ್ತಿದ್ದ್ರು ಶ್ಯಾನಬೋಗ್ರು . ಕುರಿ ಹಿಂದೆ ಮರಿ ಹೋಗುವ ಹಾಗೆ ಅವರನ್ನೇ ನಿಧಾನವಾಗಿ ಹಿಂಬಾಲಿಸುತ್ತಿದ್ದ ನಮ್ಮ ಬೆಪ್ಪ ಶಂಕರ. ಹಾಗೆ  ನೆಡಿತಾ ನೆಡಿತಾ ತೋಟದ ಕೊನೆಗೆ ಬಂದು ತಲುಪಿದ್ರು ಶ್ಯಾನಬೋಗ್ರು. ತೋಟ  ದಾಟಿ 2 ಕಿ ಮೀ ಕಾಡೊಳಗೆ ಹೋದರೆ ಮಾವಿನ ಮರ ಸಿಗುತ್ತೆ.  ತೋಟದ ಕೊನೆಯಲ್ಲಿ ಬಗ್ಗಿ  ನಿಂತು ಕೆಲಸ ಮಾಡ್ತಿದ್ದ ಹೆಣ್ಣಾಳುಗಳನ್ನ ನೋಡಿ ಕೀಟಲೆಯಿಂದ ಹುಷಾರು ಕಣ್ಣ್ರಮ್ಮಾ ಹಗಲೆಲ್ಲಾ ಬಗ್ಗಿ ಕೆಲಸ ಮಾಡಿ ಸೊಂಟ ನೋಯಿಸಿಕೊಂಡ್ರೆ ರಾತ್ರಿಗೆ ಕಷ್ಟ ಆಗುತ್ತೆ ಅಂದ್ರು ಶ್ಯಾನಬೋಗ್ರು.  ಅಯ್ಯೋ ಶ್ಯಾನಬೋಗ್ರೇ ನಾವು ಹೇಗೋ ಸುದಾರಿಸಿಕೊಳ್ತೀವಿ ನೀವು ಹುಷಾರಾಗಿ ಹೋಗಿ , ಬಿದ್ದು ಸೊಂಟ ಮುರ್ಕೊಂಡ್ರೆ ಪಾಪ ಸಾವಿತ್ರಮ್ಮಂಗೆ ಕಷ್ಟ ಅಂದ್ಲು ಹೆಣ್ಣು ಮಗಳು ಒಬ್ಳು.  ಎಂಟು ಮಕ್ಲಾದಾಗ ಮುರಿದೆ ಇರೋ ಸೊಂಟ ಈಗ ಮುರಿಯುತ್ತಾ ಎಂದು ನಗುತ್ತಾ ಹೇಳಿದ ಶ್ಯಾನುಬೋಗ್ರು ಬೇಲಿ ಕಡೆ ಹೆಜ್ಜೆ ಹಾಕಿದ್ರು. ಬೇಲಿ ದಾಟುವುದಕ್ಕೆ ಇದ್ದ ಚಿಕ್ಕ ಜಾಗದಲ್ಲಿ ಇದ್ದ ಮರದ ಮೇಲೆ ಕಾಲಿಟ್ಟು ಆಚೆ ಇನ್ನೊಂದು ಕಾಲಿಟ್ರು ಶ್ಯಾನಬೋಗ್ರು . ಹೆಣ್ಣು ಮಕ್ಕಳನ್ನ ಕಾಡಿಸೋ ಉತ್ಸಾಹದಲ್ಲಿದ್ದ ಶ್ಯಾನುಬೋಗ್ರಿಗೆ ಮುಳ್ಳಿಗೆ ಸಿಕ್ಕಿ ಹಾಕಿಕೊಂಡ ಅವರ ಪಂಚೆಯ ಅರಿವಿರಲಿಲ್ಲ.  ತಮ್ಮ ಇನ್ನೊಂದು ಕಾಲನ್ನ ಆಚೆ ಇಟ್ಟು ಜಿಗಿದಾಗಲೇ ಗೊತ್ತಾಗಿದ್ದು ಅವರು ಮಾತ್ರ ಬೇಲಿ ಆಚೆ  ಇದ್ರು  ಅವರ ಪಂಚೆ ಬೇಲಿಗೆ ಸಿಕ್ಕಿಕೊಂಡು ನೇತಾಡುತ್ತಾ ಇತ್ತು. ಬರೇ ಲಂಗೋಟಿಯಲ್ಲಿ ನಿಂತಿದ್ದ ಅವರನ್ನ ನೋಡಿ ಹೆಣ್ಣಾಳುಗಳೆಲ್ಲಾ ನಗೋಕೆ ಶುರು ಮಾಡಿದ್ರು. ಅಯ್ಯೋ ಶ್ಯಾನಬೋಗ್ರೇ ಇದೇನ್ ಮಾಡ್ಕೊಂಡ್ರಿ ಅಂತ ಕೇಳಿದ್ದ ಹುಡುಗಿಗೆ ಏನು ಹೇಳೋದು ಅಂತ ಗೊತ್ತಾಗ್ದೇ ಇದ್ರೂನೂ , ತಮ್ಮ ಹಾಸ್ಯ ಪ್ರಜ್ಞೆ ಮರಿದೆ ಯಾಕಮ್ಮ ಎಲ್ಲಾ ಹಾಗೆ ನೋಡಿ ಕಿಸಿತಾ ಇದೀರಾ?? ನಿಮ್ಮ ಗಂಡಂಗೆ ಇಲ್ದೆ ಇರೋದೇನು ನನ್ನ ಹತ್ರ ಇಲ್ಲಾ ಸುಮ್ನೆ ಕೆಲ್ಸ ನೋಡಿ , ಲೇ ಶಂಕರ ಆ ಪಂಚೆ ತಗೊಂಬಾ ಹುಷಾರು ಹರಿದುಬಿಟ್ಟಾತು ಅಂದ್ರು. ನಮ್ಮ ಬೆಪ್ಪ ಶಂಕ್ರ ಅದನ್ನ ಮುಳ್ಳಿಂದ ಬಿಡಿಸ್ದೇ ಹಾಗೆ ಎಳೆದಾಗ ಅರ್ದ ಹರಿದು ಕೈಗೆ ಬಂದಿತ್ತು ಪಂಚೆ.

ಆ ಹರಿದ ಪಂಚೆನ ಸೂತ್ಕೊಂಡು , ಏನೂ ಆಗಿಲ್ಡೆ ಇರೋ ತರ ಕಾಡಿನ ಕಡೆ ಹೆಜ್ಜೆ ಹಾಕಿದ್ರು ಶ್ಯಾನಬೋಗ್ರು. ಹಾಗೂ ಹೀಗೂ ಮಾವಿನ ಮರದ ಹತ್ರ ಹೋಗಿ ಒಂದು ಬ್ಯಾಗ್ ತುಂಬಾ ಮಾವಿನ ಹಣ್ಣು ತುಂಬಿಸಿಕೊಂಡು , ವಾಪಸ್ ಮನೆ ಕಡೆ ಹೆಜ್ಜೆ ಹಾಕೋಕೆ ಶುರು ಮಾಡಿದ್ರು ಶ್ಯಾನಬೋಗ್ರು. ಮಳೆ ಬೇರೆ ಜೋರಾಗಿ ಕೊಡೆ ಇದ್ರೂನೂ ಮೈ ಎಲ್ಲಾ ಒದ್ದೆ ಆಗ್ತಿತ್ತು. ಕೈಯಲ್ಲಿ ಹಿಡಿದ ಕೋಲಿನ ಸಹಾಯದಿಂದ ಬೆಟ್ಟದ ತರ ಇದ್ದ ಜಾಗದಿಂದ ಹುಷಾರಾಗಿ ಇಳಿತ ಇದ್ರು ಶ್ಯಾನಬೋಗ್ರು . ಹೀಗೆ ಯಾವುದೋ ಯೋಚನೆಯಲ್ಲಿ ಇಟ್ಟ ಹೆಜ್ಜೆ ಭಸ್ಸ್ ಎಂದು ಜಾರಿದಾಗ ಎದೆ ದಸ್ಸಕ್ ಅಂದಿತ್ತು ಶ್ಯಾನಬೋಗ್ರಿಗೆ. ಒಂದಿಂಚು ಜಾರಿದ ಕಾಲು , ನಿಲ್ಲೋಕೆ ಆಗ್ದೇ ಹಾಗೆ ಜಾರಿ ಬಿದ್ರು ಶ್ಯಾನಬೋಗ್ರು. ಬಿದ್ದ ರಭಸಕ್ಕೆ ಪಂಚೆ ಕಲ್ಲಿಗೆ ಸಿಕ್ಕಿಕೊಂಡು ಮುಕ್ಕಾಲು ಹರಿದುಹೋಗಿ ಬರೆ ಒಂದು ಟವಲ್ ನಷ್ಟು ಮಾತ್ರ ಉಳ್ಡಿತ್ತು. ಸೊಂಟ ಬೇರೆ ಸ್ವಲ್ಪ ನೋಯ್ತಾ ಇತ್ತು. ಇವತ್ತು ಬೆಳಿಗ್ಗೇನೇ ನಿನ್ನ ಮುಕಾ ನೋಡ್ದೆ ಅನ್ಸುತ್ತೆ. ಎಲ್ಲ ಎಡವಟ್ಟಾಗ್ತಾ ಇದೆ ಎಂದು ಶಂಕ್ರಂಗೆ ಬೈದು, ಪಂಚೆನ ಟವಲ್ ತರ ಉಟ್ಕೊಂಡು, ಆಗ್ತಾ ಇದ್ದ ನೋವನ್ನ ಸಹಿಸಿಕೊಂಡು ಮನೆ ಕಡೆ ಹೆಜ್ಜೆ ಹಾಕಿದ್ರು.  ದಾರಿಯಲ್ಲಿ ಸಿಗುವವರೆಲ್ಲಾ ಮುಸಿ ಮುಸಿ ನಗುತ್ತಾ ಏನ್ ಶ್ಯಾನಬೋಗ್ರೇ?? ಮಾವಿನ ಹಣ್ಣಾ ?? ರಸಾಯಣ ಜೋರಾ?? ಏನಾಯ್ತು ಪಂಚೆಗೆ ಅಂತಾ ಕೇಳ್ತಾ ಇದ್ರೆ ಶ್ಯಾನಬೋಗ್ರಿಗೆ ಏನು ಹೇಳ್ಬೇಕು ಅಂತಾ ಗೊತ್ತಾಗದೆ ಏನು ಮಾಡೋದಪ್ಪಾ ವಯಸ್ಸಾಯ್ತು ಅಂತ ಹೇಳಿ ಮನೆ ಕಡೆ ಹೆಜ್ಜೆ ಹಾಕಿದ್ರು.

ವೈದ್ಯರಿಗೆ 300 ರೂಪಾಯೀ,  ಪಂಚೆಗೆ 200 ರೂಪಾಯೀ ಮತ್ತು ಹೋದ ಮರ್ಯಾದೆಗೆ ದುಡ್ಡು ಎಣಿಸೋಕೆ ಆಗಲ್ಲ ಅಂತ ಮನಸ್ಸಿನಲ್ಲೇ ಕೊರಗುತ್ತ ರಸಾಯಣ ತಿಂದ ಶ್ಯಾನಬೋಗ್ರು ಅಂದಿನಿಂದ ಪಂಚೆ ಶ್ಯಾನಬೋಗ್ರು ಅಂತ ಫೇಮಸ್ ಅಗೋದ್ರು. 

Monday, 9 September 2013

ಲೂಸಿಯ ಅನ್ನೋ ಸ್ವಪ್ನ ಕಥೆ ( Small Review)

ಲೂಸಿಯ ಅನ್ನೋ ಸ್ವಪ್ನ ಕಥೆ

ಮೂವೀ ನೋಡಿದ ಮೇಲೆ ನಂಗೊಂದು ಲೂಸಿಯ ಮಾತ್ರೆ ಇದ್ರೆ ಕೊಡಿ ಮಾರಾಯ್ರೆ ಜೀವನ ಸಾಕಾಗಿ ಹೋಗಿದೆ ಅಂತ ಹೇಳುವ ಜನರನ್ನ ತುಂಬಾ ನೋಡಿದೆ.
ನಾನು ಒಂದು ಬಾರಿ ಈ ಮೂವೀ ನೋಡಿ ರಿವ್ಯೂ ಬರೀತಾ ಇದೀನಿ. ಇನ್ನೊಮ್ಮೆ ನೋಡಿದ್ರೆ ಬಹುಶ್ಯ ಇನ್ನೂ ಚೆನ್ನಾಗಿ ಕಥೆ ಅರ್ಥ ಆಗಬಹುದು ಅನ್ನಿಸುತ್ತೆ.

ಇನ್ಸೋಮೇನಿಯಾ ( ನಿದ್ರೆ ಬರದೇ ಇರುವ ಕಾಯಿಲೆ ) ಇರುವ ಒಬ್ಬ ಹುಡುಗನ ಸುತ್ತ ಹೆಣೆದಿರುವ ಕಥೆ ಇದು. ಕನ್ನಡದಲ್ಲಿ ಪ್ರಪ್ರಥಮ ಬಾರಿಗೆ ಆಡಿಯೆನ್ಸ್ ದುಡ್ಡು ಹಾಕಿ ತೆಗೆದಿರುವ ಮೂವೀ. ಸುಮಾರು 1700 ಜನ ತಮ್ಮ ಹಣವನ್ನು ಇದಕ್ಕೆ ಹಾಕಿದ್ದಾರೆ . ಹೀಗೊಂದು ವಿಭಿನ್ನ ಪ್ರಯತ್ನಕ್ಕೆ ಕೈ ಹಾಕಿ ಯಶಸ್ವಿ ಆಗ್ತಾ ಇರೋರು ಇನ್ಯಾರು ಅಲ್ಲ ನಮ್ಮ ಲೈಫ್ ಇಷ್ಟೇನೆ ಮೂವೀ ಡೈರೆಕ್ಟರ್ ಪವನ್ ಕುಮಾರ್ ಅವರು. ಕನಸಿನ ಲೋಕ ಹಾಗೂ ನಿಜ ಜೀವನದ ಮದ್ಯೆ ಹೆಣೆದಿರುವ ಕಥೆಯನ್ನು ತುಂಬಾ ಚೆನ್ನಾಗಿ ನ್ಯಾರೇಟ್ ಮಾಡಿದ್ದಾರೆ ಡೈರೆಕ್ಟರ್ ಪವನ್ ಕುಮಾರ್.  ನಿದ್ರೆ ಬಾರದೆ ಇರೋ ಹುಡುಗ ಲೂಸಿಯ ಅನ್ನೋ ಕೆಮಿಕಲ್ ಹೆಲ್ಪಿಂದ ಸುಂದರವಾದ ಕನಸುಗಳನ್ನ ಕಾಣೋಕೆ ಶುರು ಮಾಡ್ತಾನೆ. ಅವನು ನಿಜ ಜೀವನದಲ್ಲಿ ಮಾಡೋಕೆ ಆಗದೆ ಇರುವ ಕೆಲಸಗಳ ಬಗ್ಗೆ ಕನಸು ಕಟ್ತಾನೆ. ಇನ್ನೊಂದು ಕಡೆ ಪೋಲೀಸ್ ಲೂಸಿಯ ಡ್ರಗ್ ಬಗ್ಗೆ ಇನ್ವೆಸ್ಟಿಗೇಶನ್ ಮಾಡ್ತಾ ಇರ್ತಾರೆ. ಹೀಗೆ ಹೀರೊನಾ ನಿಜ ಜೀವನ, ಕನಸು ಮತ್ತು ಪೋಲೀಸ್ ಇನ್ವೆಸ್ಟಿಗೇಶನ್  ಮೂರು ಸ್ಟೋರಿಗಳು ಪರಲ್ಲೆಲ್ಲ್ ಆಗಿ ಮೂವ್ ಆಗುತ್ತೆ. ಹೀರೊ ನೀ ನಾ ಸಂ ಸತೀಶ್ ಅವ್ರ ಆಕ್ಟಿಂಗ್ ಗೆ ಫುಲ್ ಕ್ರೆಡಿಟ್.  ನಿಜ ಜೀವನ ಹಾಗೂ ಕನಸಿನ ಜೀವನದ ರೋಲ್ ಗಳನ್ನು ತುಂಬಾ ಚೆನ್ನಾಗಿ ನಿಭಾಯಿಸಿದ್ದಾರೆ.

ಮೂರು ಸ್ಟೋರೀಗಳನ್ನ ಬ್ಯಾಲೆನ್ಸ್ಡ್ ಆಗಿ ತಗೊಂಡು ಹೋಗ್ತಾರೆ ಡೈರೆಕ್ಟರ್. ಅವರ ನಾರೇಶನ್ ಸ್ಟೈಲ್ , ಎಡಿಟಿಂಗ್ ಸ್ವಲ್ಪ ಉಪೇಂದ್ರ ಅವರ ಏ  ಮೂವೀ ಜ್ಞಾಪಕಕ್ಕೆ ತಂದ್ರುನೂ ಇದು ಏ ಗಿನ್ನಾ ತುಂಬಾ ಭಿನ್ನವಾಗಿ ಹಾಗೂ ಅಪರೂಪದ ಮೂವೀ ಆಗಿ ಹೊರಬಂದಿದೆ. ಪ್ರೇಕ್ಷಕನಿಗೆ ಯಾವುದು ನಿಜ , ಯಾವುದು ಡ್ರೀಮ್ ಅನ್ನೋ ಇಕ್ಕಟ್ಟಿನಲ್ಲಿ ಸಿಕ್ಕಿಸೋ ಮೂವೀ ಸಸ್ಪೆನ್ಸ್ ಮೇನ್‌ಟೇನ್ ಮಾಡುವುದರಲ್ಲಿ ಯಶಸ್ವಿಯಾಗಿದೆ.  ಕನ್ನಡದಲ್ಲಿ ಯಾಕೆ ಡಿಫರೆಂಟ್ ಮೂವೀಸ್ ಟ್ರೈ ಮಾಡಲ್ಲ ಅಂತ ಕೇಳುವವರಿಗೆ ಪವನ್ ಕುಮಾರ್ ಒಂದು ಒಳ್ಳೆಯ ಉತ್ತರ ಕೊಟ್ಟಿದ್ದಾರೆ . ಹೊಸ ಸಂಗೀತ ನಿರ್ದೇಶಕ ಪೂರ್ಣಚಂದ್ರ ತೇಜಸ್ವಿ ಅವರ ಮ್ಯೂಸಿಕ್ ಸುಪರ್ಬ್. ಹೇಳು ಶಿವ, ತಿನ್ಬೇಡ ಕಮ್ಮಿ, ಜಮ್ಮಾ ಜಮ್ಮಾ ಹಾಡುಗಳು ಪ್ರೇಕ್ಷಕನನ್ನು ಮೆಚ್ಚಿಸುವಲ್ಲಿ ಯಶಸ್ವಿ ಆಗಿದೆ.  ನಾಯಕಿ ಶ್ರುತಿ ಹರಿಹರನ್ ಅವರ ಆಕ್ಟಿಂಗ್ ಕೂಡ ತುಂಬಾ ಚೆನ್ನಾಗಿದೆ.  ಕ್ಯಾಮರ ವರ್ಕ್ ಅಂತೂ ತುಂಬಾನೇ ಚೆನ್ನಾಗಿದೆ. ಏಚ್ ಡೀ ಪಿಕ್ಚರ್ ಕ್ವಾಲಿಟೀ.

ಲಂಡನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಬೆಸ್ಟ್ ಫಿಲ್ಮ್ ಆಡಿಯೆನ್ಸ್ ಚಾಯ್ಸ್ ಗೆದ್ದಿರುವ ಈ ಮೂವೀಯನ್ನ ಕಂಡಿತ ನೋಡಿ. ಸದಭಿರುಚಿಯ ಕನ್ನಡ ಮೂವೀಗಳನ್ನ ಸಪೋರ್ಟ್ ಮಾಡ್ದೆ ಇದ್ರೆ ಯಾರು ಈ ತರ ಪ್ರಯತ್ನಗಳಿಗೆ ಮತ್ತೆ ಕೈ ಹಾಕೋಲ್ಲ. ಅಪರೂಪಕ್ಕೆ ಬರುವ ಒಳ್ಳೆ ಮೂವೀಗಳನ್ನ ಸಪೋರ್ಟ್ ಮಾಡಿದ್ರೆ ಕನ್ನಡ ಇಂಡಸ್ಟ್ರೀ ಬೆಳೆಯುತ್ತೆ, ಕನ್ನಡ ಬೆಳೆಯುತ್ತೆ. 

ಪುಣೆ, ಚೆನ್ನೈ ಹೀಗೆ ಆಲ್ ಓವರ್ ಇಂಡಿಯಾದಲ್ಲಿ ಫಿಲ್ಮ್ ರಿಲೀಸ್ ಆಗಿದೆ. ನಾನ್ ಕನ್ನಡಿಗ ಫ್ರೆಂಡ್ಸ್ ಗೋಸ್ಕರ ಸಬ್‌ಟೈಟಲ್ಸ್ ಕೊಡಲಾಗಿದೆ. ಎಲ್ಲಾ ಊರಿನಲ್ಲಿರುವ ಕನ್ನಡಿಗರಿಗೆ ನಾನು ಹೇಳುವುದಿಷ್ಟೆ ನೀವು 100 ಕೆಟ್ಟ ಕನ್ನಡ ಫಿಲ್ಮ್ಸ್ ನೋಡಿರಬಹುದು , ಕನ್ನಡ ಮೂವೀಸ್ ನೋಡುವುದನ್ಣ ನಿಲ್ಲಿಸರಬಹುದು ಆದರೆ ಸ್ವಲ್ಪ ಕನ್ನಡ ಅಭಿಮಾನ ಇದ್ರೆ ಹೋಗಿ ಲೂಸಿಯ ನೋಡಿ , ನಿಮ್ಮ ಸ್ನೇಹಿತರನ್ನು ಕರ್ಕೊಂಡು ಹೋಗಿ . ನಿಮಗೆ ಕಂಡಿತ ನಿರಾಸೆ ಆಗಲ್ಲ. ಆದರೆ ಇದ್ರಲ್ಲಿ ಯಾರು ಮಚ್ಚು ಬೀಸಲ್ಲ, ಟಾಟಾ ಸುಮೋಗಳು ಹಾರಲ್ಲ, ಆದರೆ ಒಂದು ಒಳ್ಳೆ ಕಥೆ ಇದೆ, ಡೈರೆಕ್ಶನ್ ಇದೆ, ಆಕ್ಟಿಂಗ್ ಇದೆ, ಇದೆಲ್ಲಾದುಕಿನ್ನ ಜಾಸ್ತಿ ಕನ್ನಡದಲ್ಲಿ ಬೇರೆ ಬೇರೆ ತರ ಮೂವೀಸ್ ಮಾಡುವ ಟ್ರೆಂಡ್ ತರಬೇಕು ಅನ್ನೋ ಕನಸಿದೆ.

ಧನ್ಯವಾದ

Thursday, 18 July 2013

ಸಿಂಪಲ್ ಆಗಿ ಒಂದು ಊರು ಸ್ಟೋರಿ !! ( ಭಾಗ ೪)



ಅಲ್ಲಿಂದ ನಮ್ಮ ಮನೆ 1.5 ಕಿ ಮೀ ಇದೆ. ಹಾಗೇ ಗಾಡಿ ಓಡಿಸುತ್ತಾ ಆಚೆ ಈಚೆ ಕಣ್ಣು ಹಾಯಿಸುತ್ತಾ ಹೋದೆ . ದಾರಿಯಲ್ಲಿ ಒಂದು ಶಾಲೆ ಕಾಣಿಸುತ್ತೆ . ಅದನ್ನ ಅಲ್ಲಿ ಕಟ್ಟೋಕೆ ಪಟ್ಟ ಪಾಡು ಅಷ್ಟಿಷ್ಟಲ್ಲ . ಶ್ರಮದಾನ ( ಪ್ರತಿ ಮನೆಯಿಂದ ಒಬ್ಬರು ಅಥವಾ ಇಬ್ಬರಂತೆ ಎಲ್ಲಾ ಒಟ್ಟಾಗಿ , ಸ್ವ ಇಚ್ಛೆಯಿಂದ , ಸಾಮಾಜಿಕ ಕಳಕಳಿಯಿಂದ ಮಾಡುವ ಕೆಲಸ) ಮಾಡಿ, ಜಾಗ ಕ್ಲೀನ್ ಮಾಡಿ , ಅಲ್ಲೊಂದು ಬಿದಿರಿನ ಕಟ್ಟಡ ಕಟ್ಟಿ , ಅದಕ್ಕೆ ಸೋಗೆ ಮಾಡು ಮಾಡಿ ಶಾಲೆಯನ್ನು ಆಗಿನ ಕಾಲದ ವಿದ್ಯಾ ಮಂತ್ರಿ ಕೈಯಲ್ಲಿ ಉದ್ಘಾಟನೆ ಮಾಡಿಸಲಾಗಿತ್ತು . ಅದರ ಉದ್ಘಾಟನೆ ಬಗ್ಗೆ ಅಲ್ಲಿನ ಸ್ಥಳೀಯ ವಾರ ಪತ್ರಿಕೆಗೆ ನಾನು ಬರೆದು ಕಳಿಸಿದ್ದ ಲೇಖನ ಒಂದು  ಹಾಗೇ ನನ್ನ ಮನಸ್ಸಿನಲ್ಲಿ ಸುಳಿದಾಡಿತ್ತು.  ಚಿಕ್ಕವರಾಗಿದ್ದಾಗ ಏನೇನು ಆಸೆ ಇರುತ್ತೆ ಸಾರ್ , ರೈಟರ್ ಆಗ್ಬೇಕು, ಲಾಯರ್ ಆಗ್ಬೇಕು , ಡಾಕ್ಟರ್ ಆಗ್ಬೇಕು , ಆಕ್ಟರ್ ಆಗ್ಬೇಕು , ಕ್ರಿಕೆಟರ್ ಆಗ್ಬೇಕು ಹೀಗೆ ಆಸೆಗೆ ಮಿತಿನೇ ಇರಲ್ಲ .

ಹಾಗೇ ಆಲೋಚಿಸುತ್ತಾ ಮುಂದೆ ಸಾಗ್ತಾ ಇದ್ದ ನನಗೆ ಕಾಣಿಸಿದ್ದು ಮನೆಗಳ ಸಾಲು . ಅದು ತೋಟಕ್ಕೆ ಕೆಲಸಕ್ಕೆ ಬರುವವರ ಮನೆಗಳ ಸಾಲು . ಹಾಗೇ ಅಲ್ಲೊಂದು ಅಂಗಡಿ. "ಹಾಳೂರಿಗೆ ಉಳಿದವನೇ ಗೌಡ " ಅಂದ ಹಾಗೆ ಸುತ್ತಮುತ್ತ 4 ಕಿ ಮೀ ಗೆ ಇದೊಂದೇ ಅಂಗಡಿ. ಚಿಕ್ಕ ಪುಟ್ಟ ಮಿಟಾಯಿಂದ ಹಿಡಿದು ಮನೆ ನೆಡೆಸಲು  ಬೇಕಾದ ಅಕ್ಕಿ , ಬೇಳೆ , ತರಕಾರಿ ಎಲ್ಲಾ ಇಲ್ಲಿ ಸಿಗುತ್ತೆ ಆದರೆ ಆಪ್ಶನ್ಸ್ ಕಡಿಮೆ ಹಾಗೂ ಬೆಲೆ ಸ್ವಲ್ಪ ಜಾಸ್ತಿ ಅಷ್ಟೇ . 6 ನೇ ಕ್ಲಾಸ್ ನಲ್ಲಿ ಫರ್ಸ್ಟ್ ಬಂದಿದಕ್ಕೆ ಅಪ್ಪ 50 ರೂಪಾಯಿ ಕೊಟ್ಟು ಚಾಕ್ಲೇಟ್ ತರೋಕೆ ಹೇಳ್ದಾಗ , ಕೋಟಿ ರೂಪಾಯಿ ಸಿಕ್ಕಿದಷ್ಟು ಖುಷಿ ಆಗಿ ಅಲ್ಲಿ ಇದ್ದ ಮೈಸೂರುಪಾಕ್ ಹಾಗೂ ಹತ್ತು ಹಲವಾರು ತಿಂಡಿ ತಗೊಂಡು ಮನೆಗೆ ಓಡೋಗಿದ್ದು ನೆನಪಾಯ್ತು. ಈಗ 50 ರೂಪಾಯಿ ಜೇಬಲ್ಲಿ ಇದ್ರೆ ಕೈಯಲ್ಲಿ ಕಾಸೆ ಇಲ್ಲ ಅನ್ನೋ ಯೋಚ್ನೆ ಕಾಡ್ತಾ ಇರುತ್ತೆ. ಯಾಕೆಂದ್ರೆ ಬೆಂಗಳೂರಿನಂತ ದುಬಾರಿ ಜಾಗದಲ್ಲಿ 50 ರೂಪಾಯಿ ಒಂದು ಹೊತ್ತಿನ ಊಟಕ್ಕೂ ಸಾಕಾಗೊಲ್ಲ ಕೆಲವೊಮ್ಮೆ.

ಹಾಗೇ ಮನೆ ಹತ್ರಕ್ಕೆ ಬಂದಿದ್ದೆ. ಶಿಥಿಲಗೊಂಡು ಆರ್ದಂಬರ್ಧ ಆಗಿರುವ ಮುಚ್ಚಿರುವ ಗೇಟ್ . ಮೊದಲೇ ಹೇಳಿದ ಹಾಗೆ ಸರಿ ಸುಮಾರು 2 ವರ್ಷದಿಂದ ಯಾರೂ  ವಾಸವಿಲ್ಲ ಆ ಮನೆಯಲ್ಲಿ . ನಿಧಾನವಾಗಿ ಗೇಟ್ ನ ತೆಗೆದು ಒಳಗೆ ಕಾಲಿಟ್ಟೆ , ಇಡ್ತಾ ಇದ್ದ ಒಂದೊಂದು ಹೆಜ್ಜೇನು ಒಂದೊಂದು ನೆನಪನ್ನು ಮಾರುಕಳಿಸ್ತಾ ಇತ್ತು . ಮನೆಯ ಪಕ್ಕದಲ್ಲಿ ಇರೋ ಆ ತೆಂಗಿನ ಮರ , ಅಲ್ಲೇ ಮೇಲೆ ಇದ್ದ ಅನಾನಸ್ ಗಿಡಗಳು , ಅದರ ಪಕ್ಕದಲ್ಲಿ ಪೇರಳೆ ( ಚೆಪೆ  ) ಹಣ್ಣಿನ ಗಿಡ , ಅದರಲ್ಲಿ ಬಿಡ್ತಾ ಇದ್ದ ಪೇರಳೆ ಹಣ್ಣಿಗೆ ನಾವು ಕಿತ್ತಾಡ್ತಾ ಇದ್ದಿದ್ದು ಹೀಗೆ ಹಲವಾರು ನೆನಪುಗಳು ನನ್ನ ತಲೆಯಲ್ಲಿ ಸುರುಳು ಸುರುಳಾಗಿ ಎಳೆ ಬಿಡ್ತಾ ಹೋಯ್ತು.  ಹಾಗೇ ಮುಂದೆ ಹೋಗಿ ಮನೆ ಅಂಗಳಕ್ಕೆ ಕಾಲಿಟ್ಟೆ . ಒಂದು ಅಡಿ ಎತ್ತರ ಹುಲ್ಲಿದೆ ಅಲ್ಲಿ . ಮನೆ ಪಕ್ಕದ ಹೂವಿನ ತೋಟ ಈಗ ಕಾಡು ಸೊಪ್ಪು ಬೆಳೆಯುವ ಜಾಗ ಆಗಿದೆ.  ಎಂಥಾ ಕ್ರಿಕೆಟ್ ಆಡ್ತಿದ್ವಿ ಆ ಅಂಗಳದಲ್ಲಿ. ಪ್ರತಿ ಸಲ ಆಡ್ಡಾಗ್ಲೂ ಒಂದೊಂದು ಬಾಲ್ ಕಳಿತ ಇದ್ವಿ ಅನ್ನೋದು ಬೇರೆ ಪ್ರಶ್ನೆ . ಮನೆ ಎದುರುಗಡೆ ತೋಟ ಇರೋದರಿಂದ ಸ್ವಲ್ಪ ಜೋರಾಗಿ ಹೊಡೆದ್ರೂ ಬಾಲ್ ಮಾಯ . ಅದಿಕ್ಕೆ ನಮ್ಮಪ್ಪ ರಬ್ಬರ್ ಬಾಲ್ ಬಿಟ್ರೆ ಬೇರೆ ಯಾವ ಬಾಲ್ ನೂ ಕೊಡಿಸ್ತ ಇರ್ಲಿಲ್ಲ ಅನ್ಸುತ್ತೆ. ಟೆನ್ನಿಸ್ ಬಾಲ್ ನಲ್ಲಿ ಆಡೋಕೆ ತುಂಬಾ ದುಬಾರಿ ಕ್ರಿಕೆಟ್ ನಮ್ಮದು.

ಆದರೂ ನಾವು ಶಾಲೆಯ ರಜದ ಸಮಯದಲ್ಲಿ ತುಂಬಾ ಕ್ರಿಕೆಟ್ ಆಡ್ತಾ ಇದ್ವಿ. ಬತ್ತ ಬೆಳೆಯುವ ಗದ್ದೆಯಲ್ಲಿ ಪಿಚ್ ಕೆತ್ತಿ, ಅದಿಕ್ಕೆ ನೀರು ಹಾಕಿ, ಮಟ್ಟ ಮಾಡಿ ಆಮೇಲೆ ಆಡ್ತಾ ಇದ್ವಿ. ಪಿಚ್ ರೆಡೀ ಮಾಡೋದು ಎರಡು ದಿನದ ಕೆಲಸ. ಆಮೇಲೆ ದಿನಾ ಮದ್ಯಾನ್ಹ 3 ಘಂಟೆ ಇಂದ ಸೂರ್ಯ ಮುಳುಗೊವರೆಗೂ ಕ್ರಿಕೆಟ್. ಸುತ್ತಮುತ್ತಾ 2 ಕಿ ಮೀ ದೂರದಲ್ಲಿ ಇರುವ ಎಲ್ಲಾ ಹುಡುಗರೂ ಅಲ್ಲಿಗೆ ಕ್ರಿಕೆಟ್ ಆಡೋಕೆ ಬರೋರು. ಕೆಲವು ಸಲ 20 - 25 ವರ್ಷದ ಹುಡುಗರು ಕೂಡ ಸೇರಿಕೊಳ್ಳೋರು. ಹೊಂಡ ಗುಂಡಿ ಇರೋ ಗದ್ದೆಯಲ್ಲಿ ಆಚೆ ಈಚೆ ಹೋಗುವ ಬಾಲ್ ನಾ ಹಿಡಿಯೋಕೆ ಮಾಡೋ ಹರಸಾಹಸದ ಮಜಾನೇ ಬೇರೆ ಬಿಡಿ.

ಅಂಗಳದ ಪಕ್ಕದಲ್ಲೇ ಒಂದು ಕೊಟ್ಟಿಗೆ , ಅದು ನಮ್ಮ ಮನೆಯ ಅಡಿಕೆ ಸುಲಿಯುವ ಜಾಗ. ಅಲ್ಲಿ ಒಂದು ಪಣತ ( ಬತ್ತ ತುಂಬಿಡಲು ಉಪಯೋಗಿಸುವ ಮರದ ಪೆಟ್ಟಿಗೆ ) , ಅದರ ಪಕ್ಕದಲ್ಲಿ ಗೊಬರ್ ಗ್ಯಾಸ್ ನಾ ಡ್ರಮ್ ಇತ್ತು ಆದರೆ ಈಗ ಇಲ್ಲ . ಎಲ್ಲಾ ಮಾರಿ ಆಗಿದೆ. ಪಕ್ಕದಲ್ಲಿ ಇರುವ ಗೊಬ್ಬರದ ಗುಂಡಿಗಳು ಮಾತ್ರ ಸೊಪ್ಪು , ಹುಲ್ಲು ಬೆಳೆದುಕೊಂಡು ತುಂಬಿದ ಹಾಗೆ ಕಾಣಿಸ್ತಾ ಇದ್ವು. ಅಲ್ಲೇ ಒಂದು ದನದ ಕೊಟ್ಟಿಗೆ ಬೇರೆ ಇದೆ. ನಾವು ವಾಸಿಸ್ತ ಇದ್ದಾಗ 4-5 ಹಸುಗಳಿಂದ ತುಂಬಿರುತ್ತಿದ್ದ ಕೊಟ್ಟಿಗೆ ಈಗ ಯಾರು ನನ್ನನ್ನು ಉಪಿಯೋಗಿಸೋರು ಇಲ್ಲ ಅಂತ ಬೇಸರದಿಂದ ನಿತ್ತ ಹಾಗೆ ಅನ್ನಿಸ್ತಾ ಇತ್ತು.  ಒಂದು ಕಾಲದಲ್ಲಿ ಜನ , ಪ್ರಾಣಿಗಳಿಂದ ತುಂಬಿ ತುಳುಕುತ್ತಾ ಇದ್ದ ಮನೆ ಇಂದು ಪಾಳು ಬಿದ್ದ ದೇವಾಲಯದ ಹಾಗೆ, ಭೂತದ ಬಂಗಲೆ ಥರ ಕಾಣಿಸ್ತಾ ಇತ್ತು ಅನ್ನೋದ್ರಲ್ಲಿ ಸಂಶಯ ಇಲ್ಲ. ಇಲ್ಲಿಗೆ ಯಾಕೆ ಫ್ರೆಂಡ್ಸ್ ನಾ ಕರ್ಕೊಂಡು ಬಂದು ಒಂದು ಕ್ಯಾಂಪ್ ಫೈಯರ್ ಹಾಕ್ಕೊಂಡು ರಾತ್ರಿ ಕಳೆಯಬಾರ್ದು ಅನ್ನೋ ಯೋಚನೆ ಬಂದ್ರುನೂ ಅಂತ ಹರಸಾಹಸ ಮಾಡೋದು ಬೇಡ ಅಂತ ಅಂದುಕೊಂಡು ಸುಮ್ಮನಾದೆ. 

ಹಾಗೇ ಯೋಚಿಸ್ತಾ ತೋಟದ ಕಡೆಗೆ ಹೊರಟೆ. ಮಳೆಗಾಲ ಆಗಿದ್ರಿಂದ ಜಿಗಣೆಗಳಿಗೇನು ಕಮ್ಮಿ ಇರ್ಲಿಲ್ಲ . ಹಾಗಂತ ಅವೇನು ನಮ್ಮನ್ನ ಜೀವ ಹೋಗೋವರೆಗೂ ಕಚ್ಚೋದಿಲ್ಲ . ಯಾಕೆ ಈ ಮಾತು ಹೇಳ್ದೆ ಅಂದ್ರೆ ನಮ್ಮದೇ ಬೆಂಗಳೂರಿನ ಜನ ಹೇಗೆ ಯೋಚಿಸ್ತಾರೆ ಅಂದ್ರೆ ಆ ಜಿಗಣೆಗಳು ಅವ್ರಿಗೆ ಪ್ರಾಣಾಪಾಯನೆ ತಂದುಬಿಡ್ತಾವೇನೋ ಅನ್ನೋ ಹಾಗೆ. ಅವು ಕಚ್ಚಿ ಸ್ವಲ್ಪ ರಕ್ತ ಕುಡಿದು ಬಿದ್ದೊಗ್ತಾವೆ ಅಷ್ಟೇ ಅದನ್ನ ಬಿಟ್ರೆ ಅವು ಜೀವ ತೆಗಿಯೋ ಕೆಲಸ ಮಾಡೋದಿಲ್ಲ. ಅವುಗಳಿಗಿನ್ನ ಡೇಂಜರಸ್ ಮನುಷ್ಯರನ್ನೇ ನೋದಿರ್ತೀರಾ ಬೆಂಗಳೂರಿನಲ್ಲಿ ಆ ಜಿಗಣೆಗಳಿಗೆ ಯಾಕೆ ಸರ್ ಅಷ್ಟು ಹೆದರ್ತೀರಾ??  ಸಕ್ಕರೆಗೆ ಇರುವೆ ಮುತ್ತಿದ ಹಾಗೆ ಕಾಲಿಗೆ ಹತ್ತುತ್ತಿದ್ದ ಜಿಗಣೆಗಳನ್ನ ಕೈಯಿಂದ ಬಿಡಿಸಲು ಯತ್ನಿಸುತ್ತ ಮುಂದೆ ಹೋಗ್ತಾ ಇದ್ದೇ. ನೂಲಿನಷ್ಟು ಉದ್ದ ಇರುವ ಜಿಗಣೆಗಳಿಗೆ ಹಿಂದಿನ ಭಾಗದಲ್ಲಿ ಸ್ವಲ್ಪ ಅಂಟು ಇರುತ್ತೆ. ಆ ಅಂಟಿನಿಂದ ನಮ್ಮ ಚರ್ಮಕ್ಕೆ ಅಂಟಿಕೊಂಡು ಮುಂದಿನ ಭಾಗವನ್ನು ಸ್ವಲ್ಪ ಚಾಚಿ ಬಾಯಿಯಿಂದ ಅರೆ ಸೆಂಟಿಮೀಟೆರ್ ದೂರದಲ್ಲಿ ಇರುವ ಚರ್ಮವನ್ನು ಕಚ್ಚಿ ತನ್ನ ಹಿಂದಿನ ಭಾಗವನ್ನು ಮುಂದೆ ತರುತ್ತವೆ. ಹೀಗೆ ವಿವರಿಸಲು ತುಂಬಾನೇ ಕಷ್ಟ ಇರೋ ಈ ಕೆಲಸವನ್ನ ಎಷ್ಟು ಸರಾಗವಾಗಿ , ಫಾಷ್ಟಾಗಿ ಮಾಡ್ತವೆ ಅಂದ್ರೆ ಅದನ್ನ ನೋಡೋದಕ್ಕೆ ಒಂದು ಮಜಾ . ಹೀಗೆ ನಮ್ಮ ಚರ್ಮದ ಮೇಲೆ ಓಡಾಡಿ ಕಚ್ಚೋಕೆ ಒಂದು ಜಾಗವನ್ನ ಚೂಸ್ ಮಾಡ್ಕೋತಾವೆ. ಬೆರಳಿನ ಸಂದಿ, ಅರೆ ಮಾಗಿರುವ ಗಾಯ ಈ ಥರ ಯಾವ ಜಾಗದಿಂದ ರಕ್ತಾನ ಈಸೀ ಆಗಿ ತೆಗಿಯಬಹುದೋ ಅಂತ ಜಾಗ. 5 ನಿಮಿಷ ಬಿಟ್ಟು ನೋಡಿದ್ರೆ ದಾರದಷ್ಟಿದ್ದ ಜಿಗಣೆ ಒಂದು ಚಿಕ್ಕ ಬೆಲೂನ್ ಹಾಗೆ ಕಾಣಿಸುತ್ತೆ. ರಕ್ತ ಕುಡಿದ ಮೇಲೆ ಅವುಗಳ ಮೈ ಬಣ್ಣ ಕಪ್ಪಿನಿಂದ ಸ್ವಲ್ಪ ಕೆಂಪು ಬಣ್ಣಕ್ಕೆ ತಿರುಗಿರುತ್ತೆ . ಆಶ್ಚರ್ಯ ಏನಂದ್ರೆ ಅವಕ್ಕೆ ಎಷ್ಟು ಬೇಕೋ ಅಷ್ಟು ರಕ್ತ ಕುಡಿದ ಮೇಲೆ ಅವುಗಳ ಹಿಂದಿನ ಭಾಗದಲ್ಲಿರೋ ಅಂಟು ಹೋಗಿ ಅವು ತಾನಾಗೇ ಕೆಳಗೆ ಬಿದ್ದು ಹೋಗ್ತಾವೆ. ಅವುಗಳು ಕಚ್ಚಿದ ಜಾಗದಿಂದ ಸುರಿಯುವ ರಕ್ತ ತಾನಾಗೇ ನಿಲ್ಲೋದಿಲ್ಲ. ಅರಿಶಿನ ಕೂಡ ಕೆಲಸ ಮಾಡೊಲ್ಲಾ. ಚಿಕ್ಕ ಪೇಪರ್ ಪೀಸ್ ನಿಂದ ಆ ಜಾಗಾನ ಬ್ಲಾಕ್ ಮಾಡಿ ಇಟ್ಕೋಬೇಕು. ಒಂದೈದು ನಿಮಿಷದ ನಂತರ ರಕ್ತ ಹರಿಯೋದು ನಿಲ್ಲುತ್ತೆ. ಈ ಜಿಗಣೆಗಳನ್ನ ನೀವು ಎರಡು ಪೀಸ್ ಮಾಡಿದ್ರೆ ಅವು ಎರಡಾಗ್ತಾವೆ . ಅವನ್ನ ಸಾಯಿಸಬೇಕು ಅಂದ್ರೆ ಬೆಂಕಿಗೆ ಹಾಕಬೇಕು ಅಷ್ಟೇ. ಎಲ್ಲೋ ರಕ್ತಬೀಜಾಸುರನ ಸಂತತಿ ಇರಬೇಕು ಅನ್ನಿಸುತ್ತೆ.

ಹೀಗೆ ಜಿಗಣೆಗಳ ಜೊತೆ ನನ್ನ ಕಾದಾಟವನ್ನು ಮುಂದುವರಿಸ್ಕೊಂಡು ತೋಟದ ಒಳಗೆ ಕಾಲಿಟ್ಟೆ.

ಸ ಶೇ ಷ

Monday, 24 June 2013

ಸಿಂಪಲ್ ಆಗಿ ಒಂದು ಊರು ಸ್ಟೋರಿ !! ( ಭಾಗ ೩)

ಕೊನೆಗೂ ಮನೆ ರೀಚ್ ಆದ್ವಿ. ಗಾಡಿಯಿಂದ ಇಳಿದು ಗೇಟ್ ತೆಗೆದು ಒಳಗೆ ಕಾಲಿಡ್ತಾ ಇದ್ದಂತೆ ಸ್ವಾಗತಿಸೋಕೆ ಬಂದ್ವು ಶ್ವಾನಗಳು . ಜೋರಾಗಿ ಬೊಗಳುತ್ತಾ ಬಂದ ನಾಯಿಗಳು ನನ್ನನು ಮೂಸಿ ನೋಡಿ ಬಹಳ ವರ್ಷಗಳಿಂದ ಮುಖ ಪರಿಚಯ ಇರೋ ತರ ಬಾಲ ಅಲ್ಲಾಡ್ಸಿ ಮೈ ಮೇಲೆ ಹಾರೋಕೆ ಶುರು ಮಾಡಿದವು.ವಿಶ್ವಾಸಕ್ಕೆ ನಾಯಿ ಅನ್ನೋ ಮಾತು ಸುಳ್ಳಲ್ಲ ನೋಡಿ . ಒಂದೇ ಒಂದು ಪೀಸ್ ರೊಟ್ಟಿ ಕೊಟ್ಟವನನ್ನು ಸಾಯೋವರೆಗೂ ನೆನಪಿನಲ್ಲಿ ಇಟ್ಟುಕೊಳ್ಳೋ ನಾಯಿ ನಿಜವಾಗ್ಲೂ ಮನುಷ್ಯನ ಸ್ನೇಹಿತ ಅನ್ನೋ ಮಾತು ಸುಳ್ಳಲ್ಲ . ಅತಿಥಿಯನ್ನ ಕಂಡ ಸಂತೋಷವನ್ನ ತಡೆಹಿಡಿಯೋಕೆ ಆಗದೆ ಅಲ್ಲಿ ಇಲ್ಲಿ ಓಡಾಡಿ , ಮೈ ಮೇಲೆ ಹಾರಿ ಸ್ವಲ್ಪ ನನ್ನ ಜೀನ್ಸ್ ನಾ ಕೊಳೆ ಮಾಡಿ , ಅಲ್ಲಾಡ್ತಾ ಇರೋ ಬಾಲಾನ ಕಂಟ್ರೋಲ್ ಗೆ ತರೋಕೆ ಟ್ರೈ ಮಾಡ್ತ ಇದ್ವು . ಸ್ವಲ್ಪ ಮುದ್ದಾಡಿ ಮನೆಗೆ ಎಂಟ್ರೀ ಕೊಟ್ಟೆ .ದೊಡ್ಡಪ್ಪ ನಾ ಹತ್ರ ಸ್ವಲ್ಪ ಮಾತಾಡಿ , ನನ್ನನ್ನು ಅಪ್ಪಿಕೊಳಲ್ಲೂ ಕಾಯ್ತಾ ಇದ್ದ ನಿದ್ರಾದೇವಿಗೆ ಶರಣಾಗಿ ನಿದ್ರೆಗೆ ಜಾರಿದೆ.

ಸ್ಕೂಲ್ ಗೆ ರೆಡೀ ಆಗ್ತಾ ಇದ್ದ ಮಕ್ಕಳ ಕೂಗು ನನ್ನನ್ನ ನಿದ್ದೆಯಿಂದ ಎಬ್ಬಿಸುವಲ್ಲಿ ಯಶಸ್ವಿಯಾಗಿತ್ತು. ಮತ್ತೆ ಆವರಿಸುತ್ತಿದ್ದ ನಿದ್ರಾದೇವಿಯನ್ನು ಬದಿಗೊತ್ತಿ ಮೇಲೆ ಎದ್ದು ಮುಖ ತೊಳ್ಕೊಂಡು ಕಾಫೀ ಕುಡಿಯೋಕೆ ರೆಡೀ ಆದೆ . ಸಮಯ ಬೆಳಿಗ್ಗೆ 8:30 , ಸದ್ಯಕ್ಕೆ ಸುರಿತ ಇದ್ದ ಮಳೆರಾಯನಿಗೆ ಸ್ವಲ್ಪ ದಣಿವಾಗಿ ಮಳೆಯನ್ನು ನಿಲ್ಲಿಸಿದ್ದ ಅನ್ಸುತ್ತೆ. ಕಾರ್ಮೋಡಗಳು ಬದಿಗೆ ಸರಿದು ಸೂರ್ಯನ ಕಿರಣಗಳಿಗೆ ಭೂಮಿತಾಯಿಗೆ ಮುತ್ತಿಕ್ಕಲು ಅನುಕೂಲ ಮಾಡೋಕೊಡ್ತಾ ಇದ್ವು . ಮನೆ ಸುತ್ತಾ
ಬೆಟ್ಟಗಳು ಇರುವುದರಿಂದ ಸೂರ್ಯನ ಕಿರಣಗಳು ಸ್ವಲ್ಪ ತಡವಾಗೆ ಬರ್ತಾವೆ . ಕಾಫೀ ಗ್ಲಾಸ್ ಹಿಡ್ಕೊಂಡು ಹಾಗೆ ಆಚೆ ಬಂದು ಬಿಸಿಲಿಗಾಗಿ ಕಾಯ್ತಾ ಇದ್ದೇ. ಮನೆ ಸುತ್ತಾ ಅಡಿಕೆ ಮತ್ತು ಕಾಫೀ ತೋಟ . ಮನೆ ಪಕ್ಕದಲ್ಲಿ ಚಿಕ್ಕದಾದ ಹೂವು ಮತ್ತು ತರಕಾರಿಯ ತೋಟ. ಹೂವು ಮತ್ತು ಗಿಡಗಳ ಮೇಲಿದ್ದ ಮಳೆಯ ಹನಿಗಳು ಅವುಗಳ ಸೌಂದರ್ಯವನ್ನು ಹೆಚ್ಚಿಸುವಲ್ಲಿ ಯಶಸ್ವಿ ಆಗಿದ್‌ವು . ನಿಜವಾಗ್ಲೂ ಯಾವ್ದಾದ್ರೂ ಹುಡ್ಗಿಗೆ ಪ್ರಪೋಸ್ ಮಾಡ್ಬೇಕಂದ್ರೆ ಇಲ್ಲಿಗೆ ಕರೆದುಕೊಂಡು
ಬಂದು ಮಾಡ್ಬೇಕು, ಈ ಪ್ರಕೃತಿ ಸೌಂದರ್ಯದ ಮದ್ಯದಲ್ಲಿ ಯಾವ ಹೆಣ್ಣು ತಾನೇ ಇಷ್ಟ ಇಲ್ಲ ಅಂತ ಹೇಳೋಕೆ ಸಾದ್ಯ ಅಂದುಕೊಂಡೆ . ನಿಧಾನವಾಗಿ ಸೂರ್ಯನ ಕಿರಣಗಳು ಭೂಮಿಗೆ ತಾಕೋಕೆ ಶುರುವಾಯ್ತು . ಹೂವುಗಳ ಮೇಲಿದ್ದ ಮಳೆಯ ಹನಿಗಳು ಸೂರ್ಯನ ಕಿರಣಗಳು ಬಿದ್ದು ಹೊಳೆಯುವ ಮುತ್ತುಗಳ ಹಾಗೆ ಕಾಣಿಸ್ತಾ ಇದ್ದವು . ಆ ಸೌಂದರ್ಯವನ್ನು ಮತ್ತು ಕೈಯಲ್ಲಿ ಇದ್ದ ಕಾಫೀನಾ ಸವಿಯುತ್ತಾ , ಭೂಮಿ ಸ್ಪರ್ಶಿಸುತ್ತಿದ್ದ ಆ ಸೂರ್ಯನ ಕಿರಣಗಳಿಗೆ ಬೆನ್ನೊಡ್ಡಿ ಮೈ ಕಾಯಿಸಿಕೊಳ್ಳೋಕೆ ಶುರು ಮಾಡಿದೆ.

ತಿಂಡಿಗೆ ಬಾರೋ ಅನ್ನೋ ನಮ್ಮ ದೊಡ್ಡಮ್ಮನ ಕೂಗನ್ನು ಕೇಳಿ ನಿಧಾನವಾಗಿ ಒಳಗಡೆ ಚಲಿಸಿದೆ. ಮಲೆನಾಡು ಸ್ಟೈಲ್ ನಲ್ಲಿ ನೆಲದ ಮೇಲೆ ತಟ್ಟೆ ಇಟ್ಟು ಮಣೆ ಮತ್ತು ಚಾಪೆಗಳನ್ನ ಹಾಕಿದ್ರು . ಅಬ್ಬಾ ಎಷ್ಟೊಂದ್  ದಿನ ಆಗಿತ್ತು ಈ ತರ ತಿಂಡಿಗೆ ಕೂತು ಅದು ಎಲ್ಲಾರ ಜೊತೆ ಅಂದುಕೊಂಡೆ . ನಾವು ಬೆಂಗಳೂರಿನಲ್ಲಿ ಎಲ್ಲಿಗೋ ಹೋಗೋ ಆತುರದಲ್ಲಿ ಎರಡು ಇಡ್ಲಿನೋ ಇಲ್ಲ ಉಪ್ಪಿಟ್ಟನ ಹಾಗೆ ಗುಳುಂ ಅಂತ ನುಂಗಿ ಓಡ್ತಾ ಇರ್ತೀವಿ. " ನಿನ್ನೆ ಪತ್ರೊಡೆ ಮಾಡಿದ್ದೆ ಸ್ವಲ್ಪ ಹಾಕ್ಲಾ" ಅಂದಾಗ ನನಗೆ ಸ್ವರ್ಗಕ್ಕೆ ಮೂರೇ ಗೇಣು . ಪತ್ರೊಡೆ ಅನ್ನೋದು ಮಲೆನಾಡಿನಲ್ಲಿ ಮರಗೆಸುವಿನಿಂದ ಮಾಡುವ ಒಂದು ಖಾರದ ಪದಾರ್ಥ. ಮಳೆಗಾಲದಲ್ಲಿ ಎಲ್ಲರ ಮನೆಯಲ್ಲೂ ಒಮ್ಮೆಯಾದರೂ ತಯಾರಾಗುವ ಈ ಪದಾರ್ಥ ತುಂಬಾ ಫೇಮಸ್ ಅಲ್ಲಿ.  ಈ ಥರ ತುಂಬಾ ಪದಾರ್ಥಗಳಿವೆ , ಎಳೆ ಬಿದಿರಿನಿಂದ ಮಾಡುವ ಪಲ್ಯ ಮತ್ತು ಹುಳಿ , ಹಲಸಿನಹಣ್ಣಿನ ಕೊಟ್ಟೆ ಕಡುಬು , ಹಲಸಿನ ಕಾಯಿ ಹಪ್ಪಳ , ಶಾವಿಗೆ ಮತ್ತು ಕಾಯಿ ಹಾಲು , ಬೆಂಕಿಯಲ್ಲಿ ಸುಟ್ಟ ಹಲಸಿನ ಬೀಜಗಳು ಹೀಗೆ ಹೇಳ್ತಾ ಹೋದರೆ ಬಾಯಲ್ಲಿ ನೀರೂರುತ್ತಾ ಹೋಗುತ್ತೆ . ಹಾಕಿದ್ದ ಪತ್ರೊಡೆಯನ್ನು ಮೆಲ್ಲುತ್ತ " ದೊಡ್ಡಮ್ಮ ಗಂಜಿ ಇದೀಯ" ಅಂತ ಕೇಳಿದೆ .
" ಪರ್ವಾಗಿಲ್ವೆ ಬೆಂಗಳೂರಿನಲ್ಲಿ ಇದ್ರೂನೂ ಇನ್ನ ಗಂಜಿ ತಿನ್ನೋ ಅಭ್ಯಾಸ ಬಿಟ್ಟಿಲ್ವೆ " ಅಂದ್ರು. ನಿಮಗೇನು ಗೊತ್ತು ಅದರ ಮಜಾ ಅಂತ ಹೇಳೋಣ ಅನ್ನಿಸ್ತಿತ್ತು .ಅಕ್ಕಿನಾ ಸ್ವಲ್ಪ ಜಾಸ್ತಿ ನೀರು ಹಾಕಿ , ತುಂಬಾ ಹೊತ್ತು ಬೇಯಿಸಿದರೆ ನಿಮ್ಮ ಗಂಜಿ ರೆಡೀ ಆಗುತ್ತೆ. ಮಾವಿನಕಾಯಿ ಉಪ್ಪಿನಕಾಯಿ ಹಾಕ್ಕೊಂಡು , ಮಜ್ಜಿಗೆ ಇಲ್ಲ ತುಪ್ಪ ಹಾಕ್ಕೊಂಡು ಗಂಜಿ ತಿನ್ನೋ ಮಜಾನೇ ಬೇರೆ. ಯಾವ ತಿಂಡಿನೂ ಅಷ್ಟು ಮಜಾ ಕೊಡೋದಿಲ್ಲ . ನನ್ನ ರುಚಿಕರ ತಿಂಡಿಯನ್ನ ಮುಗಿಸಿ ಕೈ ತೊಳೆದುಕೊಂಡು ಮೇಲೆದ್ದೆ.

ಸಮಯ 9:30 ಆಗಿತ್ತು ಅನ್ಸುತ್ತೆ . ತೋಟಕ್ಕೆ ಕೆಲಸಕ್ಕೆ ಬರುವವರು ಒಬ್ಬಬ್ಬರಾಗೆ ಬರೋಕೆ ಶುರು ಮಾಡಿದ್ರು . "ಏನ್ ಭಟ್ರೆ ಯಾವಾಗ ಬಂದ್ರಿ??  ಹಿಂದೆ ಏನಿದು ಜುಟ್ಟು ( ಹಿಂದೆ ಉದ್ದದ ಪೋನೀ ಬಿಟ್ಟಿದೀನಿ) ?? ಕುತ್ತಿಗೆ ಮೇಲೆ ಏನು ಹಚ್ಚೆನಾ ( ಕುತ್ತಿಗೆ ಮೇಲೆ ಟಾಟೂ ಇದೆ ) ?? ಯಾಕೆ ದಪ್ಪಾನೇ ಆಗಿಲ್ಲಾ?? " ಹೀಗೆ ಬರ್ತಾ ಇದ್ದ ಪ್ರಶ್ನೆಗಳ ಸುರಿಮಳೆಯನ್ನ ಡಿಪ್ಲೊಮ್ಯಾಟಿಕ್ ಆಗಿ ಆನ್ಸರ್ ಮಾಡೋಕೆ ಪ್ರಯತ್ನಿಸುತ್ತಿದ್ದೆ . ಬೆಂಗಳೂರಿಗೆ ಹೋಗಿ ದಪ್ಪ ಆಗಿಲ್ಲ ಅಂದ್ರೆ ಯಾವುದೋ ಮಹಾಪರಾಧ ಮಾಡಿರೋರ ಥರ ಕೇಳ್ತಾರೆ. " ರೀ ಸ್ವಾಮಿತಿನ್ನೋದು ನಮ್ಮ ಕೆಲಸ , ದಪ್ಪ ಆಗೋದು ಬಿಡೋದು ದೇವರಿಗೆ ಬಿಟ್ಟಿದ್ದು " ಅಂತ ಹೇಳಿಬಿಡೋಣ ಅನ್ನಿಸುತ್ತೆ. ಆದರೆ ಪಾಪ ಅವರಿಗೆ ಯಾಕೆ ಮನ ನೋಯಿಸಬೇಕು . ನನ್ನ ಐ ಫೋನ್ ನೋಡಿ ಇನ್ನೊಂದು ಹಂತಕ್ಕೆ ಹೋಗ್ಬಿಡ್ತು ಮಾತುಕತೆ. " ಬನ್ರೀ ಇಲ್ಲೀ ಭಟ್ಟರ ಹತ್ರ 35 ಸಾವಿರದ ಫೋನ್ ಇದೆ ನೋಡಿ ಬನ್ನಿ "  ಅಂದಾಗ ನನಗೆ ಅದನ್ನ ಹೇಗೆ ತಗೋಬೇಕೋ ಗೊತ್ತಾಗ್ಲಿಲ್ಲ. ಯಾಕಪ್ಪಾ ಇವರಿಗೆ ರೇಟ್ ಹೇಳಿದೆ ಅಂತ ಅನ್ನಿಸಿಬಿಡ್ತು. ಇನ್ನೊಬ್ಬರಂತು ಲಿಮಿಟ್ ಕ್ರಾಸ್ ಮಾಡಿ " ಏನ್ ಭಟ್ರೆ 35 ಸಾವಿರ ಕೊಟ್ಟಿದೀನಿ ಅಂತೀರಾ ಬರೆ ಒಂದೇ ಬಟನ್ ಇದೆ" ಅಂದಾಗ ನಾನು ಮೂಕನಾಗಿದ್ದೆ . ಅವರ ಮುಘ್ದತೆಯನ್ನ ಶ್ಳಾಗಿಸಬೇಕೋ ಇಲ್ಲಾ ಇವರಿಗೆ ಫೋನ್ ತೋರಿಸಿ ತಪ್ಪು ಮಾಡಿದೆನೋ ಅಂತ ಆತ್ಮಾವಲೋಕನದಲ್ಲಿ ತೊಡಗಿದೆ . 

ತೋಟಕ್ಕೆ ಔಷಧಿ ಹೊಡೆಯುವ ಸಮಯವಾಗಿದ್ದರಿಂದ ಕೆಲಸಕ್ಕೆ ಬಂದ ಜನ ಸ್ವಲ್ಪ ಜಾಸ್ತಿನೇ ಇದ್ರು . ಮಳೆಗಾಲದ ಸಮಯದಲ್ಲಿ ಅಡಿಕೆ ಮರದ , ಬಿಡುತ್ತಿರುವ ಅಡಿಕೆ ಕೊನೆಗಳಿಗೆ ಔಷಧಿಯನ್ನ ಸಿಂಪಡಿಸುತ್ತಾರೆ. ಮೈಲುತುತ್ತ , ಸುಣ್ಣ ಹೀಗೆ ಹಲವಾರು ಪದಾರ್ಥಗಳಿಂದ ತಯಾರಿಸುವ ಔಷಧಿಯನ್ನು ಅಡಿಕೆ ಮರಗಳ ಮೇಲೆ ಹತ್ತಿ ಅದರ ಗೊಂಚಲುಗಳಿಗೆ ಪಿಚಕಾರಿಯಿಂದ ಹೊಡೆಯಲಾಗುತ್ತೆ. ಔಷಧಿಯಲ್ಲಿ ಅಂಟಿನ ಪದಾರ್ಥ ಮಿಕ್ಸ್ ಮಾಡಿರೋದ್ರಿಂದ ಆ ಔಷಧಿ ಬೆಳೆಯುತ್ತಿರುವ ಅಡಿಕೆ ಗೊನೆಗಳಿಗೆ ಅಂಟಿಕೊಳ್ಳುತ್ತೆ .  ಔಷಧಿ ಹೊಡೆಯುವ ಕೆಲಸ ಒಳ್ಳೆ ಸರ್ಕಸ್ ನೋಡಿದ ಹಾಗೆ ಇರುತ್ತೆ . ಮಳೆ ಬಿಟ್ಟಮೇಲೆ ಮರ ಒಣಗೊವರೆಗೂ ಕಾದು ಆನಂತರ ಮರ ಹತ್ಟೋಕೆ ಶುರು ಮಾಡ್ತಾರೆ . ಮರದ ಮೇಲೆ ನೇತಾಡಿಕೊಂಡು ಪಿಚಕಾರಿಯಿಂದ ಅಕ್ಕಪಕ್ಕದ ಮರಗಳಿಗೆ ಔಷಧಿ ಸಿಂಪಡಿಸಿ , ದೋಟಿಯಿಂದ ಪಕ್ಕದ ಇನ್ನೊಂದು ಮರವನ್ನು ಎಳೆದು ಅದಕ್ಕೆ ಗಾಳಿಯಲ್ಲೇ ಜಂಪ್ ಮಾಡ್ತಾರೆ. ಹೀಗೆ ಮರದಿಂದ ಮರಕ್ಕೆ ಜಿಗಿಯುತ್ತ ಆದಷ್ಟು ಮರಗಳನ್ನ ಕವರ್ ಮಾಡ್ತಾರೆ. ಅವರ ಪಿಚಕಾರಿಗೆ ಒತ್ತಡ ಕೊಡೋದಿಕ್ಕೆ ಮರದ ಕೆಳಗಡೆ ಒಬ್ಬ ಔಷದಿಯನ್ನ ಮೇಲಕ್ಕೆ ಮಶೀನ್ ನಿಂದ ಪಂಪ್ ಮಾಡ್ತಾ ಇರ್ತಾನೆ. ಹೀಗೆ ನೋಡೋಕೆ ತುಂಬಾ ಕಷ್ಟಕರವಾಗಿ ಕಾಣಿಸೋ ಕೆಲಸವನ್ನ ಅಭ್ಯಾಸ ಇರುವವರು ತುಂಬಾ ಸರಾಗವಾಗಿ ಮಾಡಿ ಮುಗಿಸ್ತಾರೆ. ಒಟ್ಟಿನಲ್ಲಿ ಬೆಂಗಳೂರಿನಲ್ಲಿ ಹುಟ್ಟಿ ಬೆಳಿದಿರೋ ಎಷ್ಟೊಂದು ಜನಕ್ಕೆ ಅದೊಂದು ಮನರಂಜನೆ ತರ ಕಾಣೋದಂತು ನಿಜ.

ಅವರ ಹತ್ತಿರ ಮಾತು ಮುಗಿಸಿ , ನಾನು ಸ್ವಲ್ಪ ನಮ್ಮನೆ ಕಡೆ ಹೋಗಿ ಬರ್ತೇನೆ ಅಂತ ನಮ್ಮಣ್ಣನ ಗಾಡಿ ತಗೊಂಡು ಹೊರಟೆ. ನಮ್ಮ ಮನೆಯಲ್ಲಿ ಈಗ ಯಾರೂ ಇಲ್ಲ. ಬೀಗ ಹಾಕಿರೋ ಮನೆ, ಸುತ್ತ ತೋಟ ಇದೆ ಅಷ್ಟೇ. ಮನೆಯ ಸುತ್ತ ಮುತ್ತ ಅದಿನ್ನೆಷ್ಟು ಹುಲ್ಲು ಬೆಳೆದಿರುತ್ತೋ ಅಂದುಕೊಂಡು ಗಾಡಿ ಓಡಿಸೋಕೆ ಶುರು ಮಾಡಿದೆ.

ಸಶೇಷ

Friday, 21 June 2013

ಸಿಂಪಲ್ ಆಗಿ ಒಂದು ಊರು ಸ್ಟೋರಿ !! ( ಭಾಗ ೨ )

ಹಾಗೇ ದೆವ್ವಗಳನ್ನು ಹುಡುಕುತ್ತಾ ಹೆಜ್ಜೆ ಹಾಕುತ್ತಿದ್ದ ನನಗೆ ನನ್ನ ಕಾಲ್ನಡಿಗೆಯ ಶಬ್ದವೇ ಕರ್ಣ ಕಠೋರವಾಗಿ ಕೇಳಿಸ್ತಾ ಇತ್ತು . ಗಾಳಿಗೆ ತೂಗುಯ್ಯಾಲೆ ಆಡುತಿದ್ದ ಗಿಡಗಳ ಶಬ್ದವೇ ಸಾಕು ಒಬ್ಬ ಹೇಡಿಗೆ ಭಯ ಪಡಿಸಲು. ಚಿಕ್ಕಪ್ಪ ಯಾವಾಗ್ಲೂ ಹೇಳೋರು " ಹೆದರಿದವನಿಗೆ ಹೆದೆರಿಸುತ್ತೆ ಹೇಡಿ ದೆವ್ವ" ಅಂತ . ಯಾವ್ದೋ ದೆವ್ವ ಪಿಶಾಚಿ ಬಗ್ಗೆ ಭಯ ಪಟ್ಟುಕೊಂಡು ರಾಮ ನಾಮ ಜಪಿಸುತ್ತಾ ಸಾಗುವ ಹೇಡಿಗೆ ಈ ಗಿಡ ಮರಗಳು , ಜೀರುಂಡೆ ಬಿಬ್ರಿಗಳೇ ಸಾಕು ಪ್ರಾಣ ತೆಗೆಯೋಕೆ . ಸೂರ್ಯನ ಬೆಳಕಲ್ಲಿ ನಯನ ಮನೋಹರವಾಗಿ ಕಾಣುವ ಈ ಕಾಡು , ಗಿಡ ಮರಗಳು ರವಿ ಮಾಮ ಮರೆಯಾಗುತ್ತಿದ್ದಂತೆಲೆ ರೌದ್ರ ರೂಪ ತಾಳಿ ಜನರನ್ನ ಭಯಪಡಿಸೋಕೆ ಶುರು ಮಾಡಿ ಬಿಡ್ತಾವೆ . ಬೆಳದಿಂಗಳಲ್ಲಿ ಮರಗಳು ನಿರ್ಮಿಸುವ ಬೃಹದಾಕಾರದ ನೆರಳುಗಳು ದೂರದಿಂದ ಬ್ರಹ್ಮ ರಾಕ್ಷಸ ನಮ್ಮನ್ನು ತಿನ್ನಲು ಕಾಯ್ತಾ ಇರುವ ಹಾಗೆ ಕಾಣುತ್ತೆ . ಆ ದಿನ ನನ್ನ ಲಕ್ ಚೆನ್ನಾಗಿತ್ತು ಅನ್ಸುತ್ತೆ ಆಕಾಶದಲ್ಲಿ  ಕಾರ್ಮೋಡಗಳು  ಆವರಿಸಿ ಚಂದಮಾಮನ ಬೆಳಕನ್ನು ತಡೆ ಹಿಡಿತ ಇದ್ವು .

ಆ ಟಾರ್ ರೋಡ್ ನಲ್ಲಿ ಇರುವ ಹೊಂಡ ಗುಂಡಿಗಳನ್ನು ಅವಾಯ್ಡ್ ಮಾಡ್ಕೊಂಡು ( ಎರಡು ಅಡಿ ಅಂತರದಲ್ಲಿ ಏನಿದೆ ಅಂತ ಗೊತ್ತಾಗ್ದೇ ಇರೋವಷ್ಟು ಕಗ್ಗತ್ತಲು), ನಾವು ಶಾಲೆಗೆ ದಿನ 4 ಕಿ ಮೀ ನೆಡಿತ ಇದ್ದಿದನ ಜ್ಞಾಪಿಸಿಕೊಂಡು ಅದೇ ಉತ್ಸಾಹದಲ್ಲಿ ಮುಂದೆ ಹೆಜ್ಜೆ ಹಾಕ್ತಾ ಇದ್ದೆ. ದಿನಾ ಬೆಳಿಗ್ಗೆ 7 ಘಂಟೆಗೆ ಎದ್ದು ರೆಡೀ ಆಗಿ 8 ಘಂಟೆಗೆ ಮನೆ ಬಿಟ್ರೆ ದಾರಿಯಲ್ಲಿ ಸಿಗುವ ಎಲ್ಲಾರ ಮನೆಯಲ್ಲಿ ಸ್ವಲ್ಪ ಸ್ವಲ್ಪ ಮಾತಾಡಿ , ದಾರಿಯಲ್ಲಿ ಜೊತೆಗೆ ಸೇರ್ಕೊಳ್ತ ಇದ್ದ ಸ್ನೇಹಿತರಿಗೆ ಕಾದು ಅವರ ಜೊತೆ ಹರಟೆ ಹೊಡ್ಕೊಂಡು , ಯಾವ ದಾರಿಯಲ್ಲಿ ಹೋಗೋದು ಅಂತ ಜಗಳ ಆಡ್ಕೊಂಡು ಕೊನೆಗೂ ಒಟ್ಟಿಗೆ ಶಾಲೆ ಸೇರುವಾಗ 9:15 ಇಲ್ಲಾ 9:30 ಆಗಿರುತ್ತೆ . ಬೇಗ ಹೋದ್ರೆ ಬೇರೆ ಫ್ರೆಂಡ್ಸ್ ಜೊತೆ ಮಾತಾಡೋಕೆ ಸ್ವಲ್ಪ ಟೈಮ್ ಸಿಗುತ್ತೆ ಅನ್ನೋದು ನಮ್ಮ ಅಭಿಪ್ರಾಯ . ಹೀಗೆ ಆಲೋಚನಾ ಲಹರಿಯಲ್ಲಿ ಮುಳುಗಿದ್ದ ನನ್ನ, ಶ್ವಾನವೊಂದು ತನ್ನ ಡ್ಯೂಟೀ ನಾ ನಿಭಾಯಿಸೋಕೆ ಎಚ್ಚರಿಸಿತು.

ನಾಯಿ ಬೊಗಳುತ್ತಿದೆ ಅಂದ್ರೆ ಯಾವ್ದೋ ಮನೆ ಇದೆ ಅಂತ ಅರ್ಥ . ಅದ್ರಲ್ಲಿ ಸರ್ಪ್ರೈಸಿಂಗ್ ಏನು ಇರ್ಲಿಲ್ಲ . ಯಾಕೆಂದ್ರೆ ಬಸ್ ಸ್ಟ್ಯಾಂಡ್ ನಿಂದ ಅರ್ಧ ಕಿ ಮೀ ದೂರದಲ್ಲಿ ಒಂದು ಮನೆ ಇದೆ ಅನ್ನುವುದು ಗೊತ್ತಿತ್ತು . ಅದೊಂಥರಾ ಪಿಟ್ ಸ್ಟಾಪ್ ನಮಗೆ. ಅಲ್ಲೇ ನಿಂತು ಸ್ವಲ್ಪ ಸುಧಾರಿಸಿಕೊಳ್ಳೋಕೆ ಶುರು ಮಾಡ್ದೆ. ಬರ್ತಾ ಇದ್ದ ನನ್ನ ಏದೂಸಿರನ್ನು ಹತೋಟಿಗೆ ತರಲು ಕೆಲ ನಿಮಿಷಗಳು ಬೇಕಾಯ್ತು. ಅಷ್ಟು ಹೊತ್ತಿಗೆ ನನ್ನ ಚಳಿ ಕಮ್ಮಿ ಆಗಿ ಮೈ ಬೆವರಲು ಶುರು ಆಗಿತ್ತು. ಆಗುತ್ತಿದ್ದ ಸುಸ್ತನ್ನು ಮನಸ್ಸಿಗೆ ಹಕ್ಕೊಲ್ದೇ ಬೆಂಗಳೂರು ನಮ್ಮನ್ನ ಹಾಳು ಮಾಡಿಬಿಟ್ಟಿದೆ ಅಂತ ಮನಸ್ಸಿನಲ್ಲೇ ಬೈದುಕೊಂಡು ಮುಂದೆ ಹೆಜ್ಜೆ ಇಡಲು ಶುರು ಮಾಡಿದೆ.

10 ಮೀಟರ್ ನೆಡೆದಿದ್ದೆ ಅನ್ಸುತ್ತೆ , ದೂರದಲ್ಲಿ ಯಾವುದೋ ಒಂದು ಬಿಳಿ ಬಣ್ಣದ ಆಕಾರ ಬಿರುಸಾಗಿ ಬರುತ್ತಾ ಇರುವ ಹಾಗೆ ಭಾಸವಾಯ್ತು. ಕತ್ತಲಲ್ಲಿ ಮಸುಕು ಮಸುಕಾಗಿ ಕಾಣಿಸಿತ್ತಿದ್ದ ಆಕಾರ ನನ್ನ ಎದೆ ಬಡಿತವನ್ನು ಹೆಚ್ಚಿಸುವಲ್ಲಿ ಯಶಸ್ವಿಯಾಗಿತ್ತು.  ಕೊನೆಗೂ ಯಾವುದೋ ದೆವ್ವ ನನ್ನ ಹಿಡಿಯೋಕೆ ಬರ್ತಾ ಇದೆ , ಛೇ ನಾನು ದೆವ್ವದ ಬಗ್ಗೆ ಅಷ್ಟು ಹಗುರವಾಗಿ ಅಂದುಕೊಳ್ಳಬಾರ್ದಿತ್ತು ಅಂತ ಅನ್ನಿಸ್ತು . ಮನಸ್ಸು ಗಟ್ಟಿ ಮಾಡ್ಕೊಂಡು ರಾಮ ನಾಮ ಜಪಿಸ್ಥ ಮುಂದೆ ಹೆಜ್ಜೆ ಇಡೋಕೆ ಶುರು ಮಾಡಿದೆ . ಆಕಾರ ನೆಡೆಯುತ್ತಿದ್ದ ಬಿರುಸಿಗೆ 2 ನಿಮಿಷದಲ್ಲಿ ಆಲ್‌ಮೋಸ್ಟ್ ನನ್ನ ಹತ್ರ ಬಂದುಬಿಟ್ಟಿತ್ತು . ಢವ ಢವ ಅಂತ ಇದ್ದ ಎದೆಯನ್ನ ಒತ್ತಿ ಹಿಡಿದು ಧೈರ್ಯ ಮಾಡಿಕೊಂಡು ಅವರ ಮುಕ ನೋಡಿದೆ. ( ನಮ್ಮ ಅಜ್ಜಿ ಹೇಳಿದ ಹಾಗೆ ದೆವ್ವಗಳಿಗೆ ಕಾಲು ಹಿಂದೆ ಮುಂದೆ ಇರುತ್ತೆ ಅನ್ನೋದನ್ನ ತುಂಬಾ ಸೀರೀಯಸ್ ಆಗಿ ತಗೊಂಡು ಅಲ್ಲಿಯವರೆಗೂ ಆಕಾರದ ಕಾಲು ನೋಡಲು ಯತ್ನಿಸುತ್ತಿದ್ದೆ ಅನ್ನೋದು ಬೇರೆ ) .  ಪಕ್ಕಾದೂರಿನ ಸಾಬ್ರು ( ನಮ್ಮೋರಲ್ಲಿ ಮುಸ್ಲಿಮ್ಸ್ ಗೆ ಸಾಬ್ರು ಅಂತ ಕರೀತೀವಿ. ನೋ ಅಫೆನ್ಸ್ . ಆವ್ರಿಗೂನು ಏನು ಪ್ರಾಬ್ಲಮ್ ಇಲ್ಲ ) , ಮೋಸ್ಟ್ಲೀ ಮೊದಲನೇ ಬಸ್ ನಲ್ಲಿ ಬರೋ ಪೇಪರ್ ತರೋಕೆ ಹೋಗ್ತಿದ್ರು ಅನ್ಸುತ್ತೆ. ಬಿಳಿ ಬಟ್ಟೆ ಹಾಕಿರೋದರಿಂದ ಸ್ವಲ್ಪ ಭಯ ಪಡಿಸಿದರು ಅಷ್ಟೇ.

ನನ್ನ ಮುಖ ನೋಡಿದ ಅವರು ಯಾವುದೇ ಭಾವನೆಯನ್ನು ವ್ಯಕ್ತಪಡಿಸದೆ ಹಾಗೆ ಮುಂದಕ್ಕೆ ಹೋದ್ರು. ಮೋಸ್ಟ್ಲೀ ಗುರುತು ಸಿಗ್ಲಿಲ್ಲಾ ಅನ್ಸುತ್ತೆ. ಇಲ್ಲ ಇವತ್ತು ಇನ್ನೊಬ್ಬ ಬಕ್ರಾ ನಾ ಭಯ ಪಡಿಸಿದೆ ಅನ್ನೋ ಖುಷಿಯಲ್ಲಿ ಮುಖ ಸರಿಯಾಗಿ ನೋಡ್ಲಿಲ್ವೇನೋ ಅಂದುಕೊಂಡು ಮುಂದೆ ಹೆಜ್ಜೆ ಇಡೋಕೆ ಶುರು ಮಾಡಿದೆ. ಚಿಕ್ಕದಾಗಿ ಬೆಳಕು ಹರಿಯೋಕೆ ಶುರು ಆಗಿತ್ತು . ಜಗತ್ತಲ್ಲಿ ಸೂರ್ಯ ಮಾತ್ರ ಅನ್ನಿಸುತ್ತೆ ದಿನ ಟೈಮ್ ಗೆ ಸರಿಯಾಗಿ ಏಳೋದು ಅಂತ ಅಂದುಕೊಂಡು ಮುಂದೆ ಹೋಗ್ತಿದ್ದಾಗ್ಲೇ ಎಲ್ಲೋ ದೂರದಲ್ಲಿ ಒಂದು ಬೈಕ್ ನಾ ಶಬ್ದ ಕೇಳಿದ ಹಾಗಾಯ್ತು .  ಅಮೃತ ಸಿಕ್ಕಿದಷ್ಟು ಖುಷಿ ಆಯ್ತು ನೋಡಿ , ಜೀವನದಲ್ಲಿ ಎಲ್ಲಾ ಕಳೆದುಕೊಂಡು ಸಾಯೋಕೆ ಹೋಗ್ತಾ ಇರೋನಿಗೆ ದಾರಿಯಲ್ಲಿ ನಿಧಿ ಸಿಕ್ಕಿದ್ರೆ ಎಷ್ಟು ಖುಷಿ ಆಗುತ್ತೋ ಅಷ್ಟು ಖುಷಿ. ಕೊನೆಗೂ ಬಂದ ಅನ್ಸುತ್ತೆ ನಮ್ಮ ಅಣ್ಣ ಅಂತ ಅಂದ್ಕೊಂಡು , ಆಗ್ತಿದ್ದ ಸುಸ್ತನ್ನ ಉತ್ಸಾಹದಲ್ಲಿ ಮುಚ್ಚಿಡ್ತಾ ಮುಂದಕ್ಕೆ ದಾಪುಗಾಲು ಹಾಕೋಕೆ ಶುರು ಮಾಡ್ದೆ.

ಮೊದಲು ಕ್ಷೀಣವಾಗಿ ಕೇಳಿಸ್ತಾ ಇದ್ದ ಶಬ್ದ ನಿಧಾನವಾಗಿ ಘಾಡವಾಗ್ತಾ ಹೋಯ್ತು. ದೂರದಲ್ಲೊಂದು ಹೆಡ್ ಲೈಟ್ ಕೂಡ ಕಾಣಿಸೋಕೆ ಶುರುವಾಯ್ತು. ಬಂದೇ ಬಿಟ್ಟ ಅಂದುಕೊಂಡು ಅವನನ್ನ ಮಾತಾಡಿಸೋಕೆ ರೆಡೀ ಆದೆ. " ಬಸ್ ಬೇಗ ಬಂತ ಮಾರಾಯ , ಮೊನ್ನೆ 6 ಘಂಟೆಗೆ ಬಂದಿದ್ದ ಅದಿಕ್ಕೆ ಸ್ವಲ್ಪ ಲೇಟ್ ಆಗಿ ಬಂದೆ" ಅಂದ . ಆಗ್ತಿದ್ದ ಸುಸ್ತನ್ನು ತೋರಿಸಿಕೊಳ್ಳದೆ " ಪರವಾಗಿಲ್ಲ ಬಿಡು ನೆಡಿಯೋದೇನು ಹೊಸತಲ್ವಲ್ಲ " ಅಂದೆ. ಗಾಡಿ ಮೇಲೆ ಕೂತು ಕ್ಷೇಮ ಸಮಾಚಾರ ಮಾತಾಡ್ತಾ ಹಾಗೆ ಮುಂದೆ ಸಾಗಿದ್ವಿ. ಈ ಚಳಿಗೆ ಒಂದು ಕಾಫೀ ಸಿಕ್ಕಿದ್ರೆ ಎಷ್ಟು ಚೆನ್ನಾಗಿರ್ತಿತ್ತು ಅಂತ ಅನ್ನಿಸ್ತಿತ್ತು . ಬೈಕ್ ನ ವೇಗಕ್ಕೆ ತಂಪಾಗಿ ಮುಕಕ್ಕೆ ಬೀಸ್ತಾ ಇದ್ದ ಗಾಳಿ ಒಂದು ಹೊಸ ಹುಮ್ಮಸ್ಸು ಕೊಡ್ತಾ ಇತ್ತು.  ಬೈಕ್ ನಲ್ಲಿ 15 ನಿಮಿಷ ಅವರ ಮನೆ . ತುಂಬಾ ದೂರ ಇಲ್ದೆ ಇದ್ರೂನೂ ಅಲ್ಲಿರುವ ರೋಡಿನ ಪರಿಸ್ಥಿತಿಗೆ ಅದು ಕಡಿಮೆ ಸಮಯಾನೆ . ಆದರೂ ಇವಾಗ ಪರ್ವಾಗಿಲ್ಲ ಅವರ ಮನೆಯವರೆಗೂ ಟಾರ್ ಹಾಕಿದಾರೆ. ನಾನು ಊರಲ್ಲಿ ಇದ್ದಾಗ ಬರೀ ಜೆಲ್ಲೀ ರಸ್ತೆ .

ಬೈಕ್ ನಲ್ಲಿ ಕೂತು , ಸುತ್ತ ಮುತ್ತ ಏನಾದ್ರೂ ಬದಲಾವಣೆಗಳು ಇದೆಯಾ ಅಂತ ನೋಡುತ್ತಾ ಮನೆ ಬರುವುದನ್ನೇ ಕಾಯ್ತಾ ಇದ್ದೆ.

ಸಶೇಷ

Wednesday, 19 June 2013

ಸಿಂಪಲ್ ಆಗಿ ಒಂದು ಊರು ಸ್ಟೋರಿ !! ( ಭಾಗ ೧ )

ಸಿಂಪಲ್ ಆಗಿ ಒಂದು ಊರು ಸ್ಟೋರಿ !! ( ಭಾಗ ೧ )

ಬರೆಯುವ ಮುನ್ನ
ಸ್ನೇಹಿತರೆ, ಈ ಬರವಣಿಗೆಯಲ್ಲಿ  ನಾನು ಸಿಂಪಲ್ ಕನ್ನಡ , ಎಲಾರ್ಗೂ ಓದಿ ಅರ್ಥ ಮಾಡ್ಕೊಳೋಕೆ ಈಸೀ ಆಗೋ ಥರ ಬರ್ದಿದೀನಿ . ಬೆಂಗಳೂರು ಸ್ನೇಹಿತರು ಜಾಸ್ತಿ ಇರುವುದರಿಂದ ಹೀಗೆ ಬರೆಯಲೇ ಬೇಕಾಗಿದೆ. ನಮ್ಮ ಊರಿನ ಬಗ್ಗೆ ಒಂದು ಚಿಕ್ಕ ಐಡಿಯಾ ಕೊಡುವ ಪ್ರಯತ್ನ ಮಾಡಿದೀನಿ . ಇದು ಮೊದಲನೇ ಭಾಗ .
ಧನ್ಯವಾದ


"ಜಯಪುರ ಜಯಪುರ" ಅನ್ನೋ ಕರ್ಕಶ ಕೂಗೊಂದು ಐರಾವತದ ತಂಪಾದ ಏಸೀನಲ್ಲಿ ಬ್ಲ್ಯಾಂಕೆಟ್ ಹೊದ್ದು ಕಾಲು ಚಾಚಿ ಮಲಗಿದ್ದ ನನ್ನ ಬಡಿದೆಬ್ಬಿಸ್ತು . ಮೊಬೈಲ್ ತೆಗೆದು ನೋಡಿದ್ರೆ ಇನ್ನೂ ಬೆಳಿಗ್ಗೆ 5 ಘಂಟೆ . ಇಷ್ಟು ಬೇಗ ರೀಚ್ ಆದ್ನ ಅಂತ ಡ್ರೈವರ್ ನ ಮನಸಾರೆ ಬೈದುಕೊಂಡು ಕಣ್ಣು ಉಜ್ಜಿಕೊಂಡೆ.
ನಾನು ಇಳಿಬೇಕಾದ ಜಾಗ ಇನ್ನೂ 10 ಕಿ ಮೀ ಇದೆ. ಚಿಕ್ಕಮಗಳೂರಿಂದ  ನಿದ್ರಾದೇವಿ ಆವರಿಸೋಕೆ ಟ್ರೈ ಮಾಡುದ್ರೂನೂ ನಮ್ಮ ರೋಡು , ಆ ಟರ್ನಿಂಗ್ಗಳು ಮತ್ತೆ ಬಸ್ ಡ್ರೈವರ್ ಒಟ್ತ್ಗೆ ಸೇರಿ ಅವಳನ್ನ ಓಡಿಸ್ತಾ ಇದ್ರು .

ಅರೆ ಕೆಂಪಾದ ನನ್ನ ಕಣ್ಣುಗಳನ್ನ ತೆರೆದು ಕಪ್ಪಾದ ವಿಂಡೊ ಗ್ಲಾಸ್ ನಿಂದ ಆಚೆ ನೋಡೋಕೆ ಟ್ರೈ ಮಾಡ್ತಾ ಇದ್ದೆ . ಅದೇ ಊರು ಯಾವ್ದೇ ರೀತಿ ಆದ ಮೇಜರ್ ಚೇಂಜಸ್ ನನಗೆ ಕಾಣಿಸ್ತಾ ಇರ್ಲಿಲ್ಲ . ಅಲ್ಲಿ ಇಲ್ಲಿ ಒಂದೊಂದು ಹೊಸ ಬಿಲ್ಡಿಂಗ್ ಬಿಟ್ರೆ ಯಾವುದೇ ರೆವೊಲ್ಯೂಶನರೀ ಚೇಂಜಸ್ ಇಲ್ಲ.  ಹಾಗೆ ಕಣ್ಣು ಹಾಯಿಸಿದಾಗ ಕಾನ್ಸಿದ್ದು ಆ ಕಾಲದ ಫೇಮಸ್ ಹಾಗೂ ನಮ್ಮ ಫವೊಊರಿಟ್  ಹೇರ್ ಕಟ್ ಶಾಪ್ . ಬೆಳಿಗ್ಗೆ 6 ಘಂಟೆಗೆ ಎದ್ದು 4 ಕಿ ಮೀ ನೆಡೆದು , ಬಸ್ ಹಿಡ್ಕೊಂಡು ಅಲ್ಲಿಗೆ ಬಂದು , ಬೇರೆ ಬೇರೆ ಸ್ಟೈಲ್ ಮಾಡೋಕೆ ಅವನ ತಲೆ ತಿಂದು ಹೋಗ್ತಾ ಇದ್ವಿ . ಎಷ್ಟೇ ತಲೆ ತಿಂದ್ರುನೂ ಆತ ಅದನ್ನ ಮನಸ್ಸಿಗೆ ಹಕ್ಕೊಲ್ದೇ ಅವನಿಗೆ ಗೊತ್ತಿದ್ದ ಒಂದು ಹೇರ್ ಕಟ್ ನಾ ಎಲ್ಲರ್ಗೂ ಮಾಡಿ , ಅವರನ್ನ ಖುಷಿಯಾಗಿ ಮನೆಗೆ ಕಳಿಸ್ತಾ ಇದ್ದ ಅವನ ಕ್ಲೆವರ್‌ನೆಸ್ ನಾ ಮನಸ್ಸಿನೆಲ್ಲೆ ನೆನೆಸಿಕೊಂಡು ನಗ್ತಾ ಇದ್ದೇ.

ಹಾಗೆ ನಿದ್ರಿಸುವ ಪ್ರಯಾಣಿಕರನ್ನು ಹೊತ್ತ ನಮ್ಮ ಐರಾವತ ಮುಂದೆ ಸಾಗಲು ಶುರುವಾಯ್ತು. ಆಚೆ ಚಿಕ್ಕದಾಗಿ  ಮಳೆ ಬೇರೆ.  ಆ ಮಳೆ ನೋಡಿ ಗಾಳಿಪಟ
ಮೂವೀ ನಲ್ಲಿ ರಾಂಘಾಯನ ರಘು ಹೇಳುವ "ಇದೇನು ಊರೋ ಅಥವಾ ಬಚ್ಚಲು ಮನೇನೂ" ಡೈಲಾಗ್ ಮನಸ್ಸಿಗೆ ಬಂತು. ನಮ್ಮೂರಲ್ಲಿ ವರ್ಷಕ್ಕೆ ಆರು ತಿಂಗ್ಳು ಮಳೆ ಗ್ಯಾರೆಂಟೀ . ಕೆಲವು ಸಲ ಹಿಡಿದ ಮಳೆ ಮೂರು ಮೂರು ದಿನ ಆದ್ರೂ ಬಿಡೋದಿಲ್ಲ . ಆದ್ರೂ ತಿಂಡಿಪೋತರಿಗೆ ಮಳೆಗಾಲನೇ ಸರಿ ಬಿಡಿ. ಇದರ ಬಗ್ಗೆ ಆಮೇಲೆ ಹೇಳ್ತೀನಿ. ಹಾಗೆ ಹೊರಟ ಬಸ್ಸು ಮುಂದೆ ಚಲಿಸುತ್ತ ಇತ್ತು ನನ್ನ ಯೋಚನೆಗಳು ಹಿಂದೆ ಹೋಗ್ತಾ ಇತ್ತು . ಪ್ರತಿ ಸಲ ಊರ್‌ಗೆ ಹೋದ್ರು ಹೀಗೇನೆ
ಬಸ್ ನಲ್ಲಿ ಕೂತು ಹಳೆಯದನ್ನು ಯೋಚಿಸೋದು . ಹಳೇ ಸ್ನೇಹಿತ, ಹಳೆಯ ನೆನಪುಗಳು , ಹಳೆಯ ಹುಡುಗಿ ಯಾವತ್ತೂ ನಿದ್ದೆ ಮಾಡೋಕೆ ಬಿಡೋದಿಲ್ಲವಂತೆ.

ಹಾಗೇ ಸಾಗ್ತಾ ಸಾಗ್ತಾ ನನ್ನ ಕಣ್ಣಿಗೆ ಬಿದ್ದಿದ್ದು ನನ್ನ ಮಿಡ್ಲ್ ಸ್ಕೂಲ್ , ಲಾಲಿ ತಿಂತಾ ಇದ್ದ ಅಂಗಡಿಗಳು , ಗಣೇಶನ ದೇವಸ್ತಾನ , ನಾವು ಬಾಳೆ ಹಣ್ಣು ಕದಿಯುತ್ತಿದ್ದ ಅಂಗಡಿಗಳು ಹೀಗೇ ಯೋಚನೆಗಳು ಸಾಗ್ತಾ ಹೋದ್ವು. ಆಗ ಇಷ್ಟ ಆಗ್ತಾ ಇದ್ದ ಹುಡುಗಿಯರು ಅವರ ಮುಕಗಳು ಎಲ್ಲಾ ನನ್ನಲ್ಲಿ ಒಂದು ಮುಗುಳ್ನಗು ತರುವಲ್ಲಿ ಯಶಸ್ವಿಆದ್ವು . ತುಂಬಾ ಜನ ಆಲ್‌ರೆಡೀ ಮದುವೆ ಆಗಿದಾರೆ ಕೆಲವ್ರಿಗೆ ಮಕ್ಕಳೂ ಆಗಿವೆ. ಕೆಲವು ಸಲ ಸಿಕ್ಕಿದ್ರೆ "ಯಾಕಮ್ಮ ತುಂಬಾ ಅರ್ಜೆಂಟ್ ಇತ್ತಾ ಸಂಸಾರ ಮಾಡೋಕೆ?? ನಾವು ಮದುವೆಗೆ ಕೇಳೋವರ್ಗೂ ಕಾಯೋಕೆ ಆಗ್ಲಿಲ್ವಾ" ಅಂತ ಕೇಳೋಣ ಅನ್ಸುತ್ತೆ ಆದ್ರೆ ಕೇಳೋಕೆ ಆಗಲ್ಲ .

ಮುಂದೆ ಸಿಕ್ಕಿದ್ದು ಹೈ ಸ್ಕೂಲ್ . ಇದೆ ಜಾಗ ನಮಗೆ ಬೆಂಗಳೂರಿಗೆ ಬರೋಕೆ ಅಡಿಪಾಯ ಹಾಕಿದ್ದು . ಒಳ್ಳೆ ಪರ್ಸೆಂಟೇಜ್ ಬಂದ್ರೆ ಮಾತ್ರ ಬೆಂಗಳೋರಿನಲ್ಲಿ
ಓದೋಕೆ ಆಗೋದು , ಅಲ್ಲಿ ಇರೋವ್ರೆಲ್ಲಾ ತುಂಬಾ ಇಂಟೆಲಿಜೆಂಟ್ ಅನ್ನೋ ನಮ್ಮಣ್ಣನ  ಮಾತನ್ನ ತುಂಬಾ ಸೀರೀಯಸ್ ಆಗಿ ತಗೊಂಡು ಓದಿದ್ದೆ ಆವಾಗ .
ಇಲ್ಲಿಗೆ ಬಂದ್ಮೇಲೇನೆ ಗೊತ್ತಾಗಿದ್ದು ಎಲ್ಲಾರ ಮನೆ ದೋಸೆನು ತೂತೇ ಅಂತ . ಶನಿವಾರ ಊಟ ಮಾಡ್ದೇನೆ 5 ಘಂಟೆವರ್ಗೂ ಆಡ್ತಾ ಇದ್ದ ಕ್ರಿಕೆಟ್ ನೆನಪಾಯ್ತು.
ಅದ್ರಲ್ಲೂ ಪಾಲಿಟಿಕ್ಸ್ , ಸ್ಕೂಲ್ ನಲ್ಲಿ ಟೀಚರ್ ಜೊತೆ ಪಾಲಿಟಿಕ್ಸ್ , ಕ್ಲಾಸ್ ಮಾನಿಟರ್ ಆಗೋಕೆ ಪಾಲಿಟಿಕ್ಸ್ ಅಬ್ಬಾ ಈ ಪಾಲಿಟಿಕ್ಸ್ ಯಾವ ಚಿಕ್ಕ ಲೆವೆಲ್‌ನಲ್ಲೇ ಇರುತ್ತೆ , ಈಗ ಬುದ್ದಿಜೀವಿಗಳು ಮೈಕ್ ಹಿಡ್ಕೊಂಡು ಆಫೀಸ್ ನಲ್ಲಿ , ಅಸೆಂಬ್ಲೀ ನಲ್ಲಿ , ಮಠದಲ್ಲಿ ನೆಡಿಯೋ ಪಾಲಿಟಿಕ್ಸ್ ಬಗ್ಗೆ ಮಾತಾಡ್ತಾರೆ ಆದರೆ ಅದು ಸ್ಕೂಲ್ ನಿಂದಾನೆ ಬಂದಿರುತ್ತೆ ಅನ್ನೋದು ನಗ್ನ ಸತ್ಯ.

ಹೀಗೆ ನನ್ನ ಯೋಚನೆಗಳು ಎಷ್ಟು ಫಾಸ್ಟ್ ಆಗಿ ಹೋಗ್ತಾ ಇದ್ವೋ ಅಷ್ಟೇ ಫಾಸ್ಟ್ ಆಗಿ ನಮ್ಮ ಐರಾವತಾನು ಚಲಿಸುತ್ತ ಇತ್ತು . ನಾನು ನನ್ನ ಯೋಚನಾ ಲಹರಿಯಲ್ಲಿ ಮುಳುಗಿರುವಾಗ್ಲೇ ಬಂತು ನೋಡಿ ನಾನು ಇಳಿಯಬೇಕಾದ ಜಾಗ. ಬೇಗ ಎದ್ದು ನನ್ನ ಬ್ಯಾಗ್ ತಗೊಂಡು ಮುಂದೆ ಓಡಿದೆ. ಅದು ರೆಗ್ಯುಲರ್ ಬಸ್ ಸ್ಟಾಪ್ ಆಗಿದ್ರು ಕೂಡ ರಾತ್ರಿ ಹೊತ್ತು ಬಸ್ ಗಳನ್ನ ಅಲ್ಲಿ ನಿಲ್ಲಿಸೋಲ್ಲ. ಯಾರಾದ್ರೂ ಇಳಿಯುವವರು ಇದ್ರೆ ಮಾತ್ರ . ಹಾಗೆ ಹೋಗಿ ಡ್ರೈವರ್ ಗೆ ನಿಲ್ಲಿಸಲು ಹೇಳಿದ್ರೆ ಆತ ನಾನೇನು ಹುಚ್ಚಾನ ಅಂತ ನೋಡ್ದ. ( ಅವನ ತಪ್ಪಿಲ್ಲ ಬಿಡಿ , ಅಲ್ಲಿ ನಕ್ಷಲ್ ಪ್ರಾಬ್ಲಮ್ ಇರೋದ್ರಿಂದ ಸ್ವಲ್ಪ ಭಯ ಪಡ್ತಾರೆ ) . ಇಲ್ಲ ಇಲ್ಲೇ ಇಳಿತೀನಿ ಕರ್ಕೊಂಡು ಹೋಗೋಕೆ ಬರ್ತಾರೆ ಅಂದಾಗ ನಿಲ್ಲಿಸುವ ಮನಸ್ಸು ಇಲ್ದೆ ಇದ್ರೂನೂ ಕಷ್ಟ ಪಟ್ಟು ಬ್ರೇಕ್ ಮೇಲೆ ಕಾಲಿಟ್ಟ. ಬ್ಯಾಗ್ ನಾ ಹೆಗಲಿಗೆ ಹಾಕ್ಕೊಂಡು , ಸುಖ ಪ್ರಯಾಣ ಕೊಟ್ಟ ಐರಾವತಕ್ಕೆ ಥ್ಯಾಂಕ್ಸ್ ಹೇಳಿ ಕೆಳಗಡೆ ಕಾಲಿಟ್ಟೆ.  ಮೊದಲೇ ಆತಂಕದಲ್ಲಿದ್ದ ಡ್ರೈವರ್ ಕೆಳಗೆ ಸೇಫ್ ಆಗಿ ಇಳಿದ್ನೋ
ಇಲ್ವೋ ಅಂತಾನೂ ನೋಡ್ದೆ ಆಕ್ಸೆಲರೇಟರ್ ಮೇಲೆ ಕಾಲು ಇಟ್ಟೆ ಬಿಟ್ಟ. ಮುಖದ ಮೇಲೆ ಹೊಗೆ ಉಗುಳಿ ಅದರ ಗಮ್ಯಸ್ಥಾನ ( ಡೆಸ್ಟಿನೇಶನ್) ಕಡೆ ದೌಡಾಯ್ಸ್ತು ಐರಾವತ.

ನನ್ನ ನೋಡಿ ಖುಷಿ ಆದ ಹಾಗೆ ಅಲ್ಲಿಯವರೆಗೂ ಜಿನುಗುತ್ತಿದ್ದ ಮಳೆರಾಯ ಕೂಡ ಸ್ವಲ್ಪ ದೊಡ್ಡ ಹನಿಗಳನ್ನು ಹಾಕಲು ಶುರು ಮಾಡಿದ. ಚಳಿಗೆ ನಡುಗುತ್ತಿದ್ದ ನನ್ನ ಶರೀರವನ್ನು ಜ್ಯಾಕೆಟ್ ನಲ್ಲಿ ಬಂಧಿಸಿ , ಹೊಗೆ ಬತ್ತಿ ಅಂಟಿಸುವ ಮನಸ್ಸಾದರೂ ಕೂಡ ಅದನ್ನ ಆಮೀಕಿಟ್ಟೂ ಪ್ರಕೃತಿ ಕರೆಯಲ್ಲಿ ತೊಡಗಿದೆ. ಅಲ್ಲಿ ಒಂದು ಬಸ್ ಸ್ಟ್ಯಾಂಡ್ ಹಾಗೂ ಪಕ್ಕದಲ್ಲಿ ಒಂದು ಅಂಗಡಿ( ತೆರೆದಿರುವ ಅಂಗಡಿ ಅಲ್ಲ ಮುಚ್ಚಿರುವ ಅಂಗಡಿ )  ಬಿಟ್ಟರೆ ಇನ್ನೇನು ಇಲ್ಲ. ಒಂದು ಬೀದಿ ದೀಪವು ಗತಿ ಇಲ್ಲದೆ ಇರುವ ಆ ಜಾಗದಲ್ಲಿ ಬೃಹದಾಕಾರದಲ್ಲಿ ಬೆಳೆದಿರುವ ಮರಗಳನ್ನು ಬಿಟ್ಟರೆ ಶಬ್ದ ಮಾಡುವ ಜೀರುಂಡೆಗಳು , ಬಿಬ್ರಿಗಳು ಇವೆಯಸ್ಟೆ . ಆ ಕಾರ್ಗತ್ತಲಲ್ಲಿ
ಒಂಟಿ ಪಿಶಾಚಿಯಂತೆ ನಿಂತಿದ್ದ ನನಗೆ ಚಿಕ್ಕ ವಯಸ್ಸಿನಲ್ಲಿ ಇಲ್ಲಿ ದೆವ್ವ ಭೂತ ಇದೆ ಎನ್ನುವ ಮಾತುಗಳು ನೆನಪಾಗಿ ಸುತ್ತ ಮುತ್ತ ನೋಡಲು ಶುರು ಮಾಡಿದೆ.
ನನ್ನ ದುರದೃಷ್ಟಕ್ಕೆ ಕಂಪನೀ ಕೊಡಲು ಒಂದು ದೆವ್ವವು ಇರಲ್ಲಿಲ . ಅವುಗಳು ಕೂಡ ಚಳಿ ಮತ್ತು ಮಳೆಗೆ ಬೆದರಿ ಗೂಡು ಸೇರಿಕೊಂಡಿರಬೇಕು ಎಂದುಕೊಂಡೆ.

ನನ್ನ ಕರೆದುಕೊಂಡು ಹೋಗಲು ಬರಬೇಕಾಗಿದ್ದ ಕಸಿನ್ ಬ್ರದರ್ ಇನ್ನೂ ಬಂದಿರ್ಲಿಲ್ಲ. ಪಾಪ ಮಳೆ ಬೇರೆ , ಅವ್ನಿಗೆ ಮದುವೆ ಬೇರೆ ಆಗಿದೆ ಬೆಳಿಗ್ಗೆ ಮುಂಚೆ ಚಳಿಯಲ್ಲಿ ಅವ್ನ ಹೆಂಡ್ತೀನ ಬಿಟ್ಟು ಬರ್ತಾನೆ ಅಂತ ಎಕ್ಸ್‌ಪೆಕ್ಟ್ ಮಾಡೋದು ತಪ್ಪು ಅಂತ ಅಂದ್ಕೊಂಡು ಮನೆ ಕಡೆ ಹೆಜ್ಜೆ ಹಾಕೂಕೇ ಶುರು ಮಾಡಿದೆ. ಆದ್ರೂ ನೆಡೆಯಬೇಕಿದ್ದ 4 ಕಿ ಮೀ ಡಿಸ್ಟೆನ್ಸ್ ನನ್ನ ಕಾಡ್ತಾ ಇತ್ತು.

ಸ ಶೇ ಷ ( ಟು ಬಿ ಕಂಟಿನ್ಯೂಡ್ )











ಧನಾತ್ಮಕ ಆಲೋಚನೆ  ( ಪಾಸಿಟಿವ್ ಥಿಂಕಿಂಗ್ ) ಅಂದ್ರೆ ಏನು ???
ಶಿರಸ್ತ್ರಾಣ ( ಹೆಲ್ಮೆಟ್) ಇಲ್ಲದೆ ಗಾಡಿ ಓಡಿಸುವಾಗ 5 ಅಡಿ (ಫೀಟ್)
ಅಂತರದಲ್ಲಿ ಆರಕ್ಷಕ ( ಪೋಲೀಸ್) ನಿಂತಿದ್ರು ಅವನು ನಮ್ಮನ್ನ ತಡೆಯೋಲ್ಲ  ಅಂತ ಯೋಚಿಸೋದಾ??
ಅಥವಾ ತರಗತಿಯಿಂದ (ಕ್ಲಾಸ್) ಪರಾರಿಯಾಗಿ (ಬಂಕ್ ಮಾಡಿ) ಹೋಗುವಾಗ ಪ್ರಾಚಾರ್ಯರು  ( ಪ್ರಿನ್ಸಿಪಲ್)  ಎದುರಿಗೆ ಸಿಕ್ಕಿದ್ರೂನೂ ಏನು
ಮಾಡೊಲ್ಲಾ ಅನ್ನೋ ನಂಬಿಕೇನ ??
ಅಥವಾ ರೈಲು ಹಳಿ ಮೇಲೆ ನಿಂತು ದೇವರು ನನ್ನ ಕಾಪಾಡ್ತಾನೆ ಅಂತ ನಂಬಿಕೊಳ್ಳುವುದ??
ಹೀಗೆ ಧನಾತ್ಮಕ ಆಲೋಚನೆ ಬಗ್ಗೆ ತುಂಬಾ ಉದಾಹರಣೆಗಳು, ವಿಶ್ಲೇಷಣೆಗಳು ಕೊಡಬಹುದು. ಆದರೆ ನಿಜವಾಗ್ಲೂ ಧನಾತ್ಮಕ ಆಲೋಚನೆ
ಮಾಡುವವರು ಎಷ್ಟು  ಜನ ?? ಯಾವುದನ್ನ ಧನಾತ್ಮಕ ಆಲೋಚನೆ  ಹಾಗೂ ಯಾವುದನ್ನ ಗಾಢನಂಬಿಕೆ ( ಓವರ್ ಕಾನ್ಫಿಡೆನ್ಸ್) ಅಂತ
ಕರಿಬಹುದು?? ಪ್ರಾಯಶಃ ಇದಕ್ಕೆ ಉತ್ತರ ಕೊಡುವವರು ತುಂಬಾ ಕಡಿಮೆ.
ಈಗ ಈ ಬರವಣಿಗೆ ಮುಂದೆ ತುಂಬಾ ಆಸಕ್ತಿಯುತವಾಗಿರುತ್ತೆ ಅಂತ ಯೋಚಿಸೋದು ಧನಾತ್ಮಕ ಆಲೋಚನೆಯೂ ಆಗಬಹುದು ಅಥವಾ
ಗಾಢನಂಬಿಕೆಯೂ ಆಗಬಹುದು.  ಹೀಗೆ ಪ್ರತಿಯೊಂದು ಆಲೋಚನೆಯನ್ನು ಬೇರೆ ಬೇರೆ ವರ್ಗಗಳಿಗೆ ಸೇರಿಸಬಹುದು.

ಜೇವನದಲ್ಲಿ ಹುಡುಗಿ/ ಹುಡುಗ ಕೈ ಕೊಟ್ಟಾಗ, ದುಡ್ಡಿಗೆ ತೊಂದರೆ ಇದ್ದಾಗ, ಕೆಲಸ ಸಿಗದೆ ಇದ್ದಾಗ , ಕೌಟುಂಬಿಕ ಕಲಹ ಇದ್ದಾಗ ಸ್ನೇಹಿತರು
ಧನಾತ್ಮಕ ಆಲೋಚನೆ ಬಗ್ಗೆ ಮಾತಾಡೋದು ಸಹಜ, ಆದರೆ ಅದೇ ತೊಂದರೆ ಅವರಿಗೆ ಬಂದಾಗ ಅವರಿಗೆ ಧನಾತ್ಮಕ ಆಲೋಚನೆ ಯಾಕೆ
ಬರುವುದಿಲ್ಲ??? ಹಾಗಾದರೆ ಧನಾತ್ಮಕ ಆಲೋಚನೆ ಬರೇ ಬಾಯಲ್ಲಿ ಹೇಳಲು ಮಾತ್ರಾನಾ ??  ಧನಾತ್ಮಕ ಆಲೋಚನೆಯಿಂದ ಬದುಕುವವರು
ಯಾರಾದ್ರೂ ಇದ್ದಾರಾ??  ನಿರುದ್ಯೋಗಿಗೆ ಉದ್ಯೋಗದ ಭರವಸೆ ನೀಡುವ ಆಲೋಚನೆ ಯಾವುದು?? ಹೀಗೆ ಚರ್ಚಾಸ್ಪದವಾಗಿ ಸಾಗುವ ಈ ವಿಷಯದ ಬಗ್ಗೆ ದಿನವಿಡೀ ಚರ್ಚೆ ಮಾಡಿದರೂ ಮುಗಿಯುವುದಿಲ್ಲ.

ರಾಮಾಯಣದಲ್ಲಿ ರಾವಣ ಸೀತೆಯನ್ನು ಅಪಹರಿಸುವ ಯೋಚನೆ ಮಾಡಿದ್ದಾಗ ಅದು ಧನಾತ್ಮಕ ಯೋಚನೆ ಆಗಿತ್ತ?? ಆತನಿಗದ್ದ ಶಿವನ ಒಲುಮೆ ಆತನನ್ನು ಹಾಗೆ ಪ್ರೇರೇಪಿಸಿತ?? ಅದು ಆತನಿಗೆ ಯಶಸ್ಸು ತಂದುಕೊಟ್ಟಿದರೆ ಅದನ್ನು ಧನಾತ್ಮಕ ಆಲೋಚನೆ ಎಂದು ಹೇಳಬಹುದಿತ್ತಾ ?? ಅವನ ಸಾವಿಗೆ ಕಾರಣವಾದ ಅದೇ ಯೋಚನೆಯನ್ನು ನಾವು ಮೂಢನಂಬಿಕೆ ಅಥವಾ ದುರಹಂಕಾರ ಎಂದು ಹೇಳ್ತೀವಾ ?? ಹಾಗಾದರೆ ಮನುಷ್ಯನಿಗೆ ಯಶಸ್ಸು ತಂದುಕೊಡುವ ಆಲೋಚನೆಯನ್ನು ಮಾತ್ರ ಸಮಾಜ ಧನಾತ್ಮಕ ಆಲೋಚನೆ ಎಂದು ಕರೆಯುತ್ತಾ?? ಒಬ್ಬ ಸಾಮಾನ್ಯ ಮನುಷ್ಯನಾಗಿ ಧನಾತ್ಮಕ ಆಲೋಚನೆ ಹಾಗೂ ದುರಹಂಕಾರ ಅಥವಾ ಗಾಢನಂಬಿಕೆ ಮಧ್ಯೆ ವ್ಯತ್ಯಾಸ ತಿಳಿದುಕೊಳ್ಳುವುದು ಹೇಗೆ ?? ಹೀಗೆ ಯೋಚ್ನೆ ಮಾಡ್ತಾ ಮಾಡ್ತಾ ಕೊನೆಗೂ ತೀರ್ಮಾನ ಕೊಡೋಕೆ ಆಗ್ದೇ ಇರೋ ಚರ್ಚೆ ಆಗಿ ಉಳಿದುಬಿಡುತ್ತೆ ಈ ವಿಷಯ.


ಹೀಗೆ ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಏರೀಸುವ ಈ ವಿಷಯ ಕೆಲವೊಮ್ಮೆ ತುಂಬಾ ಸರಳವಾಗಿ ಕಾಣಿಸುತ್ತೆ.  ಸಂಬಧ ಕಡಿದುಕೊಂಡ ವ್ಯಕ್ತಿ ಹೊಸ ಸಂಗಾತಿಯನ್ನು ಆಶಿಸುವುದು , ವ್ಯವಹಾರ ( ಬುಸಿನೆಸ್ಸ್ ) ದಲ್ಲಿ ಪ್ರಗತಿಯನ್ನು ಬಯಸುವುದು , ಪರೀಕ್ಷೆಯಲ್ಲಿ ಉತ್ತಮ್ಮ ಅಂಕಗಳನ್ನು ಬಯಸುವುದು ( ಓದಿದ ನಂತರ) ಮತ್ತು ಮನೆಯಲ್ಲಿ  ಹೆಂಡತಿ ಜಗಳ ಮಾಡದೆ ಇರುವುದನ್ನು ಬಯಸುವುದು ಹೀಗೆ ನಿಮ್ಮ ಆರಾಮ ವಲಯದಲ್ಲಿ ( ಕಂಫರ್ಟ್ ಜ಼ೋನ್ ) ಒಳ್ಳೆಯ ಸಂಗತಿಗಳನ್ನು ಬಯಸುವುದನ್ನು ಧನಾತ್ಮಕ ಯೋಚನೆ ಎಂದು ಹೇಳಬಹುದು. ಆದ್ರೂ ಕೂಡ ಈ ಧನಾತ್ಮಕ ಯೋಚನೆಗಳು ಯಾವಾಗ್ಲೂ ಸತ್ಯ ಆಗುತ್ತೆ ಅಂತ ಹೇಳೋಕೆ ಆಗಲ್ಲ .
 ಧನಾತ್ಮಕ ಯೋಚನೆಗಳು ಬುಡವಿಲ್ಲದ ( ಬೇಸ್ಲೆಸ್)  ವಾದ ಅಥವಾ ಚರ್ಚೆ ಅಂಥ  ಅನ್ಸುದ್ರೂ  ಎಲ್ಲೋ ಒಂದು ಕಡೆ ಒಬ್ಬ ಭಿಕ್ಷುಕನಿಗೆ, ನಿರುದ್ಯೋಗಿಗೆ, ಭಗ್ನ ಪ್ರೇಮಿಗೆ, ವಿಧವೆಗೆ ಮತ್ತು ಹಲವು ಭಾವನಾತ್ಮಕ ಜೀವಿಗಳಿಗೆ ಜೀವ ತುಂಬುವ ಔಷಧ ಅಂತ ಅನ್ಸುತ್ತೆ.  ನಮ್ಮ ಸ್ನೇಹಿತರು ಧನಾತ್ಮಕ ಚಿಂತನೆ ಬಗ್ಗೆ ಮಾತು ಆಡಿದಾಗ ಎಲ್ಲೋ ಒಂದು ಕಡೆ ಅದು ನಮ್ಮಲ್ಲಿ ಸ್ಪೂರ್ತಿ ತುಂಬ್ತಾ ಇದೆ ಅಂತ ಅನ್ಸುತ್ತೆ.  ಇಂದಿಗೂ ಈ ಜಗತ್ತಿನಲ್ಲಿ ಎಷ್ಟೊಂದು ಆತ್ಮಹತ್ಯೆಗಳು ತಪ್ಪಿಹೋಗ್ತಾ
ಇರೋದು ಧನಾತ್ಮಕ ಆಲೋಚನೆಯಿಂಧ ಅಂತ ಅನ್ಸುತ್ತೆ. 

ಹೀಗೆ ಎಷ್ಟೊಂದು ಮದ್ಯಸಾರ ಪಂಡಿತರು ಹಾಗೂ ಮಾನೋತಜ್ಞರು ಹೇಳುವ ಹಾಗೆ ನಾವು ಕೂಡ ಇದರ ಬಗ್ಗೆ ಜಾಸ್ತಿ ಚರ್ಚೆ ಮಾಡದೆ ಧನಾತ್ಮಕ ಆಲೋಚನೆಯನ್ನು ನಂಬಬೇಕಾಗಿದೆ . ಈಗಿರುವ ಜೀವನ ವಿಧಾನ ಹಾಗೂ ಒತ್ತಡಗಳಿಗೆ ಧನಾತ್ಮಕ ಆಲೋಚನೆ  ಒಂದೇ ಆತನನ್ನು ಹುಚನನ್ನಾಗಿ ಮಾಡದೆ ತಡೆಯಬಹ್ದು ಎನ್ನುವುದು ನನ್ನ ಭಾವನೆ. ಯಾವುದು ಧನಾತ್ಮಕ ಆಲೋಚನೆ ಹಾಗೂ ಯಾವುದು ಅಲ್ಲ ಅನ್ನುವ ತೀರ್ಮಾನ ನಿಮಗೆ ಬಿಟ್ಟಿದ್ದು .  ಈಗ ನನ್ನ ಧನಾತ್ಮಕ ಆಲೋಚನೆ ಏನಂದ್ರೆ ಈ ಬರವಣಿಗೆಯನ್ನು ಜನ ಮೆಚ್ತಾರೆ , ಠೀಕೆ ಮಾಡುವವ್ರು ಮುಂದಿನ ಒಳ್ಳೆ ಭರವಣಿಗೆಗೆ ಸಲಹೆಗಳನ್ನು ಕೊಡ್ತಾರೆ ಅನ್ನೋದು.

ಒಂದು ಮನವಿ
ಬರವಣಿಗೆಯಲ್ಲಿ ಇದು ನನ್ನ ಮೊದಲನೇ ಪ್ರಯೋಗ. ಯಾವುದೇ ತಪ್ಪಿದ್ದರೆ ದಯವಿಟ್ಟು ಮನ್ನಿಸಿ. ಬೆಂಗಳೂರು ಕನ್ನಡಿಗರಿಗೆ ಸಹಾಯವಾಗಲು ಕ್ಲಿಷ್ಟಕರ ಪದಗಳಿಗೆ ಆಂಗ್ಲ ಭಾಷೆಯ ಅರ್ಥವನ್ನು  ಕೊಡಲು ಪ್ರಯತ್ನಿಸಿದ್ದೇನೆ. ಬರವಣಿಗೆಯನ್ನು  ಸುಧಾರಿಸುವ ಯಾವುದೇ ಸಲಹೆ ನಿಮ್ಮಲ್ಲಿ ಇದ್ದರೆ ದಯವಿಟ್ಟು ನೀಡಿ.

ಪ್ರಿಯಾಂಕ್ ರಾವ್